ಕಾಮಿಡಿ ಕಿಲಾಡಿ ಖ್ಯಾತಿಯ ನಟ ಮಡೆನೂರು ಮನುಗೆ ಸಂಬಂಧಿಸಿದ ಒಂದು ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಆಡಿಯೋದಲ್ಲಿ ಮಡೆನೂರು ಮನು ಈ ಮೂವರು ತಾರೆಯರ ಬಗ್ಗೆ ಅತ್ಯಂತ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಕನ್ನಡ ಚಿತ್ರರಂಗದ ದಿಗ್ಗಜರಾದ ಶಿವರಾಜಕುಮಾರ್, ಧ್ರುವ ಸರ್ಜಾ, ಮತ್ತು ದರ್ಶನ್ ಅವರ ಬಗ್ಗೆ ಕೆಟ್ಟದಾಗಿ ಮಾತಾನಾಡಿದ್ದಾರೆ ಎನ್ನಲಾಗಿದೆ. ಆದರೆ, ಈ ಆಡಿಯೋ ನಿಜವೇ, ಅಥವಾ ಕೇವಲ ಗಾಸಿಪ್‌ಗೆ ಸೀಮಿತವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಆಡಿಯೋದ ವಿವರಗಳೇನು?
ವೈರಲ್ ಆಗಿರುವ ಆಡಿಯೋದಲ್ಲಿ ಮಡೆನೂರು ಮನು, “ದರ್ಶನ್ ಸರ್ 6 ವರ್ಷ ಕ್ರೇಜ್ ಇರುತ್ತೆ. ಶಿವರಾಜ್‌ರಾಕುಮಾರ್ ಇನ್ನೊಂದು 6 ವರ್ಷ ಸತ್ತೋಗುತ್ತಾನೆ ರೀ ನನಗೆ ಗೊತ್ತು. ಧ್ರುವ ಸರ್ 8 ವರ್ಷ, ದರ್ಶನ್ ಸತ್ತು ಹೋದ. ಅವ್ರು ಮೂರು ಜನ ಮಧ್ಯೆ ಕಾಂಪಿಟೇಷನ್ ಕೊಡೋಕೆ ನಿಂತಿರೋ ಗಂಡುಗಲಿ ರೀ ನಾನು,” ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಈ ಆಡಿಯೋ ಶಿವರಾಜಕುಮಾರ್, ಧ್ರುವ ಸರ್ಜಾ, ಮತ್ತು ದರ್ಶನ್ ಅವರ ಅಭಿಮಾನಿಗಳನ್ನು ಕೆರಳಿಸಿದೆ. ಈ ಆಡಿಯೋದಿಂದಾಗಿ ಮಡೆನೂರು ಮನು ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕನ್ನಡ ಚಿತ್ರರಂಗದ ದಿಗ್ಗಜರಾದ ಶಿವರಾಜಕುಮಾರ್, ಧ್ರುವ ಸರ್ಜಾ, ಮತ್ತು ದರ್ಶನ್‌ರ ಅಭಿಮಾನಿಗಳು ಈ ಆಡಿಯೋ ಕೇಳಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವರಾಜಕುಮಾರ್‌ರ ಅಭಿಮಾನಿಗಳು, “ಶಿವಣ್ಣನಂತಹ ಒಬ್ಬ ದಿಗ್ಗಜ ನಟನ ಬಗ್ಗೆ ಇಂತಹ ಕೀಳುಮಾತು ಆಡುವ ಧೈರ್ಯ ಮನುಗೆ ಹೇಗೆ ಬಂತು?” ಎಂದು ಪ್ರಶ್ನಿಸಿದ್ದಾರೆ. ಇನ್ನೊಂದೆಡೆ, ದರ್ಶನ್‌ರ ಅಭಿಮಾನಿಗಳು, “ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ ಕ್ರೇಜ್ ಎಂದಿಗೂ ಕಡಿಮೆಯಾಗದು, ಇಂತಹ ಮಾತುಗಳಿಂದ ಅವರಿಗೆ ಯಾವುದೇ ತೊಂದರೆಯಾಗದು,” ಎಂದು ತಿರುಗೇಟು ನೀಡಿದ್ದಾರೆ. ಧ್ರುವ ಸರ್ಜಾ ಅಭಿಮಾನಿಗಳೂ ಸಹ ಈ ಆಡಿಯೋದಿಂದಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಡೆನೂರು ಮನು ಯಾರು?
ಕಾಮಿಡಿ ಕಿಲಾಡಿ ಎಂಬ ಜನಪ್ರಿಯ ರಿಯಾಲಿಟಿ ಶೋ ಮೂಲಕ ಖ್ಯಾತಿಗಳಿಸಿದ ಮಡೆನೂರು ಮನು, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ. ಆದರೆ, ಈ ಆಡಿಯೋ ವಿವಾದದಿಂದಾಗಿ ಅವರ ಜನಪ್ರಿಯತೆಗೆ ಧಕ್ಕೆ ಉಂಟಾಗಬಹುದು ಎಂಬ ಆತಂಕವೂ ಇದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಶಿವರಾಜಕುಮಾರ್, ಧ್ರುವ ಸರ್ಜಾ, ಅಥವಾ ದರ್ಶನ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ, ಅವರ ಅಭಿಮಾನಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಮಡೆನೂರು ಮನು ವಿರುದ್ಧ ಕಾನೂನಾತ್ಮಕ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.