‘ತಿಥಿ’ ಫ್ಲೇವರ್ ‘ಕಂದೀಲು’ಗೆ ರಾಷ್ಟ್ರ ಪ್ರಶಸ್ತಿ.. ಇದು 3ನೇ ಸಾಹಸ

ಹೆಣ ಕಥೆ ಆಧಾರಿತ ಚಿತ್ರ.. ಮಡಿಕೇರಿ ಹೆಣ್ಣು ಯಶೋದ ಕನಸು..!

Untitled design 2025 08 02t182050.610

ಕನ್ನಡದ ಕಂದೀಲು ಸಿನಿಮಾಗೆ ರಾಷ್ಟ್ರ ಪ್ರಶಸ್ತಿಯ ಗರಿ. ಯೆಸ್.. ಮೂರನೇ ಬಾರಿ ಅಂಥದ್ದೊಂದು ಸಾಹಸ ಮಾಡಿದ್ದಾರೆ ಅಪ್ಪಟ ಕನ್ನಡತಿ. ಇಷ್ಟಕ್ಕೂ ಕಂದೀಲು ಚಿತ್ರದ ಕಥೆ ಏನು..? ಡೈರೆಕ್ಟರ್ ಯಾರು..? ಪ್ರೇಕ್ಷಕರ ಮುಂದೆ ಯಾವಾಗ ಬರುತ್ತೆ ಅಂತೀರಾ..? ಈ ಸ್ಟೋರಿ ನೋಡಿ.

ಬೆಂಗಳೂರು ಫಿಲ್ಮ್ ಫೆಸ್ಟಿವಲ್‌‌ನಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿ ಕೂಡ ಪಡೆದಿದ್ದಂತಹ ಕಂದೀಲು ಸಿನಿಮಾ ಇದೀಗ 2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಪ್ರಶಸ್ತಿಗೆ ಭಾಜನವಾಗಿದೆ. ಯೆಸ್.. ಕೇಂದ್ರ ಸರ್ಕಾರದ ವಾರ್ತಾ & ಪ್ರಸಾರ ಸಚಿವಾಲಯದಿಂದ 71ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಪಟ್ಟಿ ಪ್ರಕಟಗೊಂಡಿದೆ. ಅದರಲ್ಲಿ ಈ ಬಾರಿ ಚಂದನವನದದ ಕಂದೀಲು ಬೆಸ್ಟ್ ಕನ್ನಡ ಸಿನಿಮಾ ಅನಿಸಿಕೊಂಡಿದೆ.

ದಿ ರೇ ಆಫ್ ಹೋಪ್ ಅನ್ನೋ ಅಡಿಬರಹ ಹೊಂದಿರೋ ಈ ಸಿನಿಮಾ, ನಾಗೇಶ್ ಎನ್ ಬರೆದಿರೋ ಅನಾಮಿಕ & ಇತರ ಕಥೆಗಳು ಅನ್ನೋ ಕಥಾಸಂಕಲನದಿಂದ ಆಯ್ದ ಕಥೆಯಾಗಿದೆ. ಅದರಲ್ಲೂ ಹೆಣ ಅನ್ನೋ ಕಥೆಯನ್ನ ಆಧರಿಸಿ ಕಂದೀಲು ಚಿತ್ರವನ್ನು ತಯಾರಿಸಲಾಗಿದೆ. ಭರವಸೆಯ ಕಿರಣ ಅನ್ನೋ ಅಡಿಬರಹದ ಈ ಸಿನಿಮಾ ಬೆತ್ತಲೆ ಸಮಾಜದ ಸತ್ಯಕಥೆಯನ್ನ ಹೇಳುವ ಪ್ರಯತ್ನ ಮಾಡಿದೆ. ಮಡಿಕೇರಿ ಮೂಲದ ಯಶೋದ ಪ್ರಕಾಶ್ ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಪತಿ ಪ್ರಕಾಶ್ ಕಾರಿಯಪ್ಪ ಅವರೇ ಬಂಡವಾಳ ಹೂಡಿದ್ದಾರೆ.

ತಿಥಿ ಸಿನಿಮಾದ ರೀತಿ ಹಳ್ಳಿಯೊಂದರಲ್ಲಿ ಕ್ಯಾನ್‌ಡಿಡ್‌ ಆಗಿ ಚಿತ್ರಿಸಿರೋ ಈ ಚಿತ್ರದ ದೃಶ್ಯಾವಳಿಗಳು ಬಹಳ ಸಹಜ ಹಾಗೂ ಸ್ವಾಭಾವಿಕವಾಗಿವೆ. ಅಲ್ಲದೆ, ಅಲ್ಲಿನ ಆಚಾರ, ವಿಚಾರ, ಸಂಸ್ಕೃತಿ, ನಂಬಿಕೆ, ಹೆಣ, ಕೋಳಿ ಹೀಗೆ ಸಾಕಷ್ಟು ವಿಷಯಗಳ ಮೇಲೆ ಚಿತ್ರ ಬೆಳಕು ಚೆಲ್ಲಿದೆ. ನ್ಯಾಷನಲ್ ಅವಾರ್ಡ್‌ ಅನೌನ್ಸ್ ಆದ ಖುಷಿಯಲ್ಲಿರೋ ಡೈರೆಕ್ಟರ್ ಯಶೋದ ಹಾಗೂ ಪ್ರಕಾಶ್ ಸದ್ಯದಲ್ಲೇ ಕಂದೀಲು ಚಿತ್ರವನ್ನು ಕನ್ನಡಿಗರಿಗೆ ಥಿಯೇಟರ್‌ ಮೂಲಕ ತೋರಿಸುವ ಧಾವಂತದಲ್ಲಿದ್ದಾರೆ. 1982ರಲ್ಲಿ 30ನೇ ನ್ಯಾಷನಲ್ ಅವಾರ್ಡ್ಸ್ ಪಟ್ಟಿಯಲ್ಲಿ ಫಣಿಯಮ್ಮ ಡೈರೆಕ್ಟರ್ ಕಮ್ ಪ್ರೊಡ್ಯೂಸರ್ ಪ್ರೇಮಾ ಕಾರಂತ್ ಹಾಗೂ 2003ರ 51ನೇ ನ್ಯಾಷನಲ್ ಅವಾರ್ಡ್ ಪಟ್ಟಿಯಲ್ಲಿ ಪ್ರೀತಿ ಪ್ರೇಮ ಪ್ರಣಯ ಚಿತ್ರದ ನಿರ್ದೇಶಕಿ, ನಿರ್ಮಾಪಕಿ ಕವಿತಾ ಲಂಕೇಶ್ ಬಳಿಕ ಮೂರನೇ ಬಾರಿ ಕನ್ನಡದ ಹೆಣ್ಣು ಮಗಳು ಇಂಥದ್ದೊಂದು ಸಾಹಸ ಮಾಡಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version