ಕಿರೀಟಿ ನಟನೆಯ ಚೊಚ್ಚಲ ಸಿನಿಮಾ ಇದೇ ತಿಂಗಳ 18ರಂದು ತೆರೆಗೆ ಬರ್ತಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ತನ್ನ ಕಂಟೆಂಟ್ ಮೂಲಕ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ನಿನ್ನೆ ಚಿತ್ರತಂಡ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಜೂನಿಯರ್ ಪ್ರೀ ರಿಲೀಸ್ ಇವೆಂಟ್ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ವಿಶೇಷ ಅತಿಥಿಯಾಗಿ ಆಗಮಿಸಿ, ಕಿರೀಟಿ ಚಿತ್ರಕ್ಕೆ ಸಪೋರ್ಟ್ ಕೊಟ್ಟರು. ಜನಾರ್ದನ ರೆಡ್ಡಿ, ನಟಿ ಜೆನಿಲಿಯಾ ಡಿಸೋಜಾ, ರವಿಚಂದ್ರನ್, ಶ್ರೀಲೀಲಾ ಇನ್ನೂ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚಿತ್ರದ ಕುರಿತು ತಾರಾಬಳಗ ಮಾಹಿತಿ ಹಂಚಿಕೊಂಡಿದೆ.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಶಿವಣ್ಣ ಮಾತನಾಡಿ, ನಾನು ಮಾಧುರಿ ದೀಕ್ಷಿತ್ ಅಭಿಮಾನಿ ಈಗ ಶ್ರೀಲೀಲಾ ಅಭಿಮಾನಿ ಆಗಿದ್ದೀನಿ. ‘ಕಿರೀಟಿಯ ಡ್ಯಾನ್ಸ್ ನೋಡಿದರೆ ಅಪ್ಪು ಡ್ಯಾನ್ಸ್ ನೋಡಿದಂತೆ ಅನಿಸುತ್ತದೆ. ಅವರಿಗೆ ಒಳ್ಳೆಯದಾಗಲಿ. ಇವರಿಬ್ಬರು ಜೂನಿಯರ್ ಅಲ್ಲ..ಸೂಪರ್ ಸೀನಿಯರ್. ನಟ ರವಿಚಂದ್ರನ್ ಹಾಗೂ ನನ್ನದು ಎರಡು ದೇಹ ಒಂದೇ ಆತ್ಮ. ನಿರ್ದೇಶಕರು ಅವರ ಕೆಲಸ ಮಾಡಿದ್ದಾರೆ. ದೇವಿಶ್ರೀ ಪ್ರಸಾದ್ ಬಗ್ಗೆ ಮಾತನಾಡುವ ಆಗಿಲ್ಲ. ಇದು ನನ್ನ ಕುಟುಂಬ ಸಿನಿಮಾ ನೋಡುತ್ತೇನೆ ಎಂದು ಹೇಳಿದರು.
ರವಿಚಂದ್ರನ್ ಮಾತನಾಡಿ, ಶಿವ ಇರುವಾಗ ನನಗೆ ಏಕೆ ಭಯ. ಇವತ್ತು ಎಮೋಷನಲ್ ಅನಿಸುತ್ತದೆ. ಈ ಸಿನಿಮಾ ಅಪ್ಪನ ಕನಸು. ಇದು ತೆರೆಹಿಂದಿನ ಕಥೆ. ಆನ್ ಸ್ಕ್ರೀನ್ ನನ್ನ ಜೂನಿಯರ್. ನನ್ನ ಕನಸು. ಈ ಸಿನಿಮಾ ಮೂರು ವರ್ಷದ ಜರ್ನಿ. ಅಷ್ಟು ಸಿಂಪಲ್ ಆಗಿ ನಡೆದ ಸಿನಿಮಾವಲ್ಲ. ಪ್ರತಿ ಕುಟುಂಬದಲ್ಲಿ ನಡೆದ ಎಮೋಷನ್, ನೋವು ಇದೆ. ಈ ಸಿನಿಮಾವನ್ನು ಮೊನ್ನೆ ಪತ್ನಿ ಜೊತೆ ನೋಡಿದೆ. ಈ ಚಿತ್ರ ನೋಡಿದಾಗ ಮಾಣಿಕ್ಯ ನೆನಪಾಯ್ತು. ನಾನು ಈ ಚಿತ್ರದಲ್ಲಿ ತಂದೆ ರೋಲ್ ಪ್ಲೇ ಮಾಡಿದ್ದೇನೆ. ಈ ಚಿತ್ರ ಆಕಾಶದಷ್ಟು ಎತ್ತರಕ್ಕೆ ಬೆಳೆಯಲಿ. ತಂದೆ ಮಗನ ಎಮೋಷನ್ ಈ ಚಿತ್ರ ಮೂಲಕ ತಲುಪುತ್ತದೆ. ಈ ಚಿತ್ರ ಕಣ್ಣೀರು ಹಾಕುತ್ತದೆ. ಕಿರೀಟಿ ನೂರಷ್ಟು ಎಫರ್ಟ್ ಹಾಕಿದ್ದಾನೆ. ಎಂದಿಗೂ ಜನಾರ್ಧನ ರೆಡ್ಡಿ ಮಗ ತರ ವರ್ತನೆ ಮಾಡಿಲ್ಲ. ಅವನು ತನ್ನ ಪಾತ್ರದಲ್ಲಿ ಜೀವಿಸಿದ್ದಾನೆ ಎಂದು ಹೇಳಿದರು.





