ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತೆಲುಗು ಚಿತ್ರರಂಗದ ದಿಗ್ಗಜ ನಟ ಜೂನಿಯರ್ ಎನ್‌ಟಿಆರ್ ತಮ್ಮ ಪತ್ನಿ ಪ್ರಣತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಕಾಂತಾರ ಚಾಪ್ಟರ್-1 ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದಲ್ಲಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯವರ ಮನೆಗೆ ಎನ್‌ಟಿಆರ್ ಭೇಟಿ ನೀಡಿದ್ದಾರೆ.
ರಿಷಬ್ ಶೆಟ್ಟಿಯವರು ಆಯೋಜಿಸಿದ್ದ ಔತಣಕೂಟದಲ್ಲಿ ಎನ್‌ಟಿಆರ್ ದಂಪತಿ ಭಾಗವಹಿಸಿದ್ದು, ರಿಷಬ್‌ರವರ ಮನೆಯಲ್ಲಿ ರುಚಿಕರವಾದ ಮೀನೂಟವನ್ನು ಸವಿದರು. ಈ ಸಂದರ್ಭದಲ್ಲಿ ರಿಷಬ್‌ರವರು ಎನ್‌ಟಿಆರ್‌ರನ್ನು ತಮ್ಮ ಸ್ವಂತ ಸಹೋದರನಂತೆ ಕಾಣುವಷ್ಟು ಆತ್ಮೀಯತೆಯಿಂದ ಆತಿಥ್ಯ ನೀಡಿದರು.
ಎನ್‌ಟಿಆರ್ ತಾಯಿ ಶಾಲಿನಿ ನಂದಮೂರಿ ಮೂಲತಃ ಕುಂದಾಪುರದವರು. ಹೀಗಾಗಿ ಕರ್ನಾಟಕದ ಕರಾವಳಿ ಭಾಗದೊಂದಿಗೆ ಈ ಕುಟುಂಬದ ಒಡನಾಟ ಬಹು ಹಳೆಯದು. ಈ ಹಿನ್ನೆಲೆಯಲ್ಲೇ ರಿಷಬ್ ಶೆಟ್ಟಿ ಮತ್ತು ಜೂನಿಯರ್ ಎನ್‌ಟಿಆರ್ ನಡುವಿನ ಸ್ನೇಹವೂ ವಿಶೇಷವಾಗಿ ಬೆಳೆಯಿತು.
ಕಾಂತಾರ ಚಿತ್ರದ ಯಶಸ್ಸಿನ ಬಗ್ಗೆ ಎನ್‌ಟಿಆರ್ ತಮ್ಮ ಮೆಚ್ಚುಗೆಯನ್ನು ಈ ಹಿಂದೆಯೇ ವ್ಯಕ್ತಪಡಿಸಿದ್ದರು. ಹೈದರಾಬಾದ್‌ನಲ್ಲಿ ನಡೆದ ಕಾಂತಾರ ಇವೆಂಟ್‌ಗೆ ಎನ್‌ಟಿಆರ್ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ರಿಷಬ್ ಅವರ ವ್ಯಕ್ತಿತ್ವ, ಪ್ರತಿಭೆ, ಮತ್ತು ಕಾಂತಾರ ಚಿತ್ರದ ಸಾಧನೆಯನ್ನು ಎನ್‌ಟಿಆರ್ ಕೊಂಡಾಡಿದ್ದರು. ಚಿತ್ರ ಬಿಡುಗಡೆಯಾದ ನಂತರವೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, “ಭೇಷ್!” ಎಂದು ರಿಷಬ್ ಅವರ ಕೆಲಸವನ್ನು ಶ್ಲಾಘಿಸಿದ್ದ ಆರ್‌ಆರ್‌ಆರ್ ಸ್ಟಾರ್, ರಿಷಬ್‌ರವರ ಕಲಾತ್ಮಕ ಕೌಶಲ್ಯಕ್ಕೆ ಮನಸೋತಿದ್ದರು.
ಕಳೆದ ವರ್ಷ ‘ಕಾಂತಾರ’ ಶೂಟಿಂಗ್ ಸಮಯದಲ್ಲಿ ಎನ್‌ಟಿಆರ್ ಉಡುಪಿಗೆ ಭೇಟಿ ನೀಡಿದ್ದರು. ತಮ್ಮ ತಾಯಿ ಶಾಲಿನಿ ಮತ್ತು ಪತ್ನಿ ಪ್ರಣತಿಯೊಂದಿಗೆ ಕುಂದಾಪುರಕ್ಕೆ ಆಗಮಿಸಿದ್ದರು. ಅವರ ತಾಯಿಯ ಕನಸಾದ ಉಡುಪಿ ಶ್ರೀಕೃಷ್ಣ ದೇವಸ್ಥಾನದ ದರ್ಶನವನ್ನು ನೆರವೇರಿಸಿದರು.
