ಕೆಜಿಎಫ್, ಕಾಂತಾರ, ಸಲಾರ್ ಅಂತಹ ಮೈಲಿಗಲ್ಲು ಸಿನಿಮಾಗಳನ್ನ ನೀಡಿದ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಇದೀಗ ಮಹಾವತಾರ ಪರಶುರಾಮ್ ಚಿತ್ರ ಅನೌನ್ಸ್ ಮಾಡಿದೆ. ಅದಕ್ಕೆ ಪುಷ್ಠಿ ನೀಡುವಂತೆ ರಾಕಿಂಗ್ ಸ್ಟಾರ್ ಯಶ್ ಪರಶುರಾಮನ ಅವತಾರದಲ್ಲಿರೋ ಪೋಸ್ಟರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ.
ಇತ್ತೀಚೆಗೆ ಪರಶುರಾಮ ಜಯಂತಿಯನ್ನ ಆಚರಿಸಲಾಯಿತು. ಅದೇ ಶುಭ ಸಂದರ್ಭದಲ್ಲಿ ಹೊಂಬಾಳೆ ಫಿಲ್ಮ್ಸ್‌ನಿಂದ ಮತ್ತೊಂದು ಅದ್ಧೂರಿ ಚಿತ್ರದ ಘೋಷಣೆಯಾಗಿದೆ. ಅದೇ ಮಹಾವತಾರ ಪರಶುರಾಮ. ಯೆಸ್.. ಭಾರತೀಯ ಚಿತ್ರರಂಗದ ಸುಪ್ರಸಿದ್ಧ ನಿರ್ಮಾಣ ಸಂಸ್ಥೆ ಅನಿಸಿಕೊಂಡಿರೋ ಹೊಂಬಾಳೆ ಫಿಲ್ಮ್ಸ್, ಡಿವೈನ್ ಸಾಗಾ ಮಹಾವತಾರ ಪರಶುರಾಮ ಚಿತ್ರ ಅಫಿಶಿಯಲಿ ಅನೌನ್ಸ್ ಮಾಡಿದ್ದು, ಪುರಾಣಗಳ ಪರಶುರಾಮನ ಮಹಿಮೆಯನ್ನ ಬೆಳ್ಳಿತೆರೆಗೆ ತರುವ ಧಾವಂತದಲ್ಲಿದೆ.
ಯಶ್ ಪರಶುರಾಮನ ಅವತಾರ.. ಏನಿದು ಸರ್‌ಪ್ರೈಸ್..?
ಹೊಂಬಾಳೆ ಬತ್ತಳಿಕೆಯಿಂದ ಮತ್ತೊಂದು ಡಿವೈನ್ ಸಾಗಾ
ರಾಜಕುಮಾರ, ಕೆಜಿಎಫ್, ಕಾಂತಾರ, ಸಲಾರ್ ಹಾಗೂ ಇತ್ತೀಚೆಗೆ ಬ್ಲಾಕ್ ಬಸ್ಟರ್ ಹಿಟ್ ಆದಂತಹ ಮಹಾವತಾರ ನರಸಿಂಹ ಸಿನಿಮಾಗಳಿಂದ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ ಹೊಂಬಾಳೆ ಫಿಲ್ಮ್ಸ್. ಈಗ ತನ್ನ ಯಶಸ್ಸಿನ ಪಯಣದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ ಹೊಂಬಾಳೆ. ಅಶ್ವಿನ್ ಕುಮಾರ್ ನಿರ್ದೇಶನದಲ್ಲಿ ಹಾಗೂ ಕ್ಲೀಂ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ಈ ಪೌರಾಣಿಕ ಕಥೆಯನ್ನು ತೆರೆಗೆ ತರುತ್ತಿದೆ. ಇದು ಹೊಂಬಾಳೆ ಫಿಲ್ಮ್ಸ್ ರೂಪಿಸಿರುವ ಮಹಾವತಾರ ಸಿನಿಮಾಟಿಕ್ ಯುನಿವರ್ಸ್ನ ಒಂದು ಪ್ರಮುಖ ಭಾಗವೂ ಹೌದು.
ಅತ್ಯಾಧುನಿಕ ಅನಿಮ್ಯಾಟಿಕ್ ತಂತ್ರಜ್ಞಾನದ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಪೀಳಿಗೆಗೆ ದೃಶ್ಯ ವೈಭವದಂತೆ ಉಣಬಡಿಸಲು ಸಜ್ಜಾಗಿದೆ. ಈ ಘೋಷಣೆಯು ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸುವ ಮುನ್ಸೂಚನೆ ನೀಡಿದೆ ಹೊಂಬಾಳೆ. ಯಾಕಂದ್ರೆ ಮಹಾವತಾರ ನರಸಿಂಹ ಸಿನಿಮಾ ಆಸ್ಕರ್ ಅಂಗಳದ ವರೆಗೂ ತಲುಪಿದ್ದನ್ನ ನಾವು ನೋಡಿದ್ವಿ. ಕೇವಲ 40 ಕೋಟಿಯಲ್ಲಿ ತಯಾರಾದ ಆ ಚಿತ್ರ 325 ಕೋಟಿ ಗಳಿಸಿ, ಎಲ್ಲರ ಹುಬ್ಬೇರಿಸಿತ್ತು.
ಆಸ್ಕರ್ ಅಂಗಳಕ್ಕೆ ಕಾಲಿಟ್ಟಿತ್ತು ‘ಮಹಾವತಾರ ನರಸಿಂಹ’
ಅನಿಮೇಟೆಡ್ ಆದ್ರೂ 325 ಕೋಟಿ ಗಳಿಸಿ ಹುಬ್ಬೇರಿಸಿತ್ತು
ಇದಕ್ಕೆ ಪೂರಕವಾಗಿ ಈಗ ಯಶ್ ಪರಶುರಾಮನ ಅವತಾರದಲ್ಲಿರೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ದಟ್ಟವಾಗಿ ಹರಿದಾಡ್ತಿವೆ. ಒಂದು ವೇಳೆ ಆ ಟೈಟಲ್ ರೋಲ್‌ಗೆ ಯಶ್ ಮುಖಚರ್ಯೆ ಬಳಸಿದ್ರೆ ಸಿನಿಮಾ ಕನಿಷ್ಟ ಸಾವಿರ ಕೋಟಿ ಗಳಿಸೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ ಸನಾತನ ಧರ್ಮದ ಮೂಲ ಬೇರುಗಳನ್ನ ಹೊಂದಿರೋ ನಮ್ಮ ಭಾರತ ಅಕ್ಷರಶಃ ಹಿಂದೂ ರಾಷ್ಟ್ರ. ಡಿವೈನ್ ಫೀಲ್ ಇರೋ ಕಾರಣಕ್ಕೆ ಅದು ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಕನೆಕ್ಟ್ ಆಗಲಿದೆ. ಅಲ್ಲದೆ ಕನ್ನಡದ ಜೊತೆ ಭಾರತದ ಪ್ರಮುಖ ಭಾಷೆಗಳಿಗೂ ಇದು ಡಬ್ ಆಗಲಿದೆ.
ಸದ್ಯ ಯಶ್ ರಾಮಾಯಣದಲ್ಲಿ ರಾವಣನಾಗಿ ಅಬ್ಬರಿಸಿ ಆರ್ಭಟಿಸಲಿದ್ದು, ಸಿಂಗಲ್ ಟೀಸರ್‌ನಿಂದಲೇ ಅತೀವ ನಿರೀಕ್ಷೆ ಮೂಡಿಸಿದ್ದಾರೆ. ಪರಶುರಾಮನ ಪಾತ್ರಕ್ಕೆ ಅವರು ಹೇಳಿ ಮಾಡಿಸಿದಂತಿರಲಿದ್ದು, ಹೊಂಬಾಳೆ ಇದನ್ನ ಸೀರಿಯಸ್ ಆಗಿ ಪರಿಗಣಿಸಿ, ಯಶ್‌ರನ್ನೇ ಈ ಅನಿಮೇಟೆಡ್ ಮೂವಿಯಲ್ಲಿ ಬಳಸುತ್ತಾ ಅನ್ನೋದನ್ನ ನಿರೀಕ್ಷಿಸಬೇಕಿದೆ.
