ಸಿನಿಮಾವೊಂದರ ವಿಚಾರಕ್ಕಾಗಿ ನಮ್ಮ ಕನ್ನಡದ ನಿರ್ಮಾಪಕರಿಗೆ ತಮಿಳು ಸೂಪರ್ ಸ್ಟಾರ್ ಒಬ್ರು ಬರೋಬ್ಬರಿ 300 ಕೋಟಿ ರೂಪಾಯಿ ಉಂಡೆನಾಮ ಹಾಕಿದ್ದಾರೆ. ಬಾಲಯ್ಯನ ಭರವಂತ್ ಕೇಸರಿ ಸಿನಿಮಾನೇ ಬಟ್ಟಿ ಇಳಿಸಿರೋ ದಳಪತಿ ವಿಜಯ್ ಹಾಗೂ ವಿನೋದ್, ನೂರಾರು ಕೋಟಿ ಹಣ ಸುರಿದ ಅನ್ನದಾತನನ್ನೇ ಬಲಿ ಕಾ ಬಕ್ರಾ ಮಾಡಿದ್ದಾರೆ.
ಜನ ನಾಯಗನ್.. ಜನ ನಾಯಗನ್.. ಜನ ನಾಯಗನ್.. ಓ ಮೈ ಗಾಡ್. ಈ ಸಿನಿಮಾಗೆ ಕೊಟ್ಟ ಹೈಪ್, ಬಿಲ್ಡಪ್ ಇತ್ತೀಚಿನ ದಿನಗಳಲ್ಲಿ ಬೇರಾವ ಇಂಡಿಯನ್ ಸಿನಿಮಾಗೂ ಕೊಟ್ಟಿಲ್ಲ. ಅದಕ್ಕೆ ಕಾರಣ ಇದು ದಳಪತಿ ವಿಜಯ್ ಕಟ್ಟ ಕಡೆಯ ಸಿನಿಮಾ ಅನ್ನೋದು. ಯೆಸ್.. ತಮಿಳುನಾಡು ಸ್ಟೇಟ್ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟಿರೋ ವಿಜಯ್, ಸಿಎಂ ಆಗೋಕೆ ತಮ್ಮ ಸಿನಿಮಾ ಕರಿಯರ್‌ನೇ ಬಲಿ ಕೊಡ್ತಿದ್ದಾರೆ. ಆ ಭರದಲ್ಲಿ ನಮ್ಮ ಕನ್ನಡದ ನಿರ್ಮಾಪಕರನ್ನ ಕೂಡ ಬಲಿ ಕೊಡೋಕೆ ಮುಂದಾಗಿದ್ದಾರೆ.
ಕನ್ನಡಿಗನಿಗೆ ತಮಿಳು ನಟ 300 ಕೋಟಿ ಉಂಡೆನಾಮ..?
ಅತಿಯಾಗಿ ನಂಬಿದ್ದ ಕನ್ನಡದ KVN ಪ್ರೊಡಕ್ಷನ್ಸ್ ಸಂಸ್ಥೆ..!
ಬಾಲಯ್ಯನ ಭಗವಂತ್ ಕೇಸರಿಯೇ ಜನ ನಾಯಗನ್..!
ಇದು ಇದೇ ಜನವರಿ 9ಕ್ಕೆ ವರ್ಲ್ಡ್‌ವೈಡ್ ರಿಲೀಸ್ ಆಗ್ತಿರೋ ಜನ ನಾಯಗನ್ ಚಿತ್ರದ ಟ್ರೈಲರ್ ಝಲಕ್. ಇತ್ತೀಚೆಗೆ ಈ ಟ್ರೈಲರ್ ವಿಡಿಯೋ ರಿಲೀಸ್ ಆಗಿದ್ದು, ಇದು ರಿವೀಲ್ ಆಗೋ ವರೆಗೂ ಯಾರಿಗೂ ಗೊತ್ತಿಲ್ಲ ಇದೊಂದು ರಿಮೇಕ್ ಸಿನಿಮಾ ಅಂತ. ಪಕ್ಕದ ಟಾಲಿವುಡ್‌ನಲ್ಲಿ ನಂದಮೂರಿ ಬಾಲಕೃಷ್ಣ ನಟಿಸಿದ್ದ ಭಗವಂತ್ ಕೇಸರಿ ಸಿನಿಮಾನ ಯಥಾವತ್ ಬಟ್ಟಿ ಇಳಿಸೋ ಕಾರ್ಯಕ್ರಮ ಮಾಡಿದ್ದಾರೆ ದಳಪತಿ ವಿಜಯ್ ಹಾಗೂ ಅದ್ರ ನಿರ್ದೇಶಕ ವಿನೋದ್.
68 ಸಿನಿಮಾಗಳನ್ನ ಮಾಡಿ, ತಾನೇ ನೆಕ್ಸ್ಟ್ ತಲೈವಾ ಅಂತ ಮೆರೆಯುತ್ತಿದ್ದ ಸೂಪರ್ ಸ್ಟಾರ್ ವಿಜಯ್, ತಮ್ಮ ಕೊನೆಯ ಸಿನಿಮಾನ ರಿಮೇಕ್ ಮಾಡುವ ಅವಶ್ಯಕೆ ಆದ್ರೂ ಏನಿತ್ತು ಅನ್ನೋ ಪ್ರಶ್ನೆಗಳು ಎಲ್ಲೆಡೆ ಮೂಡುತ್ತಿವೆ. ಅಷ್ಟೇ ಅಲ್ಲ, ಈಗಾಗ್ಲೇ ಎಲ್ಲರೂ ನೋಡಿರೋ ಕಥೆಯನ್ನೇ ಫ್ರೇಮ್ ಟು ಫ್ರೇಮ್ ರಿಮೇಕ್ ಮಾಡಿರೋದು ದೊಡ್ಡ ದುರಂತ. ಅದಕ್ಕಾಗಿ ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಸುರಿದಿರೋದು ಹತ್ತೋ ಇಪ್ಪತ್ತೋ ಐವತ್ತೂ ನೂರೋ ಅಲ್ಲ.. ಬರೋಬ್ಬರಿ 300 ಕೋಟಿ ರೂಪಾಯಿ.
ಹೌದು.. ದಳಪತಿಯ ಕಟ್ಟ ಕಡೆಯ ಸಿನಿಮಾ ಆಗಿರೋ ಈ ಜನ ನಾಯಗನ್‌ಗೆ ನಮ್ಮ ಕನ್ನಡದ ನಿರ್ಮಾಪಕ ಕೆ ವೆಂಕಟ್ ನಾರಾಯಣ್ ಅವರೇ ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ಬಂಡವಾಳ ಹೂಡಿದ್ದಾರೆ. ಆದ್ರೆ ಅವರಿಗೆ ಇದು ಈಗಾಗ್ಲೇ ರಿಲೀಸ್ ಆಗಿರೋ ಬಾಲಯ್ಯನ ಭಗವಂತ್ ಕೇಸರಿ ಚಿತ್ರದ ರಿಮೇಕ್ ಅನ್ನೋದನ್ನ ಹೇಳದೆ 300 ಕೋಟಿ ರೂಪಾಯಿ ಉಂಡೆನಾಮ ಹಾಕುವ ಕಾರ್ಯ ಮಾಡಿದ್ದಾರೆ ವಿಜಯ್.
ಫ್ರೇಮ್ ಟು ಫ್ರೇಮ್ ಬಟ್ಟಿ ಇಳಿಸಿದ ದಳಪತಿ ವಿಜಯ್
ತಮಿಳುನಾಡು CM ಆಗೋ ಭರದಲ್ಲಿ ಕೊನೆ ಚಿತ್ರ ರಿಮೇಕ್
ಜನ ನಾಯಗನ್ ಟ್ರೈಲರ್ ತಮಿಳಿನ ಜೊತೆ ತೆಲುಗು ಭಾಷೆಯಲ್ಲಿ ಕೂಡ ಬಿಡುಗಡೆ ಆಗಿದ್ದು, ತೆಲುಗು ಇಂಡಸ್ಟ್ರಿಯ ಕಥೆಯನ್ನೇ ರಿಮೇಕ್ ಮಾಡಿ, ಅಲ್ಲಿನವರಿಗೆ ತೋರಿಸುವ ಮೂಲಕ ಜನ ಹೀಯಾಳಿಸುವಂತೆ ಮಾಡಿಕೊಂಡಿದ್ದಾರೆ ವಿಜಯ್. ಮಗಳು, ಮಿಲಿಟರಿ, ಹೀರೋ ಬಳಸುವ ವೆಪನ್ಸ್.. ಹೀಗೆ ಒಂದಾ ಎರಡಾ..? ಎಲ್ಲವೂ ಸೇಮ್ ಟು ಸೇಮ್ ಭರವಂತ್ ಕೇಸರಿಯಂತೆಯೇ ಇದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಎರಡೂ ಸಿನಿಮಾಗಳನ್ನ ಹೋಲಿಸಿ ಪೋಸ್ಟ್‌ಗಳು ತಯಾರಾಗ್ತಿವೆ. ಟ್ರೋಲ್ ಜೊತೆ ಸಾಕಷ್ಟು ಮೀಮ್ಸ್ ಕೂಡ ಆಗ್ತಿವೆ.
ಪೂಜಾ ಹೆಗಡೆ, ಬಾಬಿ ಡಿಯೋಲ್ ಅಂತಹ ಕಲಾವಿದರನ್ನ ಇಟ್ಕೊಂಡು ವಿಜಯ್ ಹೀಗೆ ಎಲ್ಲರನ್ನೂ ಮೋಸ ಮಾಡುವ ಕಥೆಗೆ ಗ್ರೀನ್ ಸಿಗ್ನಲ್ ಕೊಡ್ತಾರೆ ಅಂತ ಯಾರೂ ಊಹಿಸಿರಲಿಲ್ಲ. ನಮ್ಮ ಕನ್ನಡದ ಪ್ರಕಾಶ್ ರೈ, ಪ್ರಿಯಾಮಣಿ, ತೆಲುಗಿನ ಸುನಿಲ್.. ಹೀಗೆ ಬಹುದೊಡ್ಡ ತಾತಾಗಣ ಜನ ನಾಯಗನ್ ಚಿತ್ರಕ್ಕಿದೆ. ಅನಿರುದ್ದ್ ರವಿಚಂದರ್ ಸಂಗೀತ ಚಿತ್ರಕ್ಕಿದ್ದು, ಇಲ್ಲಿಯ ತನಕ ರಿಲೀಸ್ ಆಗಿರೋ ಹಾಡುಗಳು ಕೂಡ ಸದ್ದು ಮಾಡದೇ ಇರೋದು ಮತ್ತೊಂದು ದುರಂತ.
ಕರೂರ್ ಕಾಲ್ತುಳಿತ ಪ್ರಕರಣದ ಹಿನ್ನೆಲೆ ವಿಜಯ್‌ಗೆ ಜನ ನಾಯಗನ್ ಆಡಿಯೋ ಲಾಂಚ್ ಫಂಕ್ಷನ್ ಮಾಡೋಕೆ ಸರ್ಕಾರ ತಮಿಳುನಾಡಿನಲ್ಲಿ ಅವಕಾಶ ನೀಡಲಿಲ್ಲ. ಹಾಗಾಗಿ ನಿರ್ಮಾಪಕರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಮಲೇಷ್ಯಾದಲ್ಲಿ ಒಂದು ದೊಡ್ಡ ಸ್ಟೇಡಿಯಂ ಬುಕ್ ಮಾಡಿ, ಲಕ್ಷಾಂತರ ಮಂದಿಯನ್ನ ಸೇರಿಸಿ ಇವೆಂಟ್ ಮಾಡಿದ್ರು. ಅದು ಬೇರೆ ನಮ್ಮ ಕನ್ನಡದ ನಿರ್ಮಾಪಕರಿಗೆ ಎಕ್ಸ್ಟ್ರಾ ಹೊರೆಯಾಗಿದ್ದು ಸುಳ್ಳಲ್ಲ.
ಕಬಾಲಿ ಸೇರಿದಂತೆ ಅದೆಷ್ಟೋ ಸಿನಿಮಾಗಳ ನಿರ್ಮಾಪಕರು ಹಾಗೂ ಡಿಸ್ಟ್ರಿಬ್ಯೂಟರ್‌ಗಳಿಗೆ ತಲೈವಾ ರಜನೀಕಾಂತ್ ಅವರೇ ನಷ್ಟವನ್ನು ತುಂಬಿಕೊಟ್ಟಿದ್ರು. ಇನ್ ಕೇಸ್ ಈ ಜನ ನಾಯಗನ್ ಪ್ರೇಕ್ಷಕರಿಗೆ ರುಚಿಸಲಿಲ್ಲ ಅಂದ್ರೆ ದಳಪತಿ ವಿಜಯ್ ಕೂಡ ರಜನಿ ತರಹ ದೊಡ್ಡ ವ್ಯಕ್ತಿ ಅನಿಸಿಕೊಳ್ತಾರಾ ಅನ್ನೋದನ್ನ ನಿರೀಕ್ಷಿಸಬೇಕಿದೆ.
