ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಕನ್ನಡ ಚಿತ್ರರಂಗ ಪೈರಸಿ ಕಾಟಕ್ಕೆ ನಲುಗುತ್ತಿದೆ. ಚಿತ್ರದ ಫಸ್ಟ್ ಶೋ ರಿಲೀಸ್ ಆಗಿದ್ದೇ ತಡ, ಸಂಜೆ ಹೊತ್ತಿಗೆ ಚಿತ್ರದ ಲಿಂಕ್ ಆನ್ಲೈನ್ ನಲ್ಲಿ ಸೋರಿಕೆ ಆಗಿಬಿಡುತ್ತೆ. ಇದ್ದರಿಂದ ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆತ ಬೀಳ್ತಿದೆ. ಈ ಬಗ್ಗೆ ಕಿಚ್ಚ ಯುದ್ಧಕ್ಕೆ ಸಿದ್ದ ಎಂದು ಪೈರಸಿ ತಡೆಯೋಕೆ ಕರೆ ನೀಡಿದ್ರು. ಇದೀಗ ಜಗ್ಗೇಶ್ ಕೂಡ ಧ್ವನಿ ಎತ್ತಿದ್ದು ಇದು ಸ್ಯಾಂಡಲ್ ವುಡ್ ನಲ್ಲಿ ಹಾಟ್ ಟಾಪಿಕ್ ಆಗಿದೆ.

ಇತ್ತೀಚೆಗೆ ನಟ ಸುದೀಪ್ ಪೈರಸಿ ವಿರುದ್ಧ ಯುದ್ಧ ಮಾಡುತ್ತೇವೆ ಎಂದಿದ್ದರು. ಅದು ದೊಡ್ಡದಾಗಿ ಚರ್ಚೆ ಹುಟ್ಟಾಕ್ಕಿತ್ತು.ಇದೀಗ ನಟ ಜಗ್ಗೇಶ್ ಸಿನಿಮಾ ಪೈರಸಿ ಮಾಡುವ ಕಿಡಿಗೇಡಿ ಒಬ್ಬನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಹೌದು, ಜಗ್ಗೇಶ್ ಸಹೋದರ ಕೋಮಲ್ ನಟಿಸಿರುವ ‘ಕೋಣ’ ಚಿತ್ರವನ್ನು ಪೈರಸಿ ಮಾಡಿದ್ದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಜಗ್ಗೇಶ್ ಈ ಪೈರಸಿಯನ್ನು ತೀವ್ರವಾಗಿ ಖಂಡಿಸಿ ಇದು ಕೊಲೆ ಹಾಗೂ ದರೋಡೆಗೆ ಸಮಾನವೆಂದು ಹೇಳಿದ್ದಾರೆ.
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್
ಜಗ್ಗೇಶ್ ಬಲೆಗೆ ಪೈರಸಿದಾರ.. ಠಾಣೆಯಲ್ಲಿ ದೂರುದಾರ..!
‘ಕೋಣ’ ಚಿತ್ರವು ಇತ್ತೀಚೆಗೆ ಬಿಡುಗಡೆಯಾಗಿದ್ದು, ಆನ್‌ಲೈನ್‌ನಲ್ಲಿ ಅಕ್ರಮವಾಗಿ ಹರಡಲು ಪ್ರಾರಂಭವಾಗಿತ್ತು. ಇದನ್ನು ಗಮನಿಸಿದ ಜಗ್ಗೇಶ್ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ತಕ್ಷಣ ಕ್ರಮ ಕೈಗೊಂಡು, ತಾಂತ್ರಿಕ ಸಹಾಯದೊಂದಿಗೆ ಪೈರಸಿ ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಈ ಬಂಧನದ ನಂತರ ಜಗ್ಗೇಶ್ ಫೇಸ್‌ಬುಕ್ ಲೈವ್ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಲೈವ್ ವೀಡಿಯೋದಲ್ಲಿ ಮಾತನಾಡಿದ ಜಗ್ಗೇಶ್, ಸಿನಿಮಾ ಪೈರಸಿ ಮಾಡೋದು ನಿರ್ಮಾಪಕನನ್ನು ಕೊಲೆ ಮಾಡಿದಂತೆ. ಇದು ದರೋಡೆಗೆ ಸಮಾನವಾದ ಅಪರಾಧ. ಚಿತ್ರರಂಗದಲ್ಲಿ ಕಷ್ಟಪಟ್ಟು ಕೆಲಸ ಮಾಡುವವರ ಜೀವನವನ್ನು ನಾಶಮಾಡುವಂತಹದ್ದು ಎಂದು ಆಕ್ರೋಶ ಹೊರಹಾಕಿದರು.ಅಲ್ಲದೆ, ಪೈರಸಿ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕನ್ನಡ ಸಿನಿಮಾಗಳನ್ನ ನಾಶ ಮಾಡುತ್ತಿದೆ ಪೈರಸಿ ಭೂತ
ಕನ್ನಡ ಚಿತ್ರರಂಗಕ್ಕೆ ಆಗ್ತಿರೋ ಅನ್ಯಾಯ ನಿಲ್ಲಿಸಿ..!
ನಟ ಸುದೀಪ್ ಮೊದಲು ಪೈರಸಿ ಬಗ್ಗೆ ಧ್ವನಿ ಎತ್ತಿದ್ದರು, ಇದೀಗ ಜಗ್ಗೇಶ್ ಅವರೂ ಧ್ವನಿಗೂಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಎಂದು ಆಗಾಗ ಚರ್ಚೆ ಆಗ್ತಿರುತ್ತೆ ಆದ್ರೆ ಕನ್ನಡ ಸಿನಿಮಾಗಳಿಗೆ ತೊಂದ್ರೆ ಆದ್ರೆ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ತೋರಿಸಿಕೊಟ್ಟಿದ್ದಾರೆ ನಮ್ಮ ಕಲಾವಿದರು.
ಸದ್ಯ ಈ ಘಟನೆಯು ಕನ್ನಡ ಚಿತ್ರರಂಗದಲ್ಲಿ ಪೈರಸಿ ಸಮಸ್ಯೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಅನೇಕ ನಟರು ಮತ್ತು ನಿರ್ಮಾಪಕರು ಪೈರಸಿ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಜಗ್ಗೇಶ್ ನಡೆ ಇತರರಿಗೆ ಪ್ರೇರಣೆಯಾಗಿದೆ. ಈ ಘಟನೆಯು ಚಿತ್ರರಂಗದ ಹಿತರಕ್ಷಣೆಗಾಗಿ ಪೈರಸಿ ವಿರುದ್ಧ ಹೋರಾಡುವ ಮಹತ್ವವನ್ನು ತೋರಿಸುತ್ತದೆ. ಜಗ್ಗೇಶ್ ಅವರಂತಹ ಕಲಾವಿದರು ಮುಂದೆ ಬಂದು ಧ್ವನಿ ಎತ್ತುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.





