ತುಳು ಹಾಗೂ ಜವಾರಿ ಭಾಷೆಯಲ್ಲಿ ಹಾಲಿವುಡ್‌ ಸಿನಿಮಾಗಳ ಹವಾ.!

ಕನ್ನಡಿಗರ 'ಟಾಕೀಸ್' ಆ್ಯಪ್ ಓಟಿಟಿಯಿಂದ ಹೊಸ ಇತಿಹಾಸ

Untitled design 2026 01 13T093459.718

ಡಿಜಿಟಲ್‌ ಮನೋರಂಜನೆಯ ಹೊಸ ಅಧ್ಯಾಯವನ್ನು ಟಾಕೀಸ್ ಆ್ಯಪ್ ಓಟಿಟಿ ಬರೆದಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾಲಿವುಡ್‌ ಸಿನಿಮಾಗಳು ತುಳು ಭಾಷೆಯಲ್ಲಿ ಡಬ್‌ ಆಗಿ ಪ್ರೇಕ್ಷಕರಿಗೆ ಲಭ್ಯವಾಗುತ್ತಿದ್ದು, ಜೊತೆಗೆ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲೂ ಹಾಲಿವುಡ್‌ ಚಿತ್ರಗಳನ್ನು ಪ್ರಸಾರ ಮಾಡುವ ಮಹತ್ವದ ಪ್ರಯತ್ನ ಪ್ರಾರಂಭವಾಗಿದೆ. ಪ್ರಾದೇಶಿಕ ಭಾಷೆಗಳ ಗೌರವ ಮತ್ತು ವ್ಯಾಪ್ತಿಯನ್ನು ವಿಸ್ತರಿಸುವ ಈ ಕಾರ್ಯವನ್ನು ಟಾಕೀಸ್ ಆ್ಯಪ್ – ಸೋನಿ ಪಿಕ್ಚರ್ಸ್ ಫಿಲ್ಮಸ್ ಅವರ ಸಹಯೋಗದಲ್ಲಿ ಯಶಸ್ವಿಯಾಗಿ ಮುನ್ನಡೆಸುತ್ತಿದೆ. ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಸಿನಿಮಾ ನೋಡಿ ಆನಂದಿಸಬೇಕೆನ್ನುವ ವೀಕ್ಷಕರಿಗೆ ಇದೊಂದು ಸಿಹಿ‌ ಸುದ್ದಿ ಎಂಬುದು ಸಂಸ್ಥೆಯ ಅನಿಸಿಕೆ.

ಇದು ಭಾರತದಲ್ಲಿ ಆಮೇಜಾನ್ ಪ್ರೈಮ್, ನೆಟ್ ಫ್ಲಿಕ್ಸ್, ಜೀಯೋ ಹಾಟ್ ಸ್ಟಾರ್ ನಂತರ ನಾಲ್ಕನೇ ಒಟಿಟಿಯಾಗಿ ಹಾಲಿವುಡ್‌ ಚಿತ್ರಗಳನ್ನು ಸ್ಥಳೀಯ ಭಾಷೆಯಲ್ಲಿ ಪ್ರದರ್ಶಿಸುವ ವೇದಿಕೆಯಾಗಿ ಟಾಕೀಸ್ ಆ್ಯಪ್ ಹೆಸರಾಗಿದೆ. ವಿಶೇಷವೇನೆಂದರೆ ಪ್ರಥಮ ಬಾರಿಗೆ ತುಳು ಮತ್ತು ಜವಾರಿ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಈ ಪ್ರಯತ್ನಕ್ಕೆ ತುಳುವಿನಲ್ಲಿ ಅಸ್ತ್ರ ಪ್ರೋಡಕ್ಷನ್ ಹಾಗೂ ಸಿಟಡೆಲ್ ಡೆವಲಪರ್ಸ್ ಪ್ರಾಯೋಜಕರಾಗಿ ಜೊತೆಯಾದರೆ, ಜವಾರಿ ಭಾಷೆಗೆ ಮಂಗಳಮ್ ಪೈಪ್ಸ್ ಜೊತೆಯಾಗಿದ್ದಾರೆ.
ಸ್ಪೈಡರ್ ಮ್ಯಾನ್, ಗಾಡ್ಜಿಲ್ಲ, ಕರಾಟೆ ಕಿಡ್, ಅನಕೊಂಡ, ಮೆನ್ ಇನ್ ಬ್ಲಾಕ್ ಸೇರಿದಂತೆ ಹಲವು ಸಿನಿಮಾಗಳು ದೇಸಿ ಭಾಷೆಯಲ್ಲಿ ಲಭ್ಯವಾಗಲಿದೆ.

ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರಿಂದ ಲೋಕಾರ್ಪಣೆಗೊಂಡ ಟಾಕೀಸ್ ಆ್ಯಪ್ ಕರಾವಳಿಯ, ಕನ್ನಡದ ಮತ್ತು ಇತರೆ ಪ್ರಾದೇಶಿಕ ಕಲಾವಿದರಿಗೊಂದು ದೊಡ್ಡ ಡಿಜಿಟಲ್ ವೇದಿಕೆಯಾಗಿ ಅವಕಾಶ ಕಲ್ಪಿಸಿದೆ. ಸಿನಿಮಾಗಳು, ವೆಬ್‌ ಸೀರಿಸ್‌, ಕಿರುಚಿತ್ರಗಳು, ಕಾರ್ಟೂನ್ ಶೋಗಳು, ಕಾಮಿಡಿ, ಡ್ರಾಮಾ ರಿಯಾಲಿಟಿ ಶೋಗಳು ಮತ್ತು ಟಾಕೀಸ್ ಕಿಚನ್ ಮುಂತಾದ ವಿಭಿನ್ನ ಕಾರ್ಯಕ್ರಮಗಳ ಜತೆಗೆ ಈಗ ವಿಶ್ವ ಸಿನಿಮಾವನ್ನು ‘ಸ್ವಂತ ಭಾಷೆಯಲ್ಲಿ’ ನೋಡಬಹುದಾದ ವೇದಿಕೆ ಒದಗಿಸಿದೆ ಟಾಕೀಸ್ ಆ್ಯಪ್.

ಪ್ರಾದೇಶಿಕ ಭಾಷೆಗಳ ವೈಭವವನ್ನು ಜಾಗತಿಕ ತಾಣಕ್ಕೆ ತಲುಪಿಸುವಲ್ಲಿ ಇದು ಕೇವಲ ತಂತ್ರಜ್ಞಾನ ಪ್ರಗತಿ ಅಲ್ಲ, ಸಂಸ್ಕೃತಿ ಸಂರಕ್ಷಣೆಯ ಮೌಲ್ಯಯುತ ಹೆಜ್ಜೆ. “ಭಾಷೆ ಬದುಕಿದಾಗ ಸಂಸ್ಕೃತಿ ಬಾಳುತ್ತದೆ” ಎಂಬ ನಂಬಿಕೆಗೆ ಟಾಕೀಸ್ ಆ್ಯಪ್ ಪ್ರಾಯೋಗಿಕ ಸಾಕ್ಷಿಯಾಗಿದೆ.

Exit mobile version