ಹಾಲಿವುಡ್ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಬಹು ನಿರೀಕ್ಷಿತ ಸಿನಿಮಾ ‘ದಿ ಆಡಸ್ಸಿ’ (The Odyssey) ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಜುಲೈ 17ರಂದು ಬಿಡುಗಡೆಯಾದ ಈ ಚಿತ್ರ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಮಟ್ಟದ ಗಳಿಕೆ ಮಾಡುವ ಮೂಲಕ ಸಿನಿಪ್ರಿಯರ ಗಮನ ಸೆಳೆದಿದೆ. ಬಿಡುಗಡೆಯ ಮುನ್ನವೇ ಈ ಸಿನಿಮಾದ ಟಿಕೆಟ್ಗಳಿಗೆ ಅಪಾರ ಬೇಡಿಕೆ ವ್ಯಕ್ತವಾಗಿದ್ದು, ಕೆಲವು ವಿಶೇಷ ಪ್ರದರ್ಶನಗಳ ಟಿಕೆಟ್ಗಳು ಒಂದು ವರ್ಷ ಮುಂಚೆಯೇ ಮಾರಾಟವಾಗಿದ್ದವು ಎಂಬ ವರದಿಗಳು ಚರ್ಚೆಗೆ ಕಾರಣವಾಗಿದ್ದವು.
ಮ್ಯಾಟ್ ಡೇಮನ್, ಟಾಮ್ ಹಾಲೆಂಡ್, ಅನ್ನಾ ಹಾಥ್ವೇ, ಜೆಂಡೆಯಾ ಸೇರಿದಂತೆ ಅನೇಕ ಹಾಲಿವುಡ್ ಸೂಪರ್ಸ್ಟಾರ್ಗಳು ನಟಿಸಿರುವ ಈ ಚಿತ್ರಕ್ಕೆ ವಿಶ್ವದಾದ್ಯಂತ ಅದ್ಭುತ ಪ್ರತಿಕ್ರಿಯೆ ದೊರೆತಿದೆ. ಮೊದಲ ದಿನವೇ ಸಿನಿಮಾ ಸುಮಾರು 50 ಮಿಲಿಯನ್ ಡಾಲರ್ (ಸುಮಾರು ₹481 ಕೋಟಿ) ಗಳಿಕೆ ಮಾಡಿ ನೋಲನ್ ಅವರ ವೃತ್ತಿಜೀವನದ ಅತಿದೊಡ್ಡ ಓಪನಿಂಗ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತದಲ್ಲಿಯೂ ‘ದಿ ಆಡಸ್ಸಿ’ಗೆ ಭರ್ಜರಿ ಸ್ವಾಗತ ಸಿಕ್ಕಿದೆ. ದೇಶದ ಪ್ರಮುಖ ನಗರಗಳ ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯಾದ ಈ ಚಿತ್ರ ಮೊದಲ ದಿನವೇ ಸುಮಾರು ₹17.40 ಕೋಟಿ ಗಳಿಕೆ ಮಾಡಿದೆ. ಅಡ್ವಾನ್ಸ್ ಬುಕ್ಕಿಂಗ್ ಮೊತ್ತವನ್ನು ಸೇರಿಸಿದರೆ ಮೊದಲ ದಿನದ ಒಟ್ಟು ಗಳಿಕೆ ಸುಮಾರು ₹20 ಕೋಟಿ ತಲುಪಿದೆ. ಹೀಗಾಗಿ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಅತ್ಯುತ್ತಮ ಆರಂಭ ಪಡೆದ ಹಾಲಿವುಡ್ ಚಿತ್ರಗಳ ಪಟ್ಟಿಯಲ್ಲಿ ‘ದಿ ಆಡಸ್ಸಿ’ ಸ್ಥಾನ ಪಡೆದಿದೆ.
ಚಿತ್ರವು ಇಂಗ್ಲಿಷ್ ಜೊತೆಗೆ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಬಿಡುಗಡೆಯಾಗಿದೆ. ಇಂಗ್ಲಿಷ್ ಆವೃತ್ತಿಯೇ ಅತಿ ಹೆಚ್ಚು ಗಳಿಕೆ ಮಾಡಿದ್ದು, ಸುಮಾರು ₹13.75 ಕೋಟಿ ಸಂಗ್ರಹಿಸಿದೆ. ಹಿಂದಿ ಆವೃತ್ತಿ ಸುಮಾರು ₹2 ಕೋಟಿ, ತೆಲುಗು ₹1.10 ಕೋಟಿ ಹಾಗೂ ತಮಿಳು ಆವೃತ್ತಿ ₹65 ಲಕ್ಷ ಗಳಿಕೆ ದಾಖಲಿಸಿದೆ.
ಭಾರತದಲ್ಲಿ ‘ಅವತಾರ್’, ‘ಅವೇಂಜರ್ಸ್’, ‘ಅವೆಂಜರ್ಸ್: ಎಂಡ್ಗೇಮ್’ ಮತ್ತು ‘ಡೆಡ್ಪೂಲ್ & ವುಲ್ವರಿನ್’ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿದ್ದವು. ಇದೀಗ ಆ ಪಟ್ಟಿಗೆ ‘ದಿ ಆಡಸ್ಸಿ’ ಕೂಡ ಸೇರ್ಪಡೆಯಾಗಿದೆ. ಸಿನಿ ತಜ್ಞರ ಪ್ರಕಾರ, ಉತ್ತಮ ವಿಮರ್ಶೆಗಳು ಮತ್ತು ಪ್ರೇಕ್ಷಕರ ಮೆಚ್ಚುಗೆ ಮುಂದುವರಿದರೆ ಈ ಸಿನಿಮಾ ಮುಂದಿನ ವಾರಾಂತ್ಯದಲ್ಲಿ ಇನ್ನಷ್ಟು ದೊಡ್ಡ ದಾಖಲೆಗಳನ್ನು ನಿರ್ಮಿಸುವ ಸಾಧ್ಯತೆ ಇದೆ.
