‘ಗುಮ್ಮಡಿ ನರಸಯ್ಯ’ ಚಿತ್ರದ ಮುಹೂರ್ತಕ್ಕೆ ಚಾಲನೆ: ಗುಮ್ಮಡಿ ಕುಟುಂಬ ಭೇಟಿಯಾದ ಶಿವಣ್ಣ

Untitled design 2025 12 06T130729.478

ಶಿವಣ್ಣ ನಟನೆಯ ಗುಮ್ಮಡಿ ನರಸಯ್ಯ ಸಿನಿಮಾದ ಮುಹೂರ್ತ ಸಮಾರಂಭ ಇಂದು ಅದ್ದೂರಿಯಾಗಿ ನೆರವೇರಿತು.. ಹಿರಿಯ ಮುತ್ಸದಿ, ಸರಳ ಸಜ್ಜನಿಕೆಯ ರಾಜಕಾರಣಿ ಆಗಿರೋ ಗುಮ್ಮಡಿ ನರಸಯ್ಯರ ಹುಟ್ಟೂರಾದ ಪಲ್ವಂಚಾದಲ್ಲಿ ಕಾರ್ಯಕ್ರಮ ನಡೆಯಿತು.. ಕಾರ್ಯಕ್ರಮದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದ ಶಿವಣ್ಣ ದಂಪತಿಯನ್ನು ಸ್ವಾಗತಿಸಲು ಇಡೀ ಊರಿಗೆ ಊರೇ ಜಮಾಯಿಸಿತ್ತು.. ಇನ್ನೂ ಸಿನಿಮಾಗೆ ಕ್ಲ್ಯಾಪ್ ಮಾಡುವ ಮೂಲಕ ಗೀತಾ ಶಿವರಾಜ್ ಕುಮಾರ್ ಸಿನಿಮಾಗೆ ಚಾಲನೆ ನೀಡಿದ್ರು..

ಗುಮ್ಮಡಿ ಕುಟುಂಬ ಭೇಟಿಯಾದ ಶಿವಣ್ಣ

ಆಂಧ್ರದ ಸರಳ, ಸಜ್ಜನಿಕೆಯ ರಾಜಕಾರಣಿ ಗುಮ್ಮಡಿ ನರಸಯ್ಯ ಕುರಿತು ಬಯೋಪಿಕ್ ಬರಲಿದೆ ಅನ್ನೋ ಮಾತುಗಳು ತುಂಬಾ ವರ್ಷಗಳಿಂದ ಕೇಳಿ ಬರ್ತಿತ್ತು.. ಆದರೆ ಸಿನಿಮಾ ಟೇಕಾಫ್ ಆಗಲು ತಡವಾಗಿತ್ತು.. ಆರಂಭದಲ್ಲಿ ತಮ್ಮ‌ ಜೀವನದ ಕಥೆಯೇ ಸಿನಿಮಾ ಆಗಿ ಬರಲಿದೆ ಅನ್ನೋ ವಿಚಾರ ಕೇಳಿದಾಗ ಗುಮ್ಮಡಿ ನರಸಯ್ಯ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ.. ಆದರೆ ತಮ್ಮ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸ್ತಿದ್ದಾರೆ.. ಅಲ್ಲದೇ ನೈಜ ಘಟನೆಗಳನ್ನೇ ಸಿನಿಮಾದಲ್ಲಿ ತೋರಿಸುತ್ತೇವೆಂದು ಚಿತ್ರತಂಡ ಒಪ್ಪಿಕೊಂಡ ಬಳಿಕ ಸಿನಿಮಾ ತಂಡದ ಜೊತೆಯಾಗಿ ನಿಂತರು ಗುಮ್ಮಡಿ ನರಸಯ್ಯ.. ಈ ಮಧ್ಯೆ ಸಿನಿಮಾದ ಮುಹೂರ್ತಕ್ಕೂ ಮುಂಚಿನವಾಗಿ ಸರಳತೆ, ನ್ಯಾಯಪರ ದನಿಯಾಗಿರೋ ಗುಮ್ಮಡಿ ನರಸಯ್ಯ ಕುಟುಂಬವನ್ನು ಶಿವಣ್ಣ ದಂಪತಿ ಭೇಟಿಯಾಗಿದ್ರು.. ಗುಮ್ಮಡಿ ನರಸಯ್ಯರ ಯೋಗಕ್ಷೇಮ ವಿಚಾರಿಸೋದ್ರ ಜೊತೆಗೆ ಸಿನಿಮಾ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡ್ರು ಶಿವಣ್ಣ.. ಗುಮ್ಮಡಿ ನರಸಯ್ಯ ಬಯೋಪಿಕ್ ಸಿನಿಮಾವನ್ನು ಪ್ರಶಾಂತ್ ಹಿರ್ವಾಲೆ ನಿರ್ದೇಶನ ಮಾಡ್ತಿದ್ದು, ಪ್ರವಲ್ಲಿಕಾ ಆರ್ಟ್ಸ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ.. ಇಷ್ಟರಲ್ಲೇ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ..

ಶಿವಣ್ಣ ನಟನೆಯ ಗುಮ್ಮಡಿ ನರಸಯ್ಯ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌..!

ಕನ್ನಡ ಚಿತ್ರರಂಗದ ಎನರ್ಜಿ ಬೂಸ್ಟರ್‌ ಶಿವಣ್ಣ ತಮ್ಮ ನಟನಾ ವೈವಿಧ್ಯತೆ ಮತ್ತು ಪಾತ್ರಗಳ ಆಯ್ಕೆಗೆ ಹೆಸರುವಾಸಿಯಾಗಿದ್ದಾರೆ. ಈಗ ಶಿವಣ್ಣ ಹೊಸ ಪ್ಯಾನ್‌ ಇಂಡಿಯಾ ಸಿನಿಮಾ ಕೊಡಲು ಸಜ್ಜಾಗುತ್ತಿದ್ದಾರೆ.ಅದುವೆ ಗುಮ್ಮಡಿ ನರಸಯ್ಯ ಎಂಬ ಚಿತ್ರ. ಇದು ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುವುದು ವಿಶೇಷವಾಗಿದೆ.

ಗುಮ್ಮಡಿ ನರಸಯ್ಯ ಅವರು ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯ ಇಲ್ಲಂದು ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವಿಶಿಷ್ಟ ವ್ಯಕ್ತಿತ್ವ. ಸಿ.ಪಿ.ಐ. (ಎಂ.ಎಲ್.-ನ್ಯೂ ಡೆಮಾಕ್ರಸಿ) ಪಕ್ಷದ ಸದಸ್ಯರಾದ ಅವರು ತಮ್ಮ ಸರಳ ಜೀವನಶೈಲಿ ಮತ್ತು ನಿಷ್ಠಾವಂತ ಸೇವೆಗೆ ಹೆಸರುವಾಸಿಯಾಗಿದ್ದಾರೆ. ಅವರ ಜೀವನದ ಹಾದಿ ಸಾಮಾನ್ಯ ರಾಜಕಾರಣಿಗಳಿಂದ ಸಂಪೂರ್ಣ ಭಿನ್ನವಾಗಿದೆ. ಅವರು ಆರಂಭದಲ್ಲಿ ಕಾಲ್ನಡಿಗೆಯಲ್ಲೇ ಹೈದರಾಬಾದ್‌ಗೆ ವಿಧಾನಸಭೆಗೆ ಬರುತ್ತಿದ್ದರು. ನಂತರ ಒಂದು ಸೈಕಲ್‌ ಖರೀದಿಸಿ, ಅದೇ ಸವಾರಿಯಲ್ಲಿ ಅಸೆಂಬ್ಲಿಗೆ ಹಾಜರಾಗಲಾರಂಭಿಸಿದರು. ಶಾಸಕರಾಗಿ ಪಡೆಯುವ ಸಂಬಳವನ್ನೇ ತಮ್ಮ ಪಕ್ಷಕ್ಕೆ ನೀಡಿಬಿಡುತ್ತಿದ್ದ ಇಂಥ ನಿಷ್ಠಾವಂತ ರಾಜಕಾರಣಿ, ತಮ್ಮ ಜೀವಿತಾವಧಿಯಲ್ಲಿ ಒಂದೇ ಒಂದು ಆಸ್ತಿಯನ್ನು ಸಹ ಖರೀದಿಸಿಲ್ಲ. ಇಂದಿಗೂ ಅವರ ಬ್ಯಾಂಕ್‌ ಖಾತೆಯಲ್ಲಿ ಹಣವಿಲ್ಲ ಎಂಬುದು ಅವರ ನಿಷ್ಠಾವಂತ ಮನೋಭಾವವನ್ನು ತೋರಿಸುತ್ತದೆ. ಆಸ್ತಿ,ಹಣ ಗಳಿಸಿಲ್ಲವಾದರೂ ಜನರ ಹೃದಯದಲ್ಲಿ ಕೋಟ್ಯಂತರ ಪ್ರೀತಿ ಮತ್ತು ಅಭಿಮಾನವನ್ನ ಗಳಿಸಿದ್ದಾರೆ.

ಈ ಚಿತ್ರವು ಕೇವಲ ಕನ್ನಡ ಚಿತ್ರವಲ್ಲ, ಬದಲಿಗೆ ಪ್ಯಾನ್‌-ಇಂಡಿಯಾ ಪ್ರಾಜೆಕ್ಟ್‌ ಆಗಿ ನಿರ್ಮಾಣವಾಗಲಿದೆ. ಚಿತ್ರವನ್ನು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಇದು ಶಿವರಾಜ್‌ಕುಮಾರ್‌ ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ಮೈಲಿಗಲ್ಲು. ಚಿತ್ರದ ನಿರ್ಮಾಪಕರು ನ್. ಸುರೇಶ್‌ ರೆಡ್ಡಿ ಮತ್ತು ನಿರ್ದೇಶಕರು ಪರಮೇಶ್ವರ್ ಹಿವರಾಲೆ. ಚಿತ್ರದ ಪೋಸ್ಟರ್‌ ಈಗಾಗಲೇ ಬಿಡುಗಡೆಯಾಗಿದ್ದು, ಅದರಲ್ಲಿ ಶಿವರಾಜ್‌ಕುಮಾರ್‌ ಸಿ.ಪಿ.ಐ. ಬಾವುಟ ಕಟ್ಟಿದ ಸೈಕಲ್‌ ತಳ್ಳಿಕೊಂಡು ವಿಧಾನಸಭೆಯ ಕಡೆ ಹೋಗುತ್ತಿರುವ ದೃಶ್ಯವನ್ನು ಚಿತ್ರಿಸಲಾಗಿದೆ. ಈ ಚಿತ್ರ ಮೂಲಕ ಗುಮ್ಮಡಿ ನರಸಯ್ಯ ಅವರ ಸರಳ, ನಿಷ್ಠಾವಂತ ಮತ್ತು ಜನಕೇಂದ್ರಿತ ರಾಜಕೀಯದ ಸಂದೇಶವನ್ನು ಎಲ್ಲ ಭಾಷೆಯ ಜನರಿಗೆ ಒಯ್ಯಲು ಉದ್ದೇಶಿಸಲಾಗಿದೆ.

ಶಿವರಾಜ್‌ಕುಮಾರ್‌ ಅವರು ತಮ್ಮ ವೃತ್ತಿಜೀವನದಲ್ಲಿ ಈ ರೀತಿಯ ಐತಿಹಾಸಿಕ ಮತ್ತು ಸಮಾಜಿಕ ಪ್ರಾಮುಖ್ಯತೆ ಇರುವ ಪಾತ್ರವನ್ನು ಮಾಡುತ್ತಿರುವುದು ಕನ್ನಡ ಚಿತ್ರರಸಿಕರಿಗೆ ಹೆಮ್ಮೆಯ ವಿಷಯ. ಗುಮ್ಮಡಿ ನರಸಯ್ಯ ಅವರಂತೆ ಜನಸಾಮಾನ್ಯರಿಂದ ಬಂದು, ಜನಸಾಮಾನ್ಯರಲ್ಲೇ ಉಳಿದು ಅವರಿಗಾಗಿ ಸೇವೆ ಸಲ್ಲಿಸಿದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುವುದು ಒಂದು ಸವಾಲಿನ ಕಾರ್ಯ. 

Exit mobile version