ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ (Toxic) ಈಗ ಕೇವಲ ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಚರ್ಚೆಯ ವಿಷಯವಾಗಿದೆ. ಟೀಸರ್ ಬಿಡುಗಡೆಯಾದಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಇದರದ್ದೇ ಹವಾ. ಆದರೆ, ಹವಾ ಜೊತೆಜೊತೆಗೇ ಟೀಸರ್‌ನಲ್ಲಿನ ಒಂದು ದೃಶ್ಯದ ಕುರಿತು ಪರ-ವಿರೋಧ ಚರ್ಚೆಗಳು ಹೆಚ್ಚಾಗುತ್ತಿವೆ.
ಟೀಸರ್‌ನಲ್ಲಿ ಯಶ್ ನಿರ್ವಹಿಸಿರುವ ‘ರಾಯಾ’ ಎಂಬ ಪಾತ್ರವು ಕಾರಿನೊಳಗೆ ನಟಿಯೊಬ್ಬರ ಜೊತೆ ಇರುವ ಇಂಟಿಮೇಟ್ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಹೊರಗಡೆ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ನಡೆಯುತ್ತಿದ್ದರೂ, ಕಾರಿನೊಳಗಿನ ಈ ದೃಶ್ಯವು ಅಶ್ಲೀಲತೆಯಿಂದ ಕೂಡಿದೆ ಎಂದು ಕೆಲವರು ವಾದಿಸುತ್ತಿದ್ದಾರೆ. ಮಹಿಳಾ ಪಾತ್ರವನ್ನು ಕೇವಲ ದೇಹದ ಭಾಗಗಳಾಗಿ ಚಿತ್ರೀಕರಿಸಲಾಗಿದೆ ಮತ್ತು ಇದು ಸ್ತ್ರೀದ್ವೇಷದ ಹಳೆಯ ಪದ್ಧತಿಯನ್ನು ಬಿಂಬಿಸುತ್ತದೆ ಎಂದು ಟ್ರೋಲಿಗರು ಮತ್ತು ಕೆಲವು ನೆಟ್ಟಿಗರು ಟೀಕಿಸಿದ್ದಾರೆ. ಈ ವಿಚಾರವಾಗಿ ಈಗಾಗಲೇ ಸೆನ್ಸಾರ್ ಮಂಡಳಿಗೆ (CBFC) ದೂರು ಕೂಡ ದಾಖಲಾಗಿದೆ.
ಈ ಎಲ್ಲಾ ಟೀಕೆಗಳು ಮತ್ತು ದೂರುಗಳ ಬೆನ್ನಲ್ಲೇ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಮೌನ ಮುರಿದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪರೋಕ್ಷವಾಗಿ ಟೀಕಾಕಾರರಿಗೆ ಉತ್ತರ ನೀಡಿರುವ ಅವರು, ಸ್ತ್ರೀ ಸಂತೋಷ, ಆಕೆಯ ಸಮ್ಮತಿ ಮತ್ತು ವ್ಯವಸ್ಥೆಯ ಜೊತೆ ಆಕೆ ಆಡುವ ಆಟ, ಒಬ್ಬ ಸ್ತ್ರೀಯನ್ನು ಜನರು ಹೀಗೆ ಗುರುತಿಸಿದರೆ ಮಜವಾಗಿರುತ್ತೆ ಎಂದು ಬರೆದುಕೊಂಡಿದ್ದಾರೆ.
ಗೀತು ಅವರ ಈ ಮಾತುಗಳು ಕೇವಲ ದೃಶ್ಯದ ಸಮರ್ಥನೆಯಲ್ಲ, ಬದಲಾಗಿ ಸ್ತ್ರೀ ಪಾತ್ರಗಳನ್ನು ಸಿನಿಮಾದಲ್ಲಿ ಹೇಗೆ ಸ್ವತಂತ್ರವಾಗಿ ತೋರಿಸಬಹುದು ಎಂಬ ಅವರ ದೃಷ್ಟಿಕೋನವನ್ನು ಪ್ರತಿಬಿಂಬಿಸಿವೆ. ಚಿತ್ರದಲ್ಲಿ ಮಹಿಳಾ ಪಾತ್ರವು ಕೇವಲ ವಸ್ತುವಲ್ಲ, ಬದಲಾಗಿ ಆಕೆ ತನ್ನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವ ಸಬಲ ಪಾತ್ರ ಎಂಬುದನ್ನ ಪರೋಕ್ಷವಾಗಿ ನಿರ್ದೇಶಕಿ ಗೀತು ಹೇಳಿದ್ದಾರೆ.
ಟಾಕ್ಸಿಕ್ ಸಿನಿಮಾವು 1980ರ ದಶಕದ ಗೋವಾದಲ್ಲಿ ನಡೆಯುವ ಡಾರ್ಕ್ ಗ್ಯಾಂಗ್‌ಸ್ಟರ್ ಕಥೆಯನ್ನು ಹೊಂದಿದೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರವು ಮಾರ್ಚ್ 19, 2026 ರಂದು ಜಾಗತಿಕವಾಗಿ ತೆರೆಕಾಣಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ನಟ ಯಶ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ರಾಜೀವ್ ರವಿ ಅವರು ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ಸಿನಿಮಾದಲ್ಲಿನ ಕಲೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಚಿತ್ರತಂಡ ಈ ವಿವಾದವನ್ನ ಸೃಷ್ಟಿಸಿದೆ. ಆದರೆ ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ಕುತೂಹಲ ಮಾತ್ರ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ.





