45-50 ವರ್ಷಗಳ ಹಿಂದೆಯೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿ, ಕನ್ನಡದ ಕೀರ್ತಿ ಪತಾಕೆಯನ್ನ ದೇಶದೆಲ್ಲೆಡೆ ಹಾರಿಸಿದವರು ಅಭಿನಯ ಭಾರ್ಗವ ಡಾ ವಿಷ್ಣುವರ್ಧನ್. ಸರಳ, ಸನ್ನಡತೆಯ ಸಾಕಾರಮೂರ್ತಿಯಾಗಿ, ಬದುಕಿನುದ್ದಕ್ಕೂ ಅವಮಾನ, ಅಪಮಾನಗಳ ನೋವುಂಡತ್ತಲೇ ಪ್ರೀತಿ ಹಂಚಿದ ಸಾಹುಕಾರ. ಕನ್ನಡ ಸಂಸ್ಕೃತಿಯ ಆಪ್ತ ರಕ್ಷಕ, ನಾಡು-ನುಡಿಯ ಆಪ್ತಮಿತ್ರ ವಿಷ್ಣುದಾದಾ, ಇನ್ನೆಲ್ಲಾ ಜನ್ಮದಲ್ಲೂ ಇಲ್ಲೇ ಹುಟ್ಟಬೇಕೇ..? ನಮ್ಮನ್ನೇ ಪ್ರೀತಿಸಬೇಕೇ..? ಖಂಡಿತಾ ಬೇಡ. ಯಾಕೆ ಅನ್ನೋದಕ್ಕೆ ಈ ಸ್ಟೋರಿ ನೋಡಿ.
- 80ರ ದಶಕದಲ್ಲೇ ವಿಷ್ಣುದಾದಾ ‘ಪ್ಯಾನ್ ಇಂಡಿಯಾ ಸ್ಟಾರ್..!
- 7 ಸ್ಟೇಟ್ ಅವಾರ್ಡ್ಸ್ ಬಂದ್ರೂ ಪದ್ಮ, ಕರ್ನಾಟಕ ರತ್ನ ಕೊಟ್ಟಿಲ್ಲ
- ಬಾಲಿವುಡ್ ಅಕ್ಷಯ್ ಕುಮಾರ್‌ನ ಕನ್ನಡಕ್ಕೆ ಕರೆತಂದಿದ್ದ ವಿಷ್ಣು
- ಕನ್ನಡಿಗರ ಆಪ್ತಮಿತ್ರ, ಕರುನಾಡ ಆಪ್ತ ರಕ್ಷಕ ಸಂಪತ್ ಕುಮಾರ್
ಮೈಸೂರಿನ ಸಂಪತ್ ಕುಮಾರ್, ಕನ್ನಡ ಚಿತ್ರರಂಗದ ಸಂಪತ್ತು ಆಗ್ತಾರೆ ಅಂತ ಯಾರೂ ಎಂದೂ ಊಹಿಸಿರಲಿಲ್ಲ. 21ನೇ ವಯಸ್ಸಿಗೆ ಚಂದನವನದ ವಂಶವೃಕ್ಷಕ್ಕೆ ಅಡಿಯಿಟ್ಟ ಸ್ಫುರದ್ರೂಪಿ ನಟ ವಿಷ್ಣುವರ್ಧನ್ ಚೊಚ್ಚಲ ಚಿತ್ರ ನಾಗರಹಾವು ಅಲ್ಲ. ಬಿ ವಿ ಕಾರಂತ್ ಹಾಗೂ ಗಿರೀಶ್ ಕಾರ್ನಾಡ್‌ರ ವಂಶವೃಕ್ಷ. ನಂತ್ರ ಬರೋಬ್ಬರಿ ಮೂರೂವರೆ ದಶಕಗಳ ಕಾಲ ಸುದೀರ್ಘ ಕಲಾಸೇವೆ ಮಾಡಿದ ಅಭಿನಯ ಭಾರ್ಗವ, ತಮ್ಮ ಕರಿಯರ್‌ನಲ್ಲಿ ಸುಮಾರು 220ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸ್ತಾರೆ.
2009ರ ಡಿಸೆಂಬರ್ 30ರಂದು ಮೈಸೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಡಾ ವಿಷ್ಣುವರ್ಧನ್ ಇಹಲೋಕ ತ್ಯಜಿಸಿದ್ರು. ಅವರಿಲ್ಲದೆ 16 ವರ್ಷಗಳಾಗಿದೆ. ಇಂದಿಗೂ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಅವರು ಅಜರಾಮರ. ಅವರು ಮಾಡಿದ ಸಿನಿಮಾಗಳು, ಪಾತ್ರಗಳು, ಸಂಪಾದಿಸಿದ ಅಭಿಮಾನಿ ಬಳಗ ಅಂಥದ್ದು. ಎಲ್ಲಕ್ಕಿಂತ ಮಿಗಿಲಾಗಿ ಸದಾ ಸರಳ, ಸಜ್ಜನಿಕೆಯಿಂದ, ಸದ್ಗುಣ ಸಂಪನ್ನನಾಗಿ ಸಮಾಜದ ಗಮನ ಸೆಳೆದ ಸೂಪರ್ ಸ್ಟಾರ್ ಅನಿಸಿಕೊಂಡವರು.
ಯೆಸ್.. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇತ್ತೀಚೆಗೆ ಹುಟ್ಟಿಕೊಂಡಿದೆ. ಆದ್ರೆ 70ರ ದಶಕದಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ವಿಷ್ಣು, 1972ರಲ್ಲಿ ನಾಗರಹಾವು ಚಿತ್ರದ ನಟನೆಗಾಗಿ ಆರಂಭದಲ್ಲೇ ಸ್ಟೇಟ್ ಅವಾರ್ಡ್ ಮುಡಿಗೇರಿಸಿಕೊಳ್ತಾರೆ. 1975ರಲ್ಲೇ ಒಂದೇ ರೂಪ ಎರಡು ಗುಣ ಚಿತ್ರದ ಮೂಲಕ ಡಬಲ್ ರೋಲ್ ಕೂಡ ಮಾಡ್ತಾರೆ. 70ರ ದಶಕದಲ್ಲೇ ನಾಗರಹೊಳೆ ಚಿತ್ರದಿಂದ ಗಾಯಕರಾಗಿಯೂ ಗುರ್ತಿಸಿಕೊಳ್ತಾರೆ.
ಅದೇ 70ರ ದಶಕದಲ್ಲಿ ಪಕ್ಕದ ತಮಿಳು ಚಿತ್ರರಂಗಕ್ಕೂ ಕಾಲಿಟ್ಟು ಅಲೈಗಳ್ ಅನ್ನೋ ಚಿತ್ರದಲ್ಲಿ ಹೀರೋ ಆಗಿ ಮಿಂಚ್ತಾರೆ. 1981ರಲ್ಲಿ ಮಲಯಾಳಂ, 84ರಲ್ಲಿ ಹಿಂದಿ, 87ರಲ್ಲಿ ತೆಲುಗಿಗೂ ಎಂಟ್ರಿ ಕೊಟ್ಟು, 80ರ ದಶಕದಲ್ಲೇ ಪಂಚಭಾಷಾ ಸ್ಟಾರ್ ಆಗಿ ಕಮಾಲ್ ಮಾಡ್ತಾರೆ. ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್‌ನ ಕನ್ನಡಕ್ಕೆ ಕರೆತಂದು ವಿಷ್ಣು-ವಿಜಯ ಸಿನಿಮಾ ಮಾಡ್ತಾರೆ.
ನಾಗರಹಾವು, ಹೊಂಬಿಸಿಲು, ಬಂಧನ, ಲಯನ್ ಜಗಪತಿ ರಾವ್, ಲಾಲಿ, ವೀರಪ್ಪ ನಾಯ್ಕ, ಆಪ್ತರಕ್ಷಕ.. ಹೀಗೆ ಒಮ್ಮೆ ಅಲ್ಲ ಎರಡು ಬಾರಿ ಅಲ್ಲ, ಬರೋಬ್ಬರಿ 7 ಬಾರಿ ರಾಜ್ಯ ಸರ್ಕಾರದಿಂದ ಸ್ಟೇಟ್ ಫಿಲ್ಮ್ ಅವಾರ್ಡ್‌ಗಳನ್ನ ಮುಡಿಗೇರಿಸಿಕೊಳ್ತಾರೆ ವಿಷ್ಣುವರ್ಧನ್. ಆದ್ರೆ ಇಂದಿಗೂ ಕೂಡ ಅವರಿಗೆ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಆಗಲಿ, ಕೇಂದ್ರ ಸರ್ಕಾರ ಪದ್ಮ ಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಆಗಲಿ ನೀಡಿ ಗೌರವಿಸಿಲ್ಲ ಅನ್ನೋದೇ ದುರಂತ.
ನಾಗರಹಾವು, ಗಂಧದಗುಡಿ, ಭೂತಯ್ಯನ ಮಗ ಅಯ್ಯು, ಕಳ್ಳ ಕುಳ್ಳ, ಒಂದು ರೂಪ ಎರಡು ಗುಣ, ಕಿಟ್ಟು ಪುಟ್ಟು.. ಹೀಗೆ ಸಾಕಷ್ಟು ಸಕ್ಸಸ್‌ಫುಲ್ ಚಿತ್ರಗಳಿಂದ ಕನ್ನಡಿಗರ ಮನಸ್ಸು ಗೆದ್ದಿದ್ದ ವಿಷ್ಣುವರ್ಧನ್ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. ಚೆನ್ನೈನಲ್ಲೇ ನೆಲೆಸಿದ್ದ ವಿಷ್ಣುವರ್ಧನ್‌ಗೆ ಅವಕಾಶಗಳಿಲ್ಲದೆ ಮನೆಯಲ್ಲಿ ಬರೋಬ್ಬರಿ 6 ತಿಂಗಳು ಕೈ ಕಟ್ಟಿ ಕೂರುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತಂತೆ. ಭಾರತಿಯನ್ನ ಆಗಷ್ಟೇ ಕಲ್ಯಾಣವಾಗಿದ್ದ ವಿಷ್ಣು, ಆಕೆ ಆಗಲೇ 100 ಸಿನಿಮಾಗಳಲ್ಲಿ ನಟಿಸಿದ್ರೂ ಸಹ, ಚಿತ್ರರಂಗದಿಂದ ಸಣ್ಣದೊಂದು ಬ್ರೇಕ್ ಪಡೆದಿದ್ದ ಭಾರತಿ ಕೂಡ ವಿಷ್ಣುಗೆ ಆರ್ಥಿಕವಾಗಿ ಕೈಜೋಡಿಸಲಾಗಲಿಲ್ಲವಂತೆ.
ತನ್ನ ಬಳಿ ಇದ್ದ ದುಬಾರಿ ಬೆಂಜ್ ಕಾರ್‌ನ ಟ್ರಾವೆಲ್ಸ್‌ಗೆ ನೀಡಿ, ತಾವೇ ಅದ್ರ ಡ್ರೈವರ್ ಆಗಿ ಕೆಲಸ ಮಾಡೋಕೆ ಮನಸ್ಸು ಮಾಡಿದ್ರಂತೆ ವಿಷ್ಣು. ಅದಕ್ಕೆ ಭಾರತಿ ಕೂಡ ಓಕೆ ಅಂದಿದ್ರಂತೆ. ಅಷ್ಟರಲ್ಲೇ, ಸೋಮಸುಂದರ್ ಹಾಗೂ ಸಂಪತ್ ರಾಜ್ ಬಂದು ವಿಷ್ಣು ಅವ್ರ ಮನೆ ಬಾಗಿಲು ಬಡಿದರು. ಹೊಂಬಿಸಿಲು ಚಿತ್ರದಲ್ಲಿ ನೀವೇ ನಟಿಸಬೇಕು ಅಂತ ಮನವಿ ಮಾಡಿದ್ರು. ಅದಕ್ಕೆ ಸ್ಟೇಟ್ ಅವಾರ್ಡ್ ಬಂದದ್ದು ಇತಿಹಾಸ. ಆದ್ರೆ ಅದಕ್ಕೂ ಮುನ್ನ ಬರೋಬ್ಬರಿ ಆರು ತಿಂಗಳ ಕಾಲ ಗಂಜಿ ಕುಡಿದು ಜೀವನ ಸವೆಸಿದ್ದಾರೆ ವಿಷ್ಣುವರ್ಧನ್- ಭಾರತಿ ದಂಪತಿ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ.
ಗಂಧದಗುಡಿ ಸಿನಿಮಾದ ಶೂಟಿಂಗ್ ವೇಳೆ ನಟಸಾರ್ವಭೌಮ ಡಾ. ರಾಜ್‌ಕುಮಾರ್‌ರನ್ನ ಸಾಯಿಸೋಕೆ ಗುಂಡು ಹಾರಿಸಿದ್ರು ವಿಷ್ಣುವರ್ಧನ್ ಅಂತ ಆರೋಪ ಮಾಡಲಾಗಿತ್ತು. ಇದಕ್ಕೆ ಸಾಕಷ್ಟು ಮಂದಿ ಸಾಕಷ್ಟು ಸಲ ಸ್ಪಷ್ಟನೆ ನೀಡಿದ್ರೂ ಸಹ, ಇಂದಿಗೂ ರಾಜ್-ವಿಷ್ಣು ಅಭಿಮಾನಿಗಳ ನಡುವಿನ ಮನಸ್ತಾಪ ಹಾಗೆಯೇ ಉಳಿದಿದೆ. ಹಾಗಂತ ಅಣ್ಣಾವ್ರು-ವಿಷ್ಣು ಮನಸ್ಸಲ್ಲಿ ಆ ಬಗ್ಗೆ ಎಳ್ಳಷ್ಟು ಕೂಡ ಮನಸ್ತಾಪ ಇರಲಿಲ್ಲವಂತೆ.
ವಿಷ್ಣುವರ್ಧನ್‌ರ ತಂದೆ ಅಂತ್ಯಸಂಸ್ಕಾರದ ವೇಳೆ ಕಿಡಿಗೇಡಿಗಳು ಅವರ ಮೇಲೆ ಕಲ್ಲು ತೂರಾಟ ಮಾಡಿ ಅವಮಾನ ಮಾಡಿದ್ರು. ಕಲಾಪಿ ಥಿಯೇಟರ್ ಮುಂದೆ ವಿಷ್ಣುವರ್ಧನ್‌ಗೆ ಕಪಾಳ ಮೋಕ್ಷ ಮಾಡಿ ಮೇರುನಟನಿಗೆ ಅಪಮಾನ ಮಾಡಿದ್ರು. ಆದ್ರೆ ವಿಷ್ಣುವರ್ಧನ್ ಮಾತ್ರ ಎಂದಿಗೂ ಕುಗ್ಗಲಿಲ್ಲ. ತಾನಾಯ್ತು, ತನ್ನ ಕೆಲಸ ಆಯ್ತು ಅಂತ ಕಲಾ ಸೇವೆ ಮಾಡ್ತಾ ಮುಂದುವರೆದರು. ಅದೆಷ್ಟೋ ಮಂದಿ ಅಸಹಾಯಕರ ಪಾಲಿಗೆ ಆಸರೆಯಾದರು.
ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನೇ.. ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ.. ಪ್ರೀತ್ಸೋದು ಎಂದೂ ನಿಮ್ಮನ್ನೇ ಅಂತ ಕಟ್ಟ ಕಡೆಯ ಆಪ್ತ ರಕ್ಷಕ ಚಿತ್ರದಲ್ಲಿ ಅಭಿನಯಿಸಿದ್ರು. ಆದ್ರೆ ಉಳಿದ ಜನ್ಮಗಳಲ್ಲಿ ಕೂಡ ಇಲ್ಲೇ ಯಾಕೆ ಹುಟ್ಟಬೇಕು..? ಕನ್ನಡಿಗರನ್ನೇ ಯಾಕೆ ಪ್ರೀತಿಸಬೇಕು..? ಇಷ್ಟೆಲ್ಲಾ ಸಾಧನೆ ಮಾಡಿ, ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯೋಕೆ ನೀರೆರೆದ ಕಲಾ ಸಂತನಿಗೆ ಆರಡಿ ಮೂರಡಿ ಜಾಗ ಕೊಡದ ವ್ಯವಸ್ಥೆಗೆ ಏನನ್ನಬೇಕು..?
ಮೈಸೂರಿನಲ್ಲಿ ಜೀವ ಬಿಟ್ಟ ಮೇರುನಟನ ಪಾರ್ಥಿವ ಶರೀರ ಬೆಂಗಳೂರಿಗೆ ತಂದಿದ್ಯಾಕೆ..? ತಂದ ಬಳಿಕ ಡಾ. ರಾಜ್‌ಕುಮಾರ್ ಪುಣ್ಯಭೂಮಿ ಕಂಠೀರವದಲ್ಲಿ ಅವರ ಪಕ್ಕದಲ್ಲೇ ವಿಷ್ಣುಗೂ ಆರಡಿ ಮೂರಡಿ ಹಾಗ ಕೊಡದೆ ಸರ್ಕಾರ ಮೀನಾಮೇಷ ಎಣಿಸಿದ್ಯಾಕೆ..? ಆಪ್ತಮಿತ್ರ ಅಂಬರೀಶ್ ಕೂಡ ಈ ವಿಚಾರದಲ್ಲಿ ಏನೂ ಮಾಡಲಾಗಲಿಲ್ಲವೇ..?
ಮಾಜಿ ಸಿಎಂ, ಸೂರ್ಯವಂಶ ಚಿತ್ರದ ನಿರ್ಮಾಪಕರೂ ಆದಂತಹ ಹೆಚ್‌ಡಿ ಕುಮಾರಸ್ವಾಮಿ ಅಂದು ತಪ್ಪು ಮಾಡಿದ್ರಾ..? ಕುಟುಂಬಸ್ಥರು ಚಾಮರಾಜಪೇಟೆ ಅಥ್ವಾ ಬನಶಂಕರಿ ಚಿತಾಗಾರದಲ್ಲಿ ಅಗ್ನಿಸ್ಪರ್ಶ ಮಾಡೋಣ ಅಂದಾಗ, ಭೂಮಿ ತಕರಾರು ಇದ್ದಂತಹ ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ಮಾಡಿಸಿದ್ದು ಯಾರು..? ಮಣ್ಣಲ್ಲಿ ಹಾಕಿದ್ರೆ ಮಾತ್ರ ಸಮಾಧಿಯೇ..? ಅಗ್ನಿ ಸ್ಪರ್ಶ ಮಾಡಿದ್ರೆ ಅದು ಸಮಾಧಿ ಅಗಲ್ಲವೇ..? ಅದು ಪುಣ್ಯಭೂಮಿ ಅಲ್ಲವೇ..? ಅಂದು ತಪ್ಪು ಮಾಡಿದ ಸರ್ಕಾರವೇ ಸರಿ ಮಾಡಬಹುದಿತ್ತಲ್ಲವೇ..?
ಹಿರಿಯ ನಟ ಬಾಲಕೃಷ್ಣ ಕುಟುಂಬದ ಮೊಂಡುತನ, ವಿಷ್ಣು ಕುಟುಂಬಸ್ಥರ ಕೋಪಕ್ಕೆ ಅಭಿಮಾನಿಗಳ ಅಭಿಮಾನ ಮಂಜಂತೆ ಕರಗಿ ಹೋಗಿದೆ. ಮೈಸೂರಲ್ಲಿ ಸ್ಮಾರಕ ಮಾಡಿಸಿಕೊಂಡ ಕುಟುಂಬ ಆರಾಮಿದೆ. ಜಮೀನು ಮಾರಿಕೊಂಡು ಕೋಟ್ಯಂತರ ರೂಪಾಯಿ ಹಣ ಮಾಡಿಕೊಂಡ ಬಾಲಣ್ಣನ ಕುಟುಂಬಸ್ಥರು ಆರಾಮಿದ್ದಾರೆ. ನಮ್ಮ ನೆಚ್ಚಿನ ನಾಯಕನಟ ಅಂತ ನಿಷ್ಕಲ್ಮಶವಾಗಿ ಅವ್ರನ್ನ ಗೌರವಿಸಿ, ಪ್ರೀತಿಸಿ, ಜೈಕಾರ ಹಾಕಿ, ಆರಾಧಿಸ್ತಿರೋ ಅಭಿಮಾನಿಗಳ ಅಭಿಮಾನ ಮಾತ್ರ ಹಾಗೇ ಇದೆ. ಯಾವಾಗ ವಿಷ್ಣು ಅವ್ರ ಸಮಾಧಿ ನೆಲಸಮ ಮಾಡಿ, ಅವಮಾನ ಮಾಡಿದ್ರೋ ಆಗಲೇ ಅವ್ರು ರೂಪ, ಸ್ಥಾವರಗಳನ್ನ ದಾಟಿದ ರೂಪಕವಾದರು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್