ಚೆನ್ನೈನಲ್ಲೂ ತಲೆ ಎತ್ತುತ್ತಿದೆ ಡಾ. ಲೀಲಾವತಿ ಆಸ್ಪತ್ರೆ

ನನಸಾಗದ ಅಮ್ಮನ ಕನಸಿಗೆ ನೀರೆರೆದ ವಿನೋದ್ ರಾಜ್

Untitled design 2025 04 10t164936.123

ಅಭಿನೇತ್ರಿ ಲೀಲಾವತಿ ನೆಲಮಂಗಲದ ಬಳಿ ಒಂದಲ್ಲ ಎರಡೆರಡು ಆಸ್ಪತ್ರೆಗಳನ್ನ ಕಟ್ಟುವ ಮೂಲಕ ಬಡವರು ಹಾಗೂ ಮೂಕ ಪ್ರಾಣಿಗಳ ಪಾಲಿಗೆ ಆಸರೆ ಆಗಿದ್ರು. ಇದೀಗ ಡಾ. ಲೀಲಾವತಿ ಅವರ ನನಸಾಗದ ಕನಸೊಂದನ್ನ ಚೆನ್ನೈನಲ್ಲಿ ನೆರವೇರಿಸುತ್ತಿದ್ದಾರೆ ಮಗ ವಿನೋದ್ ರಾಜ್.

ಬಹುಭಾಷಾ ಅಭಿನೇತ್ರಿ ಡಾ. ಲೀಲಾವತಿ ಅವರ ಕೊನೆಯ ದಿನಗಳು ಬೆಂಗಳೂರಿನ ನೆಲಮಂಗಲದ ಬಳಿ ಇರೋ ಸೋಲದೇವನಹಳ್ಳಿಯ ತೋಟದ ಮನೆ ಆಗಿತ್ತು. ಆದ್ರೆ ಅವ್ರು ಚಿತ್ರರಂಗದಲ್ಲಿ ಪೀಕ್‌‌ನಲ್ಲಿದ್ದಾಗ ಚೆನ್ನೈನಲ್ಲಿ ನೆಲೆಸಿದ್ದರು. ಅಲ್ಲಿಯೂ ಕೂಡ ಕಾರು, ಬಂಗಲೆ, ತೋಟ ಎಲ್ಲವನ್ನೂ ಮಾಡಿದ್ರು. ಸದಾ ಬಡವರು ಹಾಗೂ ಅಸಹಾಯಕರಿಗಾಗಿ ತುಡಿಯುತ್ತಿತ್ತು ಅವರ ಮನ. ಅದ್ರಂತೆ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನ ಮಾಡಿದ್ರು. ಸೋಲದೇವನಹಳ್ಳಿಯ ಸುತ್ತಮುತ್ತಲಿನ ಜನಕ್ಕಾಗಿ ಒಂದು ಆಸ್ಪತ್ರೆ ಹಾಗೂ ಪಶು ಆಸ್ಪತ್ರೆಗಳನ್ನ ಕಟ್ಟಿಸಿದ್ರು ಮಹಾತಾಯಿ.

ಅದರಂತೆ ಆಕೆ ಹೆಚ್ಚಿನ ಕಾಲ ಸಮಯ ಕಳೆದ ಚೆನ್ನೈನಲ್ಲೂ ಬಡವರಿಗಾಗಿ ಒಂದು ಆಸ್ಪತ್ರೆ ಕಟ್ಟಿಸೋ ಮಹದಾಸೆ ಹೊಂದಿದ್ದರು. ಅಷ್ಟರಲ್ಲೇ ವಿಧಿ ಅವರನ್ನ ಕೈಬೀಸಿ ಕರೆದುಬಿಟ್ಟಿತ್ತು. ಆದ್ರೆ ನನಸಾಗದ ಅಮ್ಮನ ಕನಸಿಗೆ ಮಗ ವಿನೋದ್ ರಾಜ್ ನೀರೆರೆಯುತ್ತಿದ್ದಾರೆ. ಆ ಆಸ್ಪತ್ರೆಯನ್ನ ಕಟ್ಟಿಸೋಕೆ ಮುಂದಾಗಿದ್ದು, ಕಟ್ಟಡ ಕಾಮಗಾರಿ ಬಹುತೇಕ ಕಂಪ್ಲೀಟ್ ಆಗಿದೆ.

ಚೆನ್ನೈನ ಪುದುಪ್ಪಾಕಮ್ ವಿಲೇಜ್‌‌ನ OMR ರೋಡ್‌‌‌ನಲ್ಲಿ ಲೀಲಾವತಿ ಅಮ್ಮನವರು ವಾಸವಾಗಿದ್ದರು. ಅಲ್ಲಿ ಈಗ 10 ಬೆಡ್‌‌ಗಳಿರೋ ಪ್ರಾಥಮಿಕ ಅರೋಗ್ಯ ಕೇಂದ್ರ ನಿರ್ಮಿತವಾಗ್ತಿದೆ. ಅತಿ ಬೇಗಾ ಅದು ಉದ್ಘಾಟನೆ ಆಗಲಿದ್ದು, ಪಶು ಆಸ್ಪತ್ರೆ ಕೂಡ ಕಟ್ಟಿಸೋ ಯೋಜನೆಯಲ್ಲಿದ್ದಾರೆ ವಿನೋದ್ ರಾಜ್. ಲೀಲಾವತಿ ಅವರಂತೆ ನಟ ವಿನೋದ್ ರಾಜ್ ಕೂಡ ಸಾಮಾಜಿಕ ಕಾರ್ಯಗಳನ್ನ ಮಾಡ್ತಿರೋದು ನಿಜಕ್ಕೂ ಶ್ಲಾಘನೀಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version