ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶರತ್ ಕೃಷ್ಣ..!

ದರ್ಶನ್ ಪ್ರೇರಣೆ.. ಗೆಳೆಯನ ಅವಮಾನ ದೊಡ್ಮನ್ಸ ಕಥೆ

Untitled design 2026 04 21T164142.066

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಆಟೋ ಅಂದ್ರೆ ಬರೀ ಮೂರು ಚಕ್ರದ ಗಾಡಿಯಲ್ಲ. ಅದು ಕೋಟಿ ಜನರ ಕನಸುಗಳನ್ನ ಹೊತ್ತು ಸಾಗೋ ರಥ. ಖಾಕಿ ಶರ್ಟ್‌‌ನ ಹಿಂದೆ ಒಂದು ದೊಡ್ಡ ಕನಸಿರುತ್ತೆ. ಅವಮಾನವನ್ನೇ ಏಣಿಯನ್ನಾಗಿಸಿಕೊಂಡು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡ್ರೆ ಏನಾಗುತ್ತೆ ಅನ್ನೋದಕ್ಕೆ ಇಲ್ಲಿರೋ ‘ದೊಡ್ಮನ್ಸ’ನೇ ಸಾಕ್ಷಿ. ಅಷ್ಟಕ್ಕೂ ನಾವು ಹೇಳ್ತಿರೋ ಆ ದೊಡ್ಮನ್ಸ ಯಾರು ಅಂತೀರಾ..? ಈ ಸ್ಟೋರಿ ನೋಡಿ.

ಕಲಾವಿದನಿಗೆ ಕಷ್ಟಗಳೇ ಮೆಟ್ಟಿಲು, ಅವಮಾನಗಳೇ ಸಾಧನೆಯ ಹಾದಿಯ ಮೈಲಿಗಲ್ಲು.. ಚಿತ್ರರಂಗದಲ್ಲಿ ಪಳಗಿದ ಕಲಾವಿದನೊಬ್ಬ ಇಂದು ಮೊದಲ ಬಾರಿಗೆ ಹೀರೋ ಕಂ ಡೈರೆಕ್ಟರ್ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಶರತ್ ಕೃಷ್ಣ. ಸಾಮಾನ್ಯವಾಗಿ ರಿಯಲ್ ಲೈಫ್‌ನಲ್ಲಿ ಕಲಾವಿದರಾಗಿರೋ ಶರತ್, ಈ ಸಿನಿಮಾದಲ್ಲಿ ಖಾಕಿ ಶರ್ಟ್ ತೊಟ್ಟು ಆಟೋ ಚಾಲಕನ ಅವತಾರ ಎತ್ತಿದ್ದಾರೆ. ಸ್ನೇಹಿತನಿಂದಾದ ಅವಮಾನವನ್ನು ಸವಾಲಾಗಿ ಸ್ವೀಕರಿಸಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಒಂದು ಪಕ್ಕಾ ಮಾಸ್ ಕಥೆಯನ್ನು ಸಿದ್ಧಪಡಿಸಿದ್ದಾರೆ. ಬೆಳ್ಳಿತೆರೆಯ ಮೇಲೆ ಜನಸಾಮಾನ್ಯರ ಧ್ವನಿಯಾಗಲು ಹೊರಟಿರೋ ಸಿನಿಮಾವೆ ದೊಡ್ಮನ್ಸ. ಸದ್ಯ ಚಿತ್ರದ ಟೀಸರ್ ಬಿಡುಗಡೆ ಆಗಿ ಉತ್ತಮ ರೆಸ್ಪಾನ್ಸ್ ಪಡೆದಿದೆ.

ಬೆಂಗಳೂರಿನ ರಸ್ತೆಯಲ್ಲಿ ಆಟೋ ಓಡಿಸುವ ಜನಸಾಮಾನ್ಯನೊಬ್ಬ ಹೇಗೆ ದೊಡ್ಡ ಮನುಷ್ಯನಾಗುತ್ತಾನೆ ಎಂಬ ಪಕ್ಕಾ ಮಾಸ್ ಎಂಟರ್ಟೈನಿಂಗ್ ಕಥೆಯನ್ನು ಈ ಸಿನಿಮಾ ಹೊತ್ತು ತಂದಿದೆ. ಈ ಮಾಸ್ ಸಿನಿಮಾದಲ್ಲಿ ರೇಷ್ಮಾ ಲಿಂಗರಾಜಪ್ಪ  ನಾಯಕಿಯಾಗಿದ್ರೆ,  ಹುಲಿ ಕಾರ್ತಿಕ್, ಬಲರಾಜವಾಡಿ ಮತ್ತು ಶಿಲ್ಪಾ ಕಲಾವಿದರ ದಂಡೇ ಇದೆ. ಶರತ್ ಕೃಷ್ಣ ಅವರ ಚಿತ್ರದ ಮೇಲಿನ ಪ್ಯಾಶನ್ ಮತ್ತು ಕಷ್ಟಗಳನ್ನು ಹತ್ತಿರದಿಂದ ಕಂಡ ಹುಲಿ ಕಾರ್ತಿಕ್, ಈ ಸಿನಿಮಾ ಪ್ರೇಕ್ಷಕರಿಗೆ ಫುಲ್ ಮೀಲ್ಸ್ ಕೊಡೋದ್ರಲ್ಲಿ ಡೌಟೇ ಇಲ್ಲ ಅಂತ ಗ್ಯಾರಂಟಿ ಕೊಟ್ಟಿದ್ದಾರೆ.

ವೇದಿಕ್ ಕಾಸ್ಮೋಸ್ ಬ್ಯಾನರ್ ಅಡಿಯಲ್ಲಿ ವೇದಿಕ್ ವೀರ್ ಮತ್ತು ಕವಿತಾ ಮಂಜುನಾಥ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ಅಹಮದಾಬಾದ್‌ನಲ್ಲೂ ಚಿತ್ರದ ಶೂಟಿಂಗ್ ನಡೆದಿದ್ದು, ಐದು ಹಾಡುಗಳಿಗೆ ಶ್ರೀಧರ ಕಶ್ಯಪ್ ಮತ್ತು ಅಲೆಕ್ಸ್ ಸಂಗೀತ ನೀಡಿದ್ದಾರೆ. ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಸಾಹಸ ದೃಶ್ಯಗಳು ಮತ್ತು ಕಣ್ಣಿಗೆ ಹಬ್ಬ ನೀಡುವ ಛಾಯಾಗ್ರಹಣ ಈ ಚಿತ್ರದ ಪ್ಲಸ್ ಪಾಯಿಂಟ್. ಇನ್ನು ಆಟೋ ಚಾಲಕರ ಸಂಘಕ್ಕೆ ನಟಿ ರಚಿತಾ ರಾಮ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು.. ಈ ಸಿನಿಮಾ ಕಥೆ ಕೂಡ ಅವರ ಆಟೋ ಡ್ರೈವರ್ಸ್ ಲೈಫ್ ಬಗ್ಗೆ ಇರೋ ಕಾರಣ ರಚಿತಾನ ನೆನೆದು ಪ್ರಚಾರಕ್ಕೆ ಕಿಕ್ ಸ್ಟಾರ್ಟ್ ಕೊಡುವ ಯೋಜನೆಯಲ್ಲಿದೆ ತಂಡ. ಸದ್ಯ ಟೀಸರ್ ಮೂಲಕ ಸೌಂಡ್ ಮಾಡ್ತಿರೋ ಚಿತ್ರತಂಡ, ಶೀಘ್ರದಲ್ಲೇ ಥಿಯೇಟರ್‌ಗಳಲ್ಲಿ ಹಬ್ಬ ಮಾಡಲು ಸಜ್ಜಾಗಿದೆ. ಒಟ್ಟಿನಲ್ಲಿ, ಅವಮಾನದ ಕಿಚ್ಚಿನಿಂದ ಅರಳಿದ ಶರತ್ ಕೃಷ್ಣ ಎಂಬ ಪ್ರತಿಭೆ ಬೆಳ್ಳಿತೆರೆಯ ಮೇಲೆ ಎಷ್ಟು ದೊಡ್ಡ ಸದ್ದು ಮಾಡ್ತಾರೆ ಅನ್ನೋದನ್ನ ಕಾದು ನೋಡೋಣ.

 

Exit mobile version