ಸ್ಯಾಂಡಲ್ವುಡ್ ಅಂಗಳದಲ್ಲಿ ಈಗ ಬೃಂದಾವಿಹಾರಿ ಹವಾ ಮುಗಿಲುಮುಟ್ಟಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ ಈ ರೊಮ್ಯಾಂಟಿಕ್ ಡ್ರಾಮಾ ಚಿತ್ರದ ಪ್ರಿ-ರಿಲೀಸ್ ಇವೆಂಟ್ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ಕಾಮಿಡಿ ಕಿಂಗ್ ಶರಣ್ ಹಾಗೂ ಬಿಗ್ ಬಾಸ್ ಖ್ಯಾತಿಯ ಗಿಲ್ಲಿ-ಕಾವ್ಯ ಜೋಡಿ ಸೃಷ್ಟಿಸಿರುವ ಧಮಾಕಾ ಹೇಗಿದೆ..?ಅಣ್ಣಾವ್ರ ಹಾಡಿಗೆ ನಿರ್ಮಾಪಕರ ಹೆಜ್ಜೆ, ಜೈ ಶ್ರೀರಾಮ್ ಎಂದ ಶಿವಣ್ಣ-ಗಣೇಶ್ ಜೋಡಿ..ಮುಳಬಾಗಿಲು ಉತ್ಸವದ ಮಸ್ತ್ ಹೈಲೈಟ್ಸ್ ಇಲ್ಲಿದೆ, ನೋಡಿ.
- ಅದ್ಭುತ ಅಮೋಘ ಅದ್ವಿತೀಯ.. ಬೃಂದಾವಿಹಾರಿ ಮೂಡಲ ಬಾಗಿಲ ಉತ್ಸವ
- ‘ಗ್ಯಾರಂಟಿ’ಯಲ್ಲಿ ಬೃಂದಾವಿಹಾರಿ ಗ್ರ್ಯಾಂಡ್ ಪ್ರೀ ರಿಲೀಸ್ ಇವೆಂಟ್ ಹೈಲೈಟ್ಸ್
- ಗಣೇಶ್ – ಶ್ರೀನಿವಾಸ್ ರಾಜು ಕಾಂಬಿನೇಷನ್ ರಿಟರ್ನ್ಸ್..!
- ಗೋಲ್ಡನ್ ಸ್ಟಾರ್ಗೆ ತಮ್ಮನ ಸ್ಥಾನ ಕೊಟ್ಟ ಹ್ಯಾಟ್ರಿಕ್ ಹೀರೋ
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸ್ ರಾಜು ಅವರ ಕಾಂಬಿನೇಷನ್ ಅಂದ್ರೆ ಸ್ಯಾಂಡಲ್ವುಡ್ನಲ್ಲಿ ಬ್ಲಾಕ್ಬಸ್ಟರ್ ಗ್ಯಾರಂಟಿ ಎಂಬ ಮಾತು ಈಗಾಗಲೇ ಪ್ರೂವ್ ಆಗಿದೆ. ಈ ಜೋಡಿ ಈ ಹಿಂದೆ 2024ರಲ್ಲಿ ನೀಡಿದ್ದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ 25 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬರೋಬ್ಬರಿ 50 ದಿನಗಳಿಗೂ ಹೆಚ್ಚು ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು. ‘ದ್ವಾಪರ’ ಹಾಡಿನ ಮೂಲಕ ಇಡೀ ಕರುನಾಡನ್ನೇ ಹುಚ್ಚೆದ್ದು ಕುಣಿಸಿದ್ದ ಈ ಸೂಪರ್ಹಿಟ್ ಜೋಡಿ, ಇದೀಗ ‘ಬೃಂದಾವಿಹಾರಿ’ ಮೂಲಕ ಮತ್ತೊಮ್ಮೆ ಒಂದಾಗಿರುವುದು ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದೆ.
ಸಾಧ್ಯ ಬೃಂದಾವಿಹಾರಿ ಚಿತ್ರದ ಪ್ರಿ-ರಿಲೀಸ್ ಇವೆಂಟ್ ಮುಳುಬಾಗಿಲಿನಲ್ಲಿ ಅದ್ಧೂರಿಯಾಗಿ ಜರುಗಿದ್ದು, ಸ್ಯಾಂಡಲ್ವುಡ್ನ ದಿಗ್ಗಜರು ಒಂದೇ ವೇದಿಕೆಯಲ್ಲಿ ಸೇರಿ ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ. ಮುಳಬಾಗಿಲು ಉತ್ಸವದ ಸಂಭ್ರಮದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕರುನಾಡಿನ ನಲ್ಮೆಯ ನಟರು ಸಾಥ್ ನೀಡಿರುವುದು ಸಿನಿಮಾದ ಹೈಪ್ ಅನ್ನು ನೆತ್ತಿಗೇರಿಸಿದೆ. ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸುವಲ್ಲಿ ಈ ಇವೆಂಟ್ ಸಖತ್ ವರ್ಕೌಟ್ ಆಗಿದೆ.
ಇನ್ನು ಕನ್ನಡ ಚಿತ್ರರಂಗದ ಯಾವುದೇ ಹೊಸ ಪ್ರಯೋಗವಿರಲಿ ಅಥವಾ ಸ್ಟಾರ್ ನಟರ ಸಿನಿಮಾವಿರಲಿ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್ ಸದಾ ಮೊದಲ ಸಾಲಿನಲ್ಲಿ ನಿಂತು ಬೆಂಬಲ ನೀಡುತ್ತಾರೆ. ತಮ್ಮ ವಯಸ್ಸು ಹಾಗೂ ಸ್ಟಾರ್ಗಿರಿ ಮರೆತು ಕಿರಿಯ ಕಲಾವಿದರ ಬೆನ್ನುತಟ್ಟುವ ದೊಡ್ಡ ಗುಣ ಶಿವಣ್ಣ ಅವರದ್ದು. “ಗಣೇಶ್ ನನ್ನ ತಮ್ಮನ ತರ ಅಲ್ಲ, ಸ್ವತಃ ತಮ್ಮನೇ” ಎನ್ನುತ್ತಾ ಪ್ರೀತಿಯಿಂದ ಅಪ್ಪಿಕೊಂಡು, ‘ಪ್ರೇಮದ ಊರಲಿ’ಯಂತಹ ಹೊಸಬರ ತಂಡಕ್ಕೂ ಪಾಸಿಟಿವ್ ಎನರ್ಜಿ ತುಂಬುವ ಮೂಲಕ ಶಿವಣ್ಣ ಇಡೀ ಚಂದನವನಕ್ಕೆ ನಿಜವಾದ ಆಲದ ಮರವಾಗಿ ಆಸರೆಯಾಗಿದ್ದಾರೆ.
- ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಶರಣ್..!
- ಗಿಲ್ಲಿ ಮಾತಿಗೆ ಕಾವ್ಯ ಕೌಂಟರ್.. ವೇದಿಕೆಯಲ್ಲಿ ನಗೆ ಹಬ್ಬ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಶರಣ್ ತಮ್ಮ ಬಾಲ್ಯದ ದಿನಗಳು ಹಾಗೂ ಮುಳಬಾಗಿಲು ಪ್ರದೇಶದೊಂದಿಗಿನ ನಂಟನ್ನು ಮೆಲುಕು ಹಾಕಿದರು. “ತಿರುಪತಿಗೆ ಹೊರಟಾಗಲೆಲ್ಲಾ ಮುಳಬಾಗಿಲು ದಾಟಿಕೊಂಡು ಹೋಗುತ್ತಿದ್ದೆವು, ಆ ಊರಿನ ಜನತೆಯ ಪ್ರೀತಿ ಇವತ್ತಿಗೂ ಹಾಗೆಯೇ ಇದೆ” ಎಂದು ಹೇಳುತ್ತಾ ‘ಬೃಂದಾವಿಹಾರಿ’ ತಂಡಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದರು.
ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ಹಾಗೂ ಕಾವ್ಯ ಜೋಡಿ ಪ್ರಿ-ಲೀಸ್ ಇವೆಂಟ್ನ ಮುಖ್ಯ ಆಕರ್ಷಣೆಯಾಗಿ ನಿಂತಿತು. ಮೈಕ್ ಹಿಡಿದು ತಮ್ಮದೇ ಶೈಲಿಯಲ್ಲಿ ನಗಿಸಿದ ಗಿಲ್ಲಿ, “ನನಗೆ ಹೀರೋಯಿನ್ ಆಫರ್ ಕೊಡಿ” ಎಂದು ಕಾವ್ಯ ಕೇಳಿಕೊಂಡರೆ, ಗಿಲ್ಲಿ ಕೂಡ ಅಷ್ಟೇ ಮಜವಾಗಿ ಕೌಂಟರ್ ಕೊಟ್ಟು ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದರು. ಇವರ ಕಾಮಿಡಿ ಟೈಮಿಂಗ್ ಇವೆಂಟ್ಗೆ ಒಂದು ಮಸ್ತ್ ಎಂಟರ್ಟೈನ್ಮೆಂಟ್ ಟಚ್ ನೀಡಿತು.
- ನಾಲ್ಕು ಹಾಡುಗಳಲ್ಲಿ ನಾಲ್ಕು ಬಗೆಯ ಪ್ರೇಮದ ಭಾವ
- ಬೃಂದಾವಿಹಾರಿಗೆ ಸಮೃದ್ಧಿ ಮಂಜುನಾಥ್ ಬಂಡವಾಳ
ಇವೆಂಟ್ನ ಅತಿ ದೊಡ್ಡ ಹೈಲೈಟ್ ಅಂದ್ರೆ ಶಿವಣ್ಣ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಒಂದೇ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದು. ‘ಜೈ ಶ್ರೀರಾಮ್’ ಹಾಡಿಗೆ ಇಬ್ಬರೂ ಸೇರಿ ಹಾಕಿದ ಭರ್ಜರಿ ಸ್ಟೆಪ್ಸ್ ಕಂಡು ಅಭಿಮಾನಿಗಳು ಶಿಳ್ಳೆ-ಚಪ್ಪಾಳೆಗಳ ಮೂಲಕ ಸ್ಟೇಡಿಯಂ ಮಾರ್ದನಿಸುವಂತೆ ಮಾಡಿದರು. ಇಬ್ಬರು ಸ್ಟಾರ್ ನಟರ ಡ್ಯಾನ್ಸ್ ಯುದ್ಧ ಇವೆಂಟ್ಗೆ ಅಸಲಿ ಕಳೆ ತಂದುಕೊಟ್ಟಿತು.
ಶ್ರೀನಿವಾಸ್ ರಾಜು ಅವರ ನಿರೂಪಣೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ‘ಬೃಂದಾವಿಹಾರಿ’ ಚಿತ್ರವನ್ನು KVC ಪ್ರೊಡಕ್ಷನ್ಸ್ ಮತ್ತು ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಮೃದ್ಧಿ ವಿ. ಮಂಜುನಾಥ್ ಅತ್ಯಂತ ಪ್ರತಿಷ್ಠಿತವಾಗಿ ನಿರ್ಮಿಸಿದ್ದಾರೆ. ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೆ ಬ್ರಹ್ಮಾಂಡ ಸೆಟ್ಗಳು ಹಾಗೂ ರಿಚ್ ಮೇಕಿಂಗ್ ಮೂಲಕ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.
ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ‘ಮಾಧವ’ನಾಗಿ ನಟಿಸಿದ್ರೆ, ನಾಯಕಿಯರಾಗಿ ದೇವಿಕಾ ಭಟ್ ಮತ್ತು ಮಾಳವಿಕಾ ಶರ್ಮಾ ಗ್ಲಾಮರಸ್ ಸಾಥ್ ನೀಡಿದ್ದಾರೆ. ಇವರೊಂದಿಗೆ ರಂಗಾಯಣ ರಘು, ಅಚ್ಯುತ್ ಕುಮಾರ್ ಮತ್ತು ಸಾಧು ಕೋಕಿಲ ಅವರ ಕಾಂಬಿನೇಷನ್ ಸಿನಿಮಾಗೆ ಕಳಶಪ್ರಾಯವಾಗಿದೆ.
ಮಲಯಾಳಂ ಸಂಗೀತದ ಖ್ಯಾತ ಮಾಂತ್ರಿಕ ಹೇಶಮ್ ಅಬ್ದುಲ್ ವಹಾಬ್ ಈ ಚಿತ್ರದ ಮೂಲಕ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಇವರ ರಮ್ಯವಾದ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳು ಈಗಾಗಲೇ ಮ್ಯೂಸಿಕ್ ಚಾರ್ಟ್ಬಸ್ಟರ್ನಲ್ಲಿ ಟಾಪ್ ಸ್ಥಾನ ಪಡೆದಿವೆ.
ವಿ. ನಾಗೇಂದ್ರ ಪ್ರಸಾದ್ ಅವರ ಸುಂದರ ಸಾಹಿತ್ಯದಲ್ಲಿ ಮೂಡಿಬಂದಿರುವ “ಜೀವ ಜೀವ…”, “ರಾಧಾ ರಾಧಾ…”, “ನಾದ ಸುನಾದ…” ಹಾಗೂ “ಈ ಜೀವನ ಸರಿಗಮ…” ಹಾಡುಗಳು ಶ್ರೋತೃಗಳ ಮನಗೆದ್ದಿವೆ. ಕಾರ್ತಿಕ್, ಸಿಧ್ ಶ್ರೀರಾಮ್, ಶ್ರೇಯಾ ಘೋಷಾಲ್ ಹಾಗೂ ಕೆ.ಎಸ್. ಚಿತ್ರಾ ಅವರ ದ್ವನಿಯಲ್ಲಿ ಈ ಹಾಡುಗಳು ಪ್ರೇಮದ ಆಳವನ್ನು ಸಾರುತ್ತವೆ.
ಬೃಂದಾವನದ ಹಿನ್ನೆಲೆಯಲ್ಲಿ ಸಾಗುವ ಮಾಧವ, ರಾಧಾ ಮತ್ತು ಮೀರಾ ನಡುವಿನ ತ್ರಿಕೋನ ಪ್ರೇಮಕಥೆಯು ಇದೇ ಬರುವ ನವೆಂಬರ್ 20, 2026 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಗೆ ಕಂಪ್ಲೀಟ್ ಸಜ್ಜಾಗಿದೆ. ಬಾಕ್ಸ್ ಆಫೀಸ್ನಲ್ಲಿ ಗಣೇಶ್ ಮತ್ತೊಂದು ಮ್ಯಾಜಿಕ್ ಮಾಡಲು ಕೌಂಟ್ಡೌನ್ ಶುರುವಾಗಿದೆ.
