ಬಾಲಿವುಡ್‌ನ ಖ್ಯಾತ ನಟಿ ದಿಶಾ ಪಟಾನಿ ಅವರ ಉತ್ತರ ಪ್ರದೇಶದ ಬರೇಲಿಯಲ್ಲಿರುವ ಮನೆಯ ಮೇಲೆ ನಡೆದ ಗುಂಡಿನ ದಾಳಿಯ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಘಟನೆಯ ಹಿಂದೆ ಗೋಲ್ಡಿ ಬ್ರಾರ್ ಗ್ಯಾಂಗ್‌ನ ಕೈವಾಡವಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳಾದ ರವೀಂದ್ರ ಉರ್ಫ್ ಕಲ್ಲು (ರೋಹ್ಟಕ್ ಮೂಲದ) ಮತ್ತು ಅರುಣ್ ರೋಹಿತ್ ಗೋದಾರ್ (ಹರಿಯಾಣದ ಸೋನಿಪತ್ ನಿವಾಸಿ) ಗಾಜಿಯಾಬಾದ್‌ನ ಟ್ರೋನಿಕಾ ಸಿಟಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ.
ಈ ಘಟನೆಗೆ ಕಾರಣವೆಂದರೆ ದಿಶಾ ಪಟಾನಿಯ ಸಹೋದರಿ ಖುಷ್ಬೂ ಪಟಾನಿ, ಸಂತರಾದ ಪ್ರೇಮಾನಂದ ಮಹಾರಾಜ್ ಮತ್ತು ಅನಿದುದ್ಧಾಚಾರ್ಯ ಮಹಾರಾಜ್ ವಿರುದ್ಧ ನೀಡಿದ್ದ ನಿಂದನಾತ್ಮಕ ಹೇಳಿಕೆ. ಈ ಹೇಳಿಕೆಯಿಂದ ಸನಾತನ ಧರ್ಮಕ್ಕೆ ಅವಮಾನವಾಯಿತು ಎಂದು ಆರೋಪಿಸಿ ಗೋಲ್ಡಿ ಬ್ರಾರ್ ಗ್ಯಾಂಗ್ ಈ ಕೃತ್ಯವನ್ನು ಎಸಗಿತ್ತು. ರವೀಂದ್ರ ಮತ್ತು ಅರುಣ್ ಇಬ್ಬರೂ ಗೋಲ್ಡಿ ಬ್ರಾರ್ ಗ್ಯಾಂಗ್‌ನ ಸಕ್ರಿಯ ಸದಸ್ಯರಾಗಿದ್ದು, ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆರೋಪಿಗಳಾಗಿದ್ದರು.
ಘಟನೆಯ ಬೆನ್ನಲ್ಲೇ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಯ (STF) ನೋಯ್ಡಾ ಘಟಕ ಮತ್ತು ದೆಹಲಿ ಪೊಲೀಸರ ಅಪರಾಧ ಗುಪ್ತಚರ ಘಟಕ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದವು. ಗಾಜಿಯಾಬಾದ್‌ನ ಟ್ರೋನಿಕಾ ಸಿಟಿಯಲ್ಲಿ ಆರೋಪಿಗಳು ಅಡಗಿರುವ ಮಾಹಿತಿ ಆಧರಿಸಿ, ಪೊಲೀಸರು ಸ್ಥಳಕ್ಕೆ ತೆರಳಿ ಶರಣಾಗುವಂತೆ ಸೂಚಿಸಿದ್ದರು. ಆದರೆ, ಆರೋಪಿಗಳು ಶರಣಾಗದೆ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದ್ದರಿಂದ ಇಬ್ಬರೂ ಆರೋಪಿಗಳು ಗಾಯಗೊಂಡು ಮೃತಪಟ್ಟರು.
ಘಟನಾ ಸ್ಥಳದಿಂದ ಪೊಲೀಸರು ಗ್ಲಾಕ್ ಪಿಸ್ತೂಲ್, ಜಿಗಾನಾ ಪಿಸ್ತೂಲ್ ಮತ್ತು ಹಲವಾರು ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ.