ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದ ದಿಲೀಪ್ ರಾಜ್ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಹೃದಯಾಘಾತದಿಂದ ಅವರು ನಿಧನರಾಗಿರುವುದು ಅಭಿಮಾನಿಗಳು ಹಾಗೂ ಕಲಾವಿದರಲ್ಲಿ ಆಘಾತವನ್ನುಂಟುಮಾಡಿದೆ. ನಟನೆಯ ಜೊತೆಗೆ ನಿರ್ದೇಶಕ ಹಾಗೂ ನಿರ್ಮಾಪಕರಾಗಿಯೂ ಸಕ್ರಿಯರಾಗಿದ್ದ ಅವರು, ಕಿರುತೆರೆ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು.
ದಿಲೀಪ್ ರಾಜ್ ಅವರ ಹೆಸರು ಕಿರುತೆರೆ ಪ್ರೇಕ್ಷಕರಿಗೆ “Hitler Kalyana” ಧಾರಾವಾಹಿಯ ಮೂಲಕ ಚಿರಪರಿಚಿತರಾಗಿದ್ದರು.. ಈ ಧಾರಾವಾಹಿಯಲ್ಲಿನ ಅವರ ಅಭಿನಯ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ನಂತರ ಅವರು ನಿರ್ಮಾಣ ಹಾಗೂ ನಿರ್ದೇಶನ ಕ್ಷೇತ್ರಕ್ಕೂ ಕಾಲಿಟ್ಟರು. ಅವರು ತಮ್ಮದೇ ಪ್ರೊಡಕ್ಷನ್ ಹೌಸ್ ಮೂಲಕ ಎರಡು ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದರು, ಅವುಗಳು ಈಗಾಗಲೇ ಪ್ರಸಾರವಾಗುತ್ತಿವೆ.
ಇಂದು ಬೆಳಗಿನ ಜಾವ ದಿಲೀಪ್ ರಾಜ್ ಕೊನೆಯುಸಿರೆಳಿದ್ದಿದ್ದು, ಕುಟುಂಬಸ್ಥರು ತಕ್ಷಣವೇ ಅವರನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿದರು.
ದಿಲೀಪ್ ರಾಜ್ ಅವರು ಚಿತ್ರರಂಗದ ಜೊತೆಗೆ ತಮ್ಮ ಕುಟುಂಬದ ಬಗ್ಗೆ ಕೂಡ ಅನೇಕ ಬಾರಿ ಮನಸಾರೆ ಮಾತನಾಡುತ್ತಿದ್ದರು. ವಿಶೇಷವಾಗಿ ತಮ್ಮ ಪತ್ನಿ ವಿದ್ಯಾ ಅವರ ಪ್ರತಿಭೆ ಹಾಗೂ ಕೆಲಸದ ಶೈಲಿಯನ್ನು ಅವರು ಹಲವು ಸಂದರ್ಶನಗಳಲ್ಲಿ ಹೊಗಳಿದ್ದರು. ವಿದ್ಯಾ ಅವರು ಕಾರ್ಪೊರೇಟ್ ಕ್ಷೇತ್ರದಲ್ಲಿ ಸುಮಾರು 16 ವರ್ಷಗಳ ಕಾಲ HR ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದು, ನಂತರ ಸಿನಿಮಾ ಮತ್ತು ಪ್ರೊಡಕ್ಷನ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಪ್ರೊಡಕ್ಷನ್ ಹೌಸ್ ನಿರ್ವಹಣೆಯಲ್ಲಿ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ದಿಲೀಪ್ ರಾಜ್ ಹೇಳಿಕೊಂಡಿದ್ದರು.
ದಿಲೀಪ್ ರಾಜ್ ಅವರು, ಪ್ರೊಡಕ್ಷನ್ ಹೌಸ್ ನಡೆಸುವುದು ಸುಲಭದ ಕೆಲಸವಲ್ಲ. ಕಲಾವಿದರು, ತಾಂತ್ರಿಕ ಸಿಬ್ಬಂದಿ, ವೇಳಾಪಟ್ಟಿ ನಿರ್ವಹಣೆ ಸೇರಿದಂತೆ ಹಲವಾರು ಜವಾಬ್ದಾರಿಗಳು ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರನ್ನು ಸರಿಯಾಗಿ ನಿರ್ವಹಿಸುವಲ್ಲಿ ಪತ್ನಿ ವಿದ್ಯಾ ಅವರ ಪಾತ್ರ ಬಹುಮುಖ್ಯವಾಗಿದೆ ಎಂದು ಅವರು ಗೌರವದಿಂದ ಹೇಳಿದ್ದರು. “ಯಾರನ್ನು ಹೇಗೆ ಹ್ಯಾಂಡಲ್ ಮಾಡಬೇಕು, ಯಾವಾಗ ಯಾರನ್ನು ಹಿಡಿದುಕೊಳ್ಳಬೇಕು, ಯಾವಾಗ ಬಿಡಬೇಕು ಎಂಬುದನ್ನು ಅವಳಿಗೆ ಚೆನ್ನಾಗಿ ಗೊತ್ತಿದೆ” ಎಂದು ಅವರು ಹೇಳಿರುವ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗುತ್ತಿವೆ.
ಅವರು ಕೇವಲ ನಟನಷ್ಟೇ ಅಲ್ಲ, ಉತ್ತಮ ನಿರ್ದೇಶಕ ಹಾಗೂ ಸಂಘಟಕನಾಗಿಯೂ ಗುರುತಿಸಿಕೊಂಡಿದ್ದರು. ಹೊಸ ಪ್ರತಿಭೆಗಳನ್ನು ಉತ್ತೇಜಿಸುವಲ್ಲಿ ಹಾಗೂ ಗುಣಮಟ್ಟದ ಧಾರಾವಾಹಿ ನಿರ್ಮಾಣದಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿತ್ತು. ಸಿನಿಮಾ ಹಾಗೂ ಕಿರುತೆರೆ ಎರಡರಲ್ಲೂ ಅವರು ನೀಡಿದ ಕೊಡುಗೆಗಳು ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಸದಾ ನೆನಪಿನಲ್ಲಿ ಉಳಿಯುವಂತವು.
ಸಹ ಕಲಾವಿದರು, ನಿರ್ದೇಶಕರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ. ಅವರ ಕುಟುಂಬಕ್ಕೆ ಈ ದುಃಖವನ್ನು ಸಹಿಸುವ ಶಕ್ತಿ ದೊರೆಯಲಿ ಎಂದು ಹಲವರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
https://youtu.be/IYpYbhLOy1s?si=FIUYkYjK0-itKXOc