ಮುಂಬೈ: ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ ‘ಧುರಂಧರ್’ ಚಿತ್ರದ ಮುಂದುವರಿದ ಭಾಗ ‘ಧುರಂಧರ್ 2’ ಬಗ್ಗೆ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಇತ್ತು. ಆದರೆ, ಮಾರ್ಚ್ 19 ರಂದು ತೆರೆಗೆ ಬರಲಿರುವ ಈ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಚಿತ್ರೀಕರಣದ ವೇಳೆ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಚಿತ್ರ ನಿರ್ಮಾಪಕರ ವಿರುದ್ದ ಮುಂಬೈ ಮಹಾನಗರ ಪಾಲಿಕಯು (BMC) ಆರೋಪ ಮಾಡಿದೆ.
ಭದ್ರತಾ ನಿಯಮಗಳ ಉಲ್ಲಂಘನೆ
ಆದಿತ್ಯ ಧಾರ್ ಅವರ ನಿರ್ಮಾಣ ಸಂಸ್ಥೆಯಾದ ಬಿ62 ಸ್ಟುಡಿಯೋಸ್ ವಿರುದ್ಧ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಗಂಭೀರ ಆರೋಪಗಳನ್ನು ಮಾಡಿದೆ. ಚಿತ್ರೀಕರಣದ ಸಮಯದಲ್ಲಿ ಸುರಕ್ಷತಾ ಮಾನದಂಡಗಳನ್ನು ಪದೇ ಪದೇ ಉಲ್ಲಂಘಿಸಲಾಗಿದೆ ಎನ್ನಲಾಗಿದೆ.
ಪ್ರಮುಖವಾಗಿ, ಭದ್ರತಾ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾದ ಜಾಗದಲ್ಲಿ ಚಿತ್ರತಂಡವು ದೊಡ್ಡ ದೊಡ್ಡ ಟಾರ್ಚ್‌ಗಳನ್ನು ಬಳಸಿದೆ. ಇದು ಭದ್ರತಾ ಲೋಪಕ್ಕೆ ಕಾರಣವಾಗಬಹುದು ಎಂದು ಪರಿಗಣಿಸಿದ ಮುಂಬೈ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಯು ಚಿತ್ರತಂಡದ ಬೇಜವಾಬ್ದಾರಿತನವನ್ನು ಎತ್ತಿ ತೋರಿಸಿದೆ ಎಂದು ಪಾಲಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಇದರೊಟ್ಟಿಗೆ, ಚಿತ್ರದ ಸಿಬ್ಬಂದಿ ಅಧಿಕೃತವಾಗಿ ನೀಡಲಾಗಿದ್ದ ಶೂಟಿಂಗ್ ಸ್ಥಳವನ್ನು ಅನುಮತಿ ಇಲ್ಲದೆ ಬದಲಾಯಿಸಿದ್ದಾರೆ. ಅಷ್ಟೇ ಅಲ್ಲದೆ, ಯಾವುದೇ ಮುನ್ಸೂಚನೆ ಅಥವಾ ಅನುಮತಿ ಪಡೆಯದೆ ಕಟ್ಟಡದ ಟೆರೇಸ್ ಅನ್ನು ಚಿತ್ರೀಕರಣಕ್ಕೆ ಬಳಸಿಕೊಂಡಿದ್ದಾರೆ. ಸ್ಥಳೀಯ ಆಡಳಿತದಿಂದ ಮಾನ್ಯ ಪರವಾನಗಿ ಪಡೆಯದೆ ಎರಡು ಬೃಹತ್ ಜನರೇಟರ್ ವ್ಯಾನ್‌ಗಳನ್ನು ಸೆಟ್‌ನಲ್ಲಿ ಬಳಸುತ್ತಿರುವುದು ಪಾಲಿಕೆಯ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ಕಪ್ಪುಪಟ್ಟಿಗೆ ಸೇರಿಸುವ ಪ್ರಸ್ತಾಪ ಮತ್ತು ದಂಡ
ಈ ಗಂಭೀರ ಲೋಪಗಳ ಹಿನ್ನೆಲೆಯಲ್ಲಿ, ಆದಿತ್ಯ ಧಾರ್ ಅವರ ‘ಬಿ62 ಸ್ಟುಡಿಯೋಸ್’ ಅನ್ನು ರಾಜ್ಯದ ಏಕ-ವಿಂಡೋ ಚಿತ್ರೀಕರಣ ಪೋರ್ಟಲ್‌ನಿಂದ ಶಾಶ್ವತವಾಗಿ ನಿಷೇಧಿಸುವಂತೆ (Blacklist) ಪಾಲಿಕೆಯು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ಈಗಾಗಲೇ ಪಾಲಿಕೆಯು ನಿರ್ಮಾಣ ಸಂಸ್ಥೆಯ 25,000 ರೂ.ಗಳ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಹೆಚ್ಚುವರಿಯಾಗಿ 1 ಲಕ್ಷ ರೂ. ದಂಡ ವಿಧಿಸಲು ಶಿಫಾರಸು ಮಾಡಿದೆ.
ಸದ್ಯಕ್ಕೆ ಸ್ಟುಡಿಯೋವನ್ನು ಅಧಿಕೃತವಾಗಿ ಕಪ್ಪುಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಇದು ‘ಧುರಂಧರ್ 2’ ಚಿತ್ರದ ಪ್ರಚಾರ ಮತ್ತು ಬಿಡುಗಡೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ.
ಡಿಸೆಂಬರ್ 5 ರಂದು ಬಿಡುಗಡೆಯಾಗಿದ್ದ ಮೊದಲ ಭಾಗ ‘ಧುರಂಧರ್’ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಚಿತ್ರದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ರಾಕೇಶ್ ಬೇಡಿ ಅಂತಹ ದೊಡ್ಡ ತಾರಾಬಳಗವೇ ಇತ್ತು. ಇದೀಗ ಎರಡನೇ ಭಾಗದ ಬಿಡುಗಡೆಗೆ ಕ್ಷಣಗಣನೆ ಶುರುವಾಗಿರುವ ಬೆನ್ನಲ್ಲೇ ಈ ವಿವಾದ ನಿರ್ಮಾಪಕರಿಗೆ ತಲೆನೋವಾಗಿ ಪರಿಣಮಿಸಿದೆ.
