ಮಧು ಫಿಲಂ ಸರ್ಕ್ಯೂಟ್ಸ್ ಸಂಸ್ಥೆ ಲಾಂಛನದಲ್ಲಿ ಅಂಬಟಿ ಮಧು ಮೋಹನಕೃಷ್ಣ ಅವರು ಕನ್ನಡದಲ್ಲಿ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರ ”ರೋಲೆಕ್ಸ್”. ಅಂಬಟಿ ಮಧು ಮೋಹನಕೃಷ್ಣ ಅವರು ಪ್ರಸ್ತುತ ಆಂದ್ರ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದಾರೆ.
ಈ ಹಿಂದೆ “ಬಿಲ್ ಗೇಟ್ಸ್” ಚಿತ್ರವನ್ನು ನಿರ್ದೇಶನ ಮಾಡಿದ್ದ ಶ್ರೀನಿವಾಸ್ ಮಂಡ್ಯ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ನಾಯಕನಾಗಿ ಕೋಮಲ್ ಕುಮಾರ್ ನಟಿಸುತ್ತಿದ್ದಾರೆ. ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಕೋಮಲ್ ಅವರು “ರೋಲೆಕ್ಸ್” ಚಿತ್ರದಲ್ಲಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಾಲ್ ಮೊಂತೆರೊ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ತಮ್ಮ ಅದ್ಭುತ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ ವಿನೋದ್ ಪ್ರಭಾಕರ್ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ಈವರೆಗೂ ಮಾಡಿರದ ಪಾತ್ರದಲ್ಲಿ ವಿನೋದ್ ಪ್ರಭಾಕರ್ ಅವರು ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಜನಪ್ರಿಯ ನಟರಾದ ಕೋಮಲ್ ಕುಮಾರ್ ಹಾಗೂ ವಿನೋದ್ ಪ್ರಭಾಕರ್ ಅವರನ್ನು ಒಟ್ಟಾಗಿ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ವಿನೋದ್ ಪ್ರಭಾಕರ್ ಅವರಿಗೆ “ರೋಲೆಕ್ಸ್” ಚಿತ್ರತಂಡ ಧನ್ಯವಾದ ತಿಳಿಸಿದೆ.
ಕಾಮಿಡಿಯೊಂದಿಗೆ ಕೌಟುಂಬಿಕ ಕಥಾಹಂದರವನ್ನೂ ಹೊಂದಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಕೋಮಲ್ ಅವರು ಈ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಗೆಟಪ್ ನಲ್ಲಿ “ರೋಲೆಕ್ಸ್” ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನೋದ್ ಪ್ರಭಾಕರ್, ಸೋನಾಲ್ ಮೊಂತೆರೊ, ಅಚ್ಯುತಕುಮಾರ್, ನವೀನ್ ಪಡೀಲ್, ಅರುಣ ಬಾಲರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ಡಾ||ವಿ.ನಾಗೇಂದ್ರಪ್ರಸಾದ್, ಕವಿರಾಜ್, ರಾಜೇಶ್ ವರ್ಮ ಹಾಗೂ ಕಿನ್ನಾಳ್ ರಾಜ್ ಗೀತ ರಚನೆ ಮಾಡಿದ್ದಾರೆ. ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನ, ಯೋಗಾನಂದ್ ಸಾಹಸ ನಿರ್ದೇಶನ ಹಾಗೂ ಕಲೈ – ಮುರಳಿ ಅವರ ನೃತ್ಯ ನಿರ್ದೇಶನವಿರುವ “ರೋಲೇಕ್ಸ್” ಚಿತ್ರಕ್ಕೆ ಮುರಳಿಕೃಷ್ಣ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
