ಡಿಂಪಲ್ ಕ್ವೀನ್ ರಚಿತಾ ಜೊತೆ ಖಚಿತವಾಗಿ ಕ್ರಿಮಿನಲ್ ಆಗಿಬಿಟ್ಟಿದ್ದಾರೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಯೆಸ್.. ಕೆಡಿ ರಿಲೀಸ್‌ಗೂ ಮೊದಲೇ ಧ್ರುವ ಹೊಚ್ಚ ಹೊಸ ಪ್ರಾಜೆಕ್ಟ್ ಲಾಂಚ್ ಆಗಿದೆ. ಇಂಡಿಯಾದ ಬಿಗ್ಗೆಸ್ಟ್ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್ ಗೋಲ್ಡ್ ಮೈನ್ಸ್ ಜೊತೆ ಕೈ ಜೋಡಿಸಿರೋ ಧ್ರುವ, ಪ್ಯಾನ್ ಇಂಡಿಯಾ ಬೇಟೆಗೆ ಹೊರಟಿದ್ದಾರೆ. ಅದಕ್ಕಾಗಿ ಎಂಟು ವರ್ಷಗಳ ನಂತ್ರ ರಚ್ಚು ಜೊತೆ ಮಚ್ಚು ಹಿಡಿದಿದ್ದಾರೆ.
ಜೋಗಿ ಪ್ರೇಮ್ ಜೊತೆಗಿನ ಕೆಡಿ ಸಿನಿಮಾ ಬಳಿಕ ಧ್ರುವ ಸರ್ಜಾ ನೆಕ್ಸ್ಟ್ ಮೂವಿ ಯಾವುದಾಗಲಿದೆ..? ಯಾರ ಜೊತೆ ಅನ್ನೋ ಅವರ ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳ ಕ್ಯೂರಿಯಾಸಿಟಿಗೆ ಕೊನೆಗೂ ತೆರೆಬಿದ್ದಿದೆ. ಯೆಸ್.. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 7ನೇ ಸಿನಿಮಾ ಮುಹೂರ್ತ ಪೂಜೆ ನೆರವೇರಿಸಿಕೊಳ್ಳೋ ಮೂಲಕ ಅಧಿಕೃತವಾಗಿ ಸೆಟ್ಟೇರಿದೆ. ಬೆಂಗಳೂರಿನ ಬಸವನಗುಡಿಯ ಅನ್ನಪೂರ್ಣ ನವ ಮಂತ್ರಾಲಯ ಮಂದಿರದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ.
ರಚಿತಾ ರಾಮ್ ಜೊತೆ ‘ಕ್ರಿಮಿನಲ್’ ಆದ್ರೇಕೆ ಧ್ರುವ ಸರ್ಜಾ..?
ಉತ್ತರ ಕರ್ನಾಟಕ ನೈಜ ಕಲ್ಟ್ ಕಥೆಯಲ್ಲಿ ಧ್ರುವ-ರಚ್ಚು ಮಿಂಚು
ಸಿನಮಾಗೆ ಕ್ರಿಮಿನಲ್ ಅನ್ನೋ ಟೈಟಲ್ ಕೂಡ ಫಿಕ್ಸ್ ಆಗಿದ್ದು, ಪೂಜಾ ಕಾರ್ಯಕ್ರಮದಲ್ಲಿ ಟೈಟಲ್ ಸಹ ರಿವೀಲ್ ಆಗಿದೆ. ನಾಯಕಿಯಾಗಿ ರಚಿತಾ ರಾಮ್ ಧ್ರುವಗೆ ಸಾಥ್ ಕೊಡುತ್ತಿದ್ದು. ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ನೈಜ ಘಟನೆಯನ್ನ ಆಧರಿಸಿದ್ದು ಎನ್ನಲಾಗ್ತಿದೆ. ಪವನ್ ಒಡೆಯರ್ ಶಿಷ್ಯ, ಈ ಹಿಂದೆ ಕೆರೆಬೇಟೆ ಚಿತ್ರ ನಿರ್ದೇಶಿಸಿದ್ದ ರಾಜ್‌ಗುರು ಕ್ರಿಮಿನಲ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಮುಹೂರ್ತದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ರಾಜ್ ಗುರು, ಕಥೆ ಕೇಳಿದ ಕೂಡಲೇ ಧ್ರುವ ಸರ್ಜಾ ಓಕೆ ಮಾಡಿದ್ರು. ಬಳಿಕ ಸೆಲ್ಫಿ ತೆಗೆದುಕೊಂಡೆ. ಸೆಲ್ಫಿ ನೋಡಿ ಖುಷಿ ಜೊತೆ ಭಯ ಕೂಡ ಶುರುವಾಯ್ತು. ಇದು ಜವಾಬ್ದಾರಿ ಅನ್ನೋ ಭಯ. ಉತ್ತರ ಕರ್ನಾಟಕದ ಬಗ್ಗೆ ಸಿನಿಮಾ ಮಾಡುತ್ತಿದ್ದೇವೆ. ದೊಡ್ಡ ಪ್ರೊಡಕ್ಷನ್ ಕಂಪನಿ ನನಗೆ ಅವಕಾಶ ಕೊಟ್ಟಿದೆ. ಇದು ನನ್ನ ಎರಡನೇ ಸಿನಿಮಾ. ಈ ಚಿತ್ರಕ್ಕೆ ನಿಮ್ಮ ಸಪೋರ್ಟ್ ಇರಲಿ ಎಂದರು.
KDಗೂ ಮೊದಲೇ ಸೆಟ್ಟೇರಿತು ಕ್ರಿಮಿನಲ್.. ಧ್ರುವ ಫ್ಯಾನ್ಸ್ ಖುಷ್
ಗೋಲ್ಡ್ ಮೈನ್ಸ್ ಮೆಗಾ ಬೇಟೆಗೆ ಮಚ್ಚು ಹಿಡಿದ ಆ್ಯಕ್ಷನ್ ಪ್ರಿನ್ಸ್..!
ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಪ್ಯಾನ್ ಇಂಡಿಯಾ ಪ್ರೊಡಕ್ಷನ್ ಹೌಸ್ ಆಗಿರೋ ಗೋಲ್ಡ್ ಮೈನ್ಸ್, ಈ ಚಿತ್ರದಿಂದ ಕನ್ನಡಕ್ಕೆ ಕಾಲಿಡ್ತಿದೆ. ನಿರ್ಮಾಪಕ ಮನೀಶ್ ಮಾತನಾಡಿ, ಧ್ರುವ ಸಿನಿಮಾ ಪ್ರೊಡ್ಯೂಸ್ ಮಾಡಿ ಎಂದಾಗ ನನಗೆ ಸರ್ ಪ್ರೈಸ್ ಆಯ್ತು. ನನ್ನ ಕನಸು ನನಸಾಗಿದೆ. ನಾನು ಕನ್ನಡ ಸಿನಿಮಾ ಮಾಡುತ್ತಿರುವುದು ಖುಷಿ ಆಗಿದೆ. ಇದು ಗ್ರೇಟ್ ಮೂಮೆಂಟ್ ಎಂದರು.
ಬರೋಬ್ಬರಿ ಎಂಟು ವರ್ಷಗಳ ನಂತರ ನನ್ನ ಒಳ್ಳೆ ಫ್ರೆಂಡ್ ಧ್ರುವ ಜೊತೆ ಸಿನಿಮಾ ಮಾಡ್ತಿರೋದು ಖುಷಿ ಆಗ್ತಿದೆ ಎಂದ ರಚಿತಾ ರಾಮ್, ಭರ್ಜರಿ ಸಿನಿಮಾದ ಮುಹೂರ್ತ ಆದ ಸ್ಥಳದಲ್ಲೇ ಪೂಜೆ ಆಗಿದ್ದನ್ನ ಸ್ಮರಿಸಿದ್ರು. ಹೊಸ ತಂಡದ ಜೊತೆ ಕೆಲಸ ಮಾಡ್ತಿರೋದು ಖುಷಿ ಇದೆ. ಗೋಲ್ಡ್ ಮೈನ್ಸ್ ಪ್ರೊಡಕ್ಷನ್ ಜೊತೆ ಕೆಲಸ ಮಾಡುತ್ತಿದ್ದೇನೆ. ಫಸ್ಟ್ ನನಗೆ ಧ್ರುವ ಕಾಲ್ ಮಾಡಿದ್ರು. ಕಥೆ, ಪ್ರೊಡಕ್ಷನ್ ಹೌಸ್ ಏನೂ ಕೇಳಲಿಲ್ಲ. ಓಕೆ ಮಾಡ್ತೀನಿ ಎಂದೆ. ಆಮೇಲೆ ನಿರ್ದೇಶಕರು ಮನೆಗೆ ಬಂದು ಕಥೆ ಹೇಳಿದ್ರು. ತುಂಬಾ ಎಕ್ಸ್‌ಪೆರಿಮೆಂಟ್ ಪಾತ್ರವನ್ನು ಧ್ರುವ ಮಾಡುತ್ತಿದ್ದಾರೆ. ಇದು ಅವ್ರ ಕರಿಯರ್‌ನ ಬೆಸ್ಟ್ ಚಿತ್ರವಾಗಲಿದೆ ಎಂದರು.
ಉತ್ತರ ಕರ್ನಾಟಕ ಹಾವೇರಿಯ ಹಾನಗಲ್‌ನಲ್ಲಿ ನಡೆದ ಪ್ರೇಮ ಕಥೆಯಾಧಾರಿತ ಸಿನಿಮಾ ಮಾಡ್ತಿದ್ದೀನಿ. 99% ಸ್ಟೋರಿ ಏನಿದೆ ಅದೇ ತರ ಶೂಟ್ ಮಾಡ್ತೀವಿ. ಭರ್ಜರಿಯಲ್ಲಿ ತಾಯಿ ಆದ ನಂತ್ರ ತಾರಮ್ಮ ಮತ್ತೆ ಅಮ್ಮನಾಗಿ ಕಾಣಿಸಿಕೊಳ್ತಿದ್ದಾರೆ. ರಚಿತಾ ಭರ್ಜರಿ ನಂತ್ರ ಟಚ್ ಅಲ್ಲಿ ಇದ್ವಿ. ಕಥೆ ಕೇಳಿದ ಮೇಲೆ ರಚಿತಾಗೆ ಹೇಳ್ದೆ ಅವರು ಕೂಡಾ ಒಪ್ಪಿಕೊಂಡ್ರು. ತುಂಬಾನೇ ಯುನಿಕ್ ಸಬ್ಜೆಕ್ಟ್.. ಇಡೀ ಸಿನಿಮಾ ಉತ್ತರ ಕರ್ನಾಟಕದ ಭಾಷೆಯಲ್ಲೇ ಇರುತ್ತೆ ಅದಕ್ಕಾಗಿ ತಯಾರಿ ಮಾಡಿಕೊಳ್ತಿದ್ದೀನಿ ಅಂದ್ರು ಆ್ಯಕ್ಷನ್ ಪ್ರಿನ್ಸ್.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದ್ದು, ಱಪರ್ ಚಂದನ್ ಶೆಟ್ಟಿ ಸಂಗೀತ, ವೈದಿ ಛಾಯಾಗ್ರಹಣ, ರವಿವರ್ಮಾ, ವಿಕ್ರಂ ಮೋರ್ ಸ್ಟಂಟ್ಸ್ ಚಿತ್ರಕ್ಕಿರಲಿದೆ. ಚಿತ್ರದಲ್ಲಿ ಹಳ್ಳಿಹೈದ ಶಿವನಾಗಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಪಾರ್ವತಿಯಾಗಿ ರಚಿತಾ ರಾಮ್ ಬಣ್ಣ ಹಚ್ಚಿದ್ದು, ಮೊದಲ ದೃಶ್ಯದಲ್ಲಿ ನಾಯಕಿಯ ಜುಟ್ಟು ಹಿಡಿದು ನಾಯಕ ಮಾತನಾಡುವ ಸನ್ನಿವೇಶ ಚಿತ್ರಿಸಲಾಯಿತು.





