ನಟ ಧ್ರುವ ಸರ್ಜಾ ಹನುಮಂತನ ಪರಮ ಭಕ್ತ. ಅವ್ರ ಪರ್ಸನಲ್ ಮ್ಯಾನೇಜರ್ ಅಶ್ವಿನ್.. ಅಷ್ಟೇ ಭಕ್ತಿ, ಗೌರವದಿಂದ ಆ್ಯಕ್ಷನ್ ಪ್ರಿನ್ಸ್‌ನ ಕಾಣ್ತಾರೆ. ಸದಾ ಕಷ್ಟ ಸುಖಗಳಿಗೆ ಧ್ರುವ ಬೆನ್ನಿಗೆ ನಿಲ್ಲುತ್ತಿದ್ದ ಅಶ್ವಿನ್ ಇದೀಗ ಕೆಲ ದಿನಗಳಿಂದ ನಾಪತ್ತೆ ಆಗಿಬಿಟ್ಟಿದ್ದಾರೆ. ಅರೇ.. ಧ್ರುವ ಏನಾದ್ರೂ ಗೇಟ್‌ಪಾಸ್ ಕೊಟ್ರಾ..? ಈಗ ಎಲ್ಲಿದ್ದಾರೆ ಅಶ್ವಿನ್..? ಏನು ಮಾಡ್ತಿದ್ದಾರೆ ಅನ್ನೋದ್ರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ..
- ತನ್ನ ಮ್ಯಾನೇಜರ್‌ಗೆ ಗೇಟ್‌ಪಾಸ್ ಕೊಟ್ರಾ ಧ್ರುವ ಸರ್ಜಾ..?!
- ಎಲ್ಲಿ ಹೋದ್ರು ಅಶ್ವಿನ್..? ಈಗ ಏನು ಮಾಡ್ತಿದ್ದಾರೆ ಗೊತ್ತಾ..?!
ಕೆಡಿ ರಿಲೀಸ್ ಬಳಿಕ ನಾಪತ್ತೆ.. ಎಷ್ಟು ಕೋಟಿ ಟಿಕೆಟ್ ಹರಿಸಿದ್ರು? - ಧ್ರುವ ಸರ್ಜಾ ಬಿಟ್ಟು ರಚಿತಾರಾಮ್ ಕ್ಯಾಂಪ್ ಸೇರಿದ್ರಾ ಅಶ್ವಿನ್?
ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.. ಆರಂಭದಲ್ಲಿ ಇದ್ದಂತಹ ಸಕ್ಸಸ್ ರೇಟ್ ಇವ್ರಿಗೆ ಈಗ ಇಲ್ಲದಾಗಿದೆ. ಅದಕ್ಕೆ ಕಾರಣ ಅವ್ರ ಆಯ್ಕೆಗಳು ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಆಗೋ ವ್ಯಾಮೋಹ. ಕರಿಯರ್ ಬಿಗಿನಿಂಗ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಿಂದ ಗೆದ್ದು ಬೀಗಿದ ಧ್ರುವ ಸರ್ಜಾ, ಶಿವಣ್ಣನಂತೆ ಹ್ಯಾಟ್ರಿಕ್ ಹೀರೋ ಅನಿಸಿಕೊಂಡ್ರು. ಆದ್ರೆ ಶಿವಣ್ಣನೇ ನಮ್ಮ ಹ್ಯಾಟ್ರಿಕ್ ಹೀರೋ.. ಆ ಬಿರುದು ಅವರಿಗಷ್ಟೇ ಸೀಮಿತ. ನನಗೆ ಹಾಗಂತ ಕರೆಯಬೇಡಿ ಅಂತ ದೊಡ್ಡತನ ತೋರಿದ್ರು ಧ್ರುವ.
ಆದ್ರೀಗ ಪೊಗರು, ಮಾರ್ಟಿನ್, ಕೆಡಿ.. ಒಂದರ ಹಿಂದೆ ಒಂದರಂತೆ ಎಲ್ಲಾ ಸಿನಿಮಾಗಳು ಸಾಲು ಸಾಲು ಸೋಲು ಕಾಣ್ತಿವೆ. ಒಂದ್ಕಡೆ ಇದು ಧ್ರುವ ಅವರ ವೈಯಕ್ತಿಕ ನಿರ್ಧಾರ ಅನ್ನೋದು. ಮತ್ತೊಂದ್ಕಡೆ ಅವರ ಜೊತೆಗಿರೋ ಪರ್ಸನಲ್ ಮ್ಯಾನೇಜರ್ ಅಂತಲೂ ಹೇಳಲಾಗ್ತಿದೆ. ಹೌದು.. ನಟ ಧ್ರುವ ಮ್ಯಾನೇಜರ್ ಶಿವಾರ್ಜುನ್‌ರನ್ನ ಓವರ್ ಟೇಕ್ ಮಾಡಿ ಧ್ರುವ ಕ್ಯಾಂಪ್ ಸೇರಿದ್ದ ಅಶ್ವಿನ್, ಒಡಹುಟ್ಟಿದ ಸಹೋದರನ ರೀತಿ ಆ್ಯಕ್ಷನ್ ಪ್ರಿನ್ಸ್‌ಗೆ ಸಾಥ್ ನೀಡಿದ್ದು ಸುಳ್ಳಲ್ಲ.
ರಾಮ ಭಂಟ ಹನುಮ ಹೇಗೋ.. ಅದೇ ರೀತಿ ಆ ಹನುಮ ಭಕ್ತ ಧ್ರುವ ಸರ್ಜಾ ಬೆನ್ನಿಗೆ ನಿಂತಿದ್ದ ಹನುಮನಂತಹ ಭಂಟ ಈ ಅಶ್ವಿನ್. ಈತ ಬಂದ ಬಳಿಕ ಧ್ರುವ ಕಂಪ್ಲೀಟ್ ಬದಲಾಗಿ ಹೋದ್ರು. ಧ್ರುವ ಸರ್ಜಾ ಡೇಟ್ಸ್, ರೆಮ್ಯುನರೇಷನ್, ಫ್ಯಾನ್ಸ್ ಪೇಜ್‌ಗಳು, ಸಂಘಗಳು, ಸಿನಿಮಾ ಪ್ರಮೋಷನ್ಸ್, ಪರ್ಸನಲ್ ಇವೆಂಟ್ಸ್.. ಹೀಗೆ ಎಲ್ಲವೂ ಅಶ್ವಿನ್ ಹೇಳಿದಂತೆಯೇ ನಡೆಯಲಾರಂಭಿಸಿದವು. ಇನ್‌ಫ್ಯಾಕ್ಟ್ ದಶಕಗಳಿಂದ ಧ್ರುವ ಜೊತೆಗಿರೋ ಮುತ್ತಿನಂತಹ ಹುಡ್ಗ ಮುತ್ತುಗೂ ಸಹ ಅಶ್ವಿನ್ ಎಂಟ್ರಿ ಇರಿಸು ಮುರಿಸು ತಂದಿತ್ತು.
ಧ್ರುವ ಹೆಸರಲ್ಲಿ ಒಂದು ಫೌಂಡೇಶನ್ ಹುಟ್ಟಿಹಾಕಿ, ಆ ಮೂಲಕ ಒಂದಷ್ಟು ಸಾಮಾಜಿಕ ಕಾರ್ಯಗಳನ್ನೂ ಮಾಡ್ತಾರೆ ಇದೇ ಅಶ್ವಿನ್. ಅದಕ್ಕೆ ಒಂದಷ್ಟು ವಿಡಿಯೋಗಳು ಕೂಡ ಸಾಕ್ಷಿಯಾಗಿದ್ದು, ಅವರ ಸಾಮಾಜಿಕ ಕಳಕಳಿಗೆ ನಾವೂ ಸೇರಿದಂತೆ ಎಲ್ಲರೂ ಸೆಲ್ಯೂಟ್ ಹೊಡೆದಿದ್ರು.
ಧ್ರುವ ಸರ್ಜಾ ಬರ್ತ್ ಡೇ, ಸಿನಿಮಾಗಳ ಮುಹೂರ್ತ ಸಮಾರಂಭಗಳು, ಇವೆಂಟ್ಸ್ ಇದ್ದಾಗ ಅಶ್ವಿನ್ ಅವ್ರೇ ದುಡ್ಡು ಕೊಟ್ಟು ಹುಡುಗರನ್ನ ಗುಡ್ಡೆ ಹಾಕಿಸ್ತಿದ್ರು. ಅದು ಧ್ರುವ ಅವರಿಗೆ ಇಷ್ಟವಿಲ್ಲ ಅಂದ್ರೂ ಈತನೇ ಎಲ್ಲವನ್ನೂ ಮಾಡ್ತಿದ್ದ. ಅಲ್ಲದೆ, ಸಿನಿಮಾಗಳು ರಿಲೀಸ್ ಆದಾಗ ಸೆಲೆಬ್ರೇಷನ್‌ಗಳಿಗೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿಸ್ತಿದ್ದ. ಅಲ್ಲದೆ, ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ತೋರಿಸಿಕೊಳ್ಳೋ ನಿಟ್ಟಿನಲ್ಲಿ ಕೈಯಿಂದ ದುಡ್ಡು ನೀಡಿ, ಥಿಯೇಟರ್‌ಗಳಲ್ಲಿ ಟಿಕೆಟ್ ಹರಿಸೋ ಸಂಸ್ಕೃತಿಯನ್ನ ಹುಟ್ಟಿಹಾಕಿದ್ದು ಇದೇ ಅಶ್ವಿನ್. ಸದ್ಯ ಕೆಡಿ ಸಿನಿಮಾಗಾಗಿ ಹೆಚ್ಚೂ ಕಡಿಮೆ ಎರಡು ಕೋಟಿ ರೂಪಾಯಿಗಳಷ್ಟು ಟಿಕೆಟ್ಸ್‌ನ ಹರಿಸಿದ್ದಾರೆ ಅಶ್ವಿನ್ ಅನ್ನೋದು ಮೂಲಗಳ ಮಾಹಿತಿ. ಆದ್ರೆ ಇದು ನಟ ಧ್ರುವ ಸರ್ಜಾಗೆ ಗೊತ್ತೋ ಇಲ್ವೋ ಅನ್ನೋದೇ ಗೊತ್ತಿಲ್ಲ.
ಇತ್ತೀಚೆಗೆ ಕೆಡಿ ಸಿನಿಮಾದ ರಿಲೀಸ್ ಬಳಿಕ ಅಶ್ವಿನ್ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ತಿಲ್ಲ. ಅಶ್ವಿನ್ ಧ್ರುವ ಕ್ಯಾಂಪ್‌ಗೆ ಬಂದ ಬಳಿಕ ಸಿನಿಮಾಗಳು ಅಂದುಕೊಂಡಂತೆ ಸಕ್ಸಸ್ ಕಾಣ್ತಿಲ್ಲ. ಧ್ರುವ ಹಣಕಾಸಿನ ವಿಚಾರಗಳೆಲ್ಲಾ ಅಶ್ವಿನ್ ಅವರೇ ನಿಭಾಯಿಸುತ್ತಿದ್ದರಿಂದ ಸದ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ನಟ ಧ್ರುವ ಸರ್ಜಾ ಅನ್ನೋದು ಟಾಕ್. ಅದೇನೇ ಇರಲಿ, ಆ್ಯಕ್ಷನ್ ಪ್ರಿನ್ಸ್‌ನ ದಾರಿ ತಪ್ಪಿಸದಿದ್ರೆ ಸಾಕು ಅನ್ನೋದು ಹಿತೈಷಿಗಳ ಆಶಯ.
ಇವೆಲ್ಲದರ ನಡುವೆ ಜಿಮ್ ಟ್ರೈನರ್ ಒಬ್ಬ ನಟ ಧ್ರುವ ಸರ್ಜಾಗೆ ತುಂಬಾ ಕ್ಲೋಸ್ ಆಗ್ತಿರೋದನ್ನ ತಪ್ಪಿಸಲು ಹೋಗಿ ಅದ್ಯಾರಿಗೋ ಸುಪಾರಿ ಕೊಟ್ಟಿದ್ದ ಅಶ್ವಿನ್, ಅರೆಸ್ಟ್ ಆಗಿ ಜೈಲಿಗೂ ಹೋಗಿಬಂದಿದ್ದು ಎಲ್ರಿಗೂ ಗೊತ್ತೇಯಿದೆ. ಸದ್ಯ ಈ ಎಲ್ಲಾ ಬೆಳವಣಿಗೆಗಳ ಬಳಿಕ ಬೇಸತ್ತಿರೋ ಧ್ರುವ, ಅಶ್ವಿನ್‌ಗೆ ಗೇಟ್‌ಪಾಸ್ ಕೊಡೋಕೆ ತುದಿಗಾಲಲ್ಲಿದ್ದಾರಂತೆ. ಅದೇ ಕಾರಣದಿಂದ ಸ್ಯಾಂಡಲ್‌ವುಡ್‌ನ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಬಳಿ ಮ್ಯಾನೇಜರ್‌ಗಾಗಿ ಕರ್ಚೀಫ್ ಹಾಕಿದ್ದಾರಂತೆ ಅಶ್ವಿನ್. ಸೋ ಮುಂದೆ ಏನೆಲ್ಲಾ ಆಗುತ್ತೆ ಅನ್ನೋದನ್ನ ಇನ್ನಷ್ಟೇ ನಿರೀಕ್ಷಿಸಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಗೌರವ ಅನ್ನೋದನ್ನ ಯಾರೂ ಎಂದೂ ದುಡ್ಡು ಕೊಟ್ಟು ಖರೀದಿ ಮಾಡಬಾರದು. ಅದು ತಾನಾಗಿಯೇ ಪಡೆಯುವಂತಾಗಬೇಕು ಅನ್ನೋದು ಇದರ ನೀತಿ ಪಾಠ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
