ಪ್ರಕೃತಿಯಿಂದ ಹಲವು ರೀತಿಯ ಪ್ರಯೋಜನಗಳನ್ನು ಪಡೆಯುವ ನಾವು ಗಿಡಗಳನ್ನು ನೆಟ್ಟು ಬೆಳೆಸುವುದರ ಮೂಲಕ ಪ್ರಕೃತಿಯ ಋಣವನ್ನು ತೀರಿಸಬೇಕಿದೆ ಎಂದು ಧ್ರುವ ಆಸರೆ ಫೌಂಡೇಶನ್ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಎಂ.ಜಿ ಕನಕ ಅವರು ತಿಳಿಸಿದರು.
ನಟ ಧ್ರುವ ಸರ್ಜಾ ಅವರ “ಕೆಡಿ” ಚಲನಚಿತ್ರದ ಟೀಸರ್ ಬಿಡುಗಡೆ ಪ್ರಯುಕ್ತ ತಾಲೂಕಿನ ಚೇಳ್ಳಗುರ್ಕೀ ಗ್ರಾಮದ ಶ್ರೀ ಎರ್ರಿಸ್ವಾಮಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಜಿ.ಕೆ ಫೌಂಡೇಶನ್ ಮತ್ತು ಜಿ.ಕೆ ಡೆವಲಪರ್ ಸಂಸ್ಥಾಪಕ ಅಧ್ಯಕ್ಷರಾದ ಜಿ.ಕೆ ಸ್ವಾಮಿ (ವಿಜಯ್) ಅವರು ಮಾತನಾಡಿ ನಾವು ಮರ-ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ಪ್ರಕೃತಿ ಸಮೃದ್ಧವಾಗುತ್ತದೆ. ಬೇರೆ ಬೇರೆ ಕಾರಣಗಳಿಂದ ಮರಗಳನ್ನು ಕಡಿಯುತ್ತಿರುವ ಈ ಸಮಯದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು ನಮ್ಮ ಕರ್ತವ್ಯ.
ಧ್ರುವ ಆಸರೆ ಫೌಂಡೇಶನ್ ಸಂಸ್ಥಾಪಕ, ಅಧ್ಯಕ್ಷರು ಹಾಗೂ ನನ್ನ ಸಹೋದರನಾದ ಎಂ.ಜಿ ಕನಕ ಅವರು ಅವರ ಆಪ್ತ ಸ್ನೇಹಿತರೊಂದಿಗೆ ಉತ್ತಮವಾಗಿ ಸಮಾಜ ಸೇವೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ನಿಮಗೆ ಮತ್ತು ನಿಮ್ಮ ಗೆಳೆಯರಿಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಮಾಜ ಸೇವೆ ಮಾಡಲು ಚೇಳ್ಳಗುರ್ಕೀ ಎರ್ರಿತಾತನವರು ನಿಮಗೆ ಸುಖ-ಸಂತೋಷ, ಉನ್ನತ ಯಶಸ್ಸು ಮತ್ತು ಆರೋಗ್ಯ ಕೊಡಲೆಂದು ಪ್ರಾರ್ಥಿಸುತ್ತೇನೆ ಎಂದರು.

ನಂತರ ಮಾತನಾಡಿದ ಧ್ರುವ ಆಸರೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಎಂ.ಜಿ ಕನಕ ಅವರು ಮರಗಿಡಗಳು ಪ್ರಕೃತಿಯ ಸಂಪತ್ತು. ಅವಿದ್ದರೆ ನಾವು. ಇಲ್ಲದಿದ್ದರೆ ನಮಗೆ ಅಸ್ತಿತ್ವವೇ ಇರುವುದಿಲ್ಲ. ಮಾನವ ತನ್ನ ದುರಾಸೆಯಿಂದ ಪರಿಸರದ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾನೆ. ಇದೇ ಪರಿಸ್ಥಿತಿ ಮುಂದುವರಿದರೆ ದೊಡ್ಡ ಗಂಡಾಂತರ ಎದುರಿಸಬೇಕಾಗುತ್ತದೆ.
ಗಿಡಗಳು ನಮಗೆ ಒಳ್ಳೆಯ ವಾತಾವರಣವನ್ನು ನಿರ್ಮಿುತ್ತದೆ. ಗಿಡಮರಗಳನ್ನು ಬೆಳೆಸುವುದರಿಂದ ಪ್ರಕೃತಿಯ ಸಂರಕ್ಷಣೆಯಾದಂತಾಗುತ್ತದೆ. ಮಳೆ ಬೆಳೆ ಸಮೃದ್ಧಿಯಾಗುತ್ತದೆ. ಜೀವಿಗಳಿಗೆ ಬೇಕಾದ ಆಮ್ಲಜನಕವನ್ನು ಒದಗಿಸುತ್ತವೆ. ಇಷ್ಟೆಲ್ಲ ಪ್ರಯೋಜನ ನೀಡುವ ಗಿಡಗಳನ್ನು ಮನೆಯ ಮಕ್ಕಳಂತೆ ಸಾಕಿ ಸಲಹಬೇಕು. ಇದರಿಂದ ಜನರ ಆರೋಗ್ಯವು ವೃದ್ಧಿಯಾಗುತ್ತದೆ ಎಂದು ಎಂ.ಜಿ ಕನಕ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜೈ ಹನುಮಾನ್ ಸರ್ಜಾ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಬಿ.ಮಾರುತಿ, ಉಮಾರ್ ಫಾರೂಕ್, ಗುಗ್ಗರಹಟ್ಟಿ ಕಿರಣ್ ಕುಮಾರ್, ಚೇಳ್ಳಗುರ್ಕೀ ನಾಗರಾಜ್ (ಹುಬ್ಬಳ್ಳಿ), ಸಿ.ಗಂಗಾಧರ, ರಾಮಕೃಷ್ಣ, ಬೆಳಗಲ್ ಗಣೇಶ್, ಹಲಕುಂದಿ ಮೈನು, ಶಾಲೆಯ ಮುಖ್ಯ ಗುರುಗಳು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





