ದಕ್ಷಿಣ ಭಾರತದ ಖ್ಯಾತ ನಟ ಧನುಷ್ ಮತ್ತು ಬಹುಭಾಷಾ ನಟಿ ಮೃಣಾಲ್ ಠಾಕೂರ್ ಇಬ್ಬರೂ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸದ್ಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಐಶ್ವರ್ಯಾ ರಜನಿಕಾಂತ್ ಅವರಿಂದ ವಿಚ್ಛೇದನ ಪಡೆದ ನಂತರ ಒಂಟಿಯಾಗಿದ್ದ ಧನುಷ್, ಈಗ ಎರಡನೇ ಮದುವೆಯ ಬಗ್ಗೆ ಆಲೋಚಿಸುತ್ತಿದ್ದಾರೆ ಎಂಬ ಗಾಸಿಪ್‌ಗಳು ಕಾಲಿವುಡ್‌ನಿಂದ ಬಾಲಿವುಡ್‌ವರೆಗೆ ಹರಡುತ್ತಿವೆ.
ಮೃಣಾಲ್ ನಟನೆಯ ಸನ್ ಆಫ್ ಸರ್ದಾರ್ 2 ಸಿನಿಮಾದ ಪ್ರೀಮಿಯರ್ ಶೋನಲ್ಲಿ ನಟ ಧನುಷ್ ಹಾಗೂ ಮೃಣಾಲ್ ಠಾಕೂರ್ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆ ಸಮಾರಂಭದಲ್ಲಿ ಅವರಿಬ್ಬರ ನಡುವಿನ ಆಪ್ತತೆ ಕಂಡು ಅಭಿಮಾನಿಗಳು ಹುಬ್ಬೇರಿಸಿದ್ದರು. ಅಂದಿನಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಮೃಣಾಲ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ನಾವಿಬ್ಬರೂ ಕೇವಲ ಸ್ನೇಹಿತರು ಎಂದು ಸ್ಪಷ್ಟನೆ ನೀಡಲು ಯತ್ನಿಸಿದ್ದರೂ, ಗಾಸಿಪ್‌ಗಳಿಗೆ ಮಾತ್ರ ಬ್ರೇಕ್ ಬಿದ್ದಿಲ್ಲ.
ಮದುವೆಯ ಸುದ್ದಿ ಹರಡಿದ ಬೆನ್ನಲ್ಲೇ ಈ ಜೋಡಿಯ ವಯಸ್ಸಿನ ಅಂತರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಧನುಷ್1983ರ ಜುಲೈ 28ರಂದು ಜನಿಸಿದ ಧನುಷ್ ಅವರಿಗೆ ಈಗ 42 ವರ್ಷ. ಮೃಣಾಲ್ ಠಾಕೂರ್: 1992ರ ಆಗಸ್ಟ್ 1ರಂದು ಜನಿಸಿದ ಮೃಣಾಲ್ ಅವರಿಗೆ ಈಗ 33 ವರ್ಷ. ಇವರಿಬ್ಬರ ನಡುವೆ ಸುಮಾರು 9 ವರ್ಷಗಳ ವಯಸ್ಸಿನ ಅಂತರವಿದೆ. ಈ ಅಂತರವೇ ಈಗ ನೆಟ್ಟಿಗರ ನಡುವೆ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಫೆಬ್ರವರಿ 14 ರಂದು, ಅಂದರೆ ಪ್ರೇಮಿಗಳ ದಿನದಂದು ಈ ಜೋಡಿ ಹಸೆಮಣೆ ಏರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಧನುಷ್ ಅವರು ಈ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರನ್ನು 2004ರಲ್ಲಿ ಮದುವೆಯಾಗಿದ್ದರು. ಸುಮಾರು 20 ವರ್ಷಗಳ ಕಾಲ ಸಂಸಾರ ನಡೆಸಿದ್ದ ಈ ಜೋಡಿಗೆ ಯಾತ್ರ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ಕಳೆದ ಕೆಲವು ವರ್ಷಗಳಿಂದ ಇವರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಅಂತಿಮವಾಗಿ 2024ರಲ್ಲಿ ಈ ದಂಪತಿ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿದ್ದಾರೆ.
ಸೀರಿಯಲ್‌ಗಳ ಮೂಲಕ ನಟನೆ ಆರಂಭಿಸಿದ ಮೃಣಾಲ್ ಠಾಕೂರ್, ಇಂದು ಭಾರತೀಯ ಚಿತ್ರರಂಗದ ಮೋಸ್ಟ್ ವಾಟೆಂಡ್ ನಟಿಯರಲ್ಲಿ ಒಬ್ಬರು. ಸೀತಾ ರಾಮಂ ಚಿತ್ರದ ಮೂಲಕ ದಕ್ಷಿಣ ಭಾರತದ ಪ್ರೇಕ್ಷಕರ ಮನಗೆದ್ದಿರುವ ಇವರು, ಧನುಷ್ ಅವರಂತಹ ಪ್ರತಿಭಾವಂತ ನಟನ ಜೊತೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಸದ್ಯಕ್ಕೆ ಧನುಷ್ ಅಥವಾ ಮೃಣಾಲ್ ಈ ಮದುವೆ ಸುದ್ದಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲವಾದರೂ, ಈ ಬಗ್ಗೆ ಚರ್ಚೆಗಲು ಮಾತ್ರ ಹೆಚ್ಚಾಗಿವೆ.





