ದೀಪಿಕಾ ಪಡುಕೋಣೆಗೆ ಹಾಲಿವುಡ್ ವಾಕ್ ಆಫ್ ಫೇಮ್ ಗೌರವ

ಹಾಲಿವುಡ್ ವಾಕ್ ಆಫ್ ಫೇಮ್‌ನಲ್ಲಿ ಮೊದಲ ಭಾರತೀಯ ನಟಿ

Untitled design (81)

ನಟಿ ದೀಪಿಕಾ ಪಡುಕೋಣೆ ಭಾರತದ ಚಿತ್ರರಂಗಕ್ಕೆ ಅಪರೂಪದ ಗೌರವ ತಂದಿದ್ದಾರೆ. ಅಮೆರಿಕದ ಲಾಸ್ ಏಂಜಲೀಸ್‌ನ ಹಾಲಿವುಡ್ ಬೌಲೆವಾರ್ಡ್‌ನಲ್ಲಿರುವ ಪ್ರತಿಷ್ಠಿತ ಹಾಲಿವುಡ್ ವಾಕ್ ಆಫ್ ಫೇಮ್ನಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ನಟಿ ಎಂಬ ದಾಖಲೆಗೆ ದೀಪಿಕಾ ಪಾತ್ರರಾಗಿದ್ದಾರೆ. 2026ರ ಸಾಲಿನಲ್ಲಿ ದೀಪಿಕಾ ಅವರ ಹೆಸರನ್ನು ನಕ್ಷತ್ರ ಆಕೃತಿಯ ಒಳಗೆ ಈ ಐತಿಹಾಸಿಕ ರಸ್ತೆಯಲ್ಲಿ ನಮೂದಿಸಲಾಗುವುದು.

ಹಾಲಿವುಡ್ ವಾಕ್ ಆಫ್ ಫೇಮ್ ಎಂದರೆ, ಚಿತ್ರರಂಗ, ಸಂಗೀತ, ರಂಗಭೂಮಿ ಮತ್ತು ಇತರ ಕ್ಷೇತ್ರಗಳ ಕಲಾವಿದರಿಗೆ ಸಮರ್ಪಿತವಾದ ಗೌರವ ಸ್ಥಾನವಾಗಿದ್ದು, ಇಲ್ಲಿ ಆಯ್ಕೆಯಾದ ಕಲಾವಿದರ ಹೆಸರನ್ನು ನಕ್ಷತ್ರದ ಆಕಾರದಲ್ಲಿ ರಸ್ತೆಯ ಮೇಲೆ ಕೆತ್ತಲಾಗುತ್ತದೆ. ಈ ವರ್ಷ ದೀಪಿಕಾ ಜೊತೆಗೆ ಖ್ಯಾತ ನಟಿ ಎಮಿಲಿ ಬ್ಲಂಟ್ ಸೇರಿದಂತೆ ಕೆಲವು ಕಲಾವಿದರು ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ.

ಪ್ರತಿ ವರ್ಷ ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್‌ಗೆ ನೂರಾರು ನಾಮನಿರ್ದೇಶನಗಳು ಬಂದರೂ, ಕೇವಲ 20 ರಿಂದ 24 ಮಂದಿಯನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಈ ಬಾರಿಯ ಆಯ್ಕೆಯಲ್ಲಿ ದೀಪಿಕಾ ಪಡುಕೋಣೆಯವರ ಹೆಸರು ಸೇರಿದ್ದು, ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ. ಈ ನಕ್ಷತ್ರವನ್ನು ರಸ್ತೆಯಲ್ಲಿ ಅಳವಡಿಸಲು ಸುಮಾರು 85,000 ಡಾಲರ್ (ಅಂದಾಜು 75 ಲಕ್ಷ ರೂಪಾಯಿ) ವೆಚ್ಚವಾಗುತ್ತದೆ, ಇದನ್ನು ನಾಮನಿರ್ದೇಶನ ಮಾಡಿದವರು ಭರಿಸಬೇಕಾಗುತ್ತದೆ.

ದೀಪಿಕಾ ಅವರ ಚಿತ್ರರಂಗದ ಪಯಣ

ತಾಯಿಯಾದ ಬಳಿಕ ಚಿತ್ರರಂಗದಿಂದ ಸ್ವಲ್ಪ ವಿರಾಮ ಪಡೆದಿದ್ದ ದೀಪಿಕಾ, ಈಗ ಮತ್ತೆ ಸಕ್ರಿಯರಾಗಿದ್ದಾರೆ. ಅಟ್ಲಿ ನಿರ್ದೇಶನದ ಫ್ಯಾಂಟಸಿ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ನಟಿಸುತ್ತಿದ್ದಾರೆ. ಇದರ ಜೊತೆಗೆ ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ‘ಕಲ್ಕಿ 2898 ಎಡಿ’ ಚಿತ್ರದ ಎರಡನೇ ಭಾಗದಲ್ಲೂ ದೀಪಿಕಾ ನಟಿಸಲಿದ್ದಾರೆ.

ದೀಪಿಕಾ ಅವರ ಈ ಸಾಧನೆಯು ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುವ ಮಹತ್ವದ ಕ್ಷಣವಾಗಿದೆ.

Exit mobile version