ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಅಶ್ಲೀಲ ಮೆಸೇಜ್: ಕಿಡಿಗೇಡಿಗಳ ಅಕೌಂಟ್ ಡಿಲೀಟ್

Untitled design 2025 12 25T164259.528

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌‌ ಅಭಿಮಾನಿಗಳ ನಡುವಿನ ಸಂಘರ್ಷ ಗಂಭೀರ ಸ್ವರೂಪ ಪಡೆದುಕೊಂಡಿದೆ. ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ (Vijayalakshmi) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮತ್ತು ಅವಾಚ್ಯ ಸಂದೇಶಗಳನ್ನು ಪೋಸ್ಟ್ ಮಾಡಿದ್ದ ಪ್ರಕರಣ ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ವಿಜಯಲಕ್ಷ್ಮೀ ಅವರು ನೇರವಾಗಿ ಪೊಲೀಸ್ ಕಮಿಷನರ್ ಅವರಿಗೆ ದೂರು ಸಲ್ಲಿಸಿದ್ದು, ದೂರು ದಾಖಲಾಗುತ್ತಿದ್ದಂತೆ ಕಿಡಿಗೇಡಿಗಳು ತಮ್ಮ ಇನ್‌ಸ್ಟಾಗ್ರಾಂ ಖಾತೆಗಳನ್ನೇ ಡಿಲೀಟ್ ಮಾಡಿರುವುದು ಬೆಳಕಿಗೆ ಬಂದಿದೆ.

ವಿಜಯಲಕ್ಷ್ಮೀ ಅವರಿಗೆ ಕೆಲವು ಅನಾಮಧೇಯ ಸಾಮಾಜಿಕ ಜಾಲತಾಣ ಬಳಕೆದಾರರು ಅಶ್ಲೀಲ ಮೆಸೇಜ್‌ಗಳು ಹಾಗೂ ಅವಾಚ್ಯ ಕಾಮೆಂಟ್‌ಗಳನ್ನು ಮಾಡಿದ್ದರು. ಇದರಿಂದ ಬೇಸತ್ತ ವಿಜಯಲಕ್ಷ್ಮೀ ಅವರು ಕಮಿಷನರ್‌‌ಹೆ ದೂರು ಸಲ್ಲಿಸಿದ್ದಾರೆ. ತಮ್ಮ ದೂರಿನಲ್ಲಿ ಒಟ್ಟು 18 ಇನ್‌ಸ್ಟಾಗ್ರಾಂ ಖಾತೆಗಳ ವಿವರಗಳನ್ನು ನೀಡಿರುವ ಅವರು, ಈ ಖಾತೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಸೈಬರ್ ವಿಭಾಗವು ತನಿಖೆ ಆರಂಭಿಸಿದ್ದು, ಈ ವೇಳೆ ಕೆಲವು ಕಿಡಿಗೇಡಿಗಳು ತಮ್ಮ ಖಾತೆಗಳನ್ನು ಡಿಲೀಟ್ ಮಾಡಿರುವುದು ಪತ್ತೆಯಾಗಿದೆ.  ಆದರೆ ತಾಂತ್ರಿಕವಾಗಿ ಡಿಲೀಟ್ ಮಾಡಿದ ಖಾತೆಗಳ ಮಾಹಿತಿಯನ್ನೂ ಮರುಪಡೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಪ್ರಕರಣದ ಹಿಂದೆ ನಡೆಯುತ್ತಿರುವುದು ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಟ ಸುದೀಪ್ ಹೇಳಿಕೆಯೊಂದನ್ನು ನೀಡಿದ್ದರು. ಈ ಮಾತು ಪರೋಕ್ಷವಾಗಿ ದರ್ಶನ್ ಅಭಿಮಾನಿಗಳ ವಿರುದ್ಧ ಟಾಂಗ್ ಕೊಟ್ರು ಎಂಬ ಮಾತುಗಳು ಕೇಳಿ ಬಂದಿತ್ತು.

ಸುದೀಪ್ ಅವರ ಈ ಹೇಳಿಕೆಯ ನಂತರ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಯಾರ ಹೆಸರನ್ನೂ ಉಲ್ಲೇಖಿಸದೇ ಪರೋಕ್ಷವಾಗಿ ತಿರುಗೇಟು ನೀಡಿದ್ದರು. “ಕೆಲವರು ದರ್ಶನ್ ಅವರು ಇಲ್ಲದೇ ಇದ್ದಾಗ ಏನೇನೋ ಮಾತನಾಡುತ್ತಾರೆ. ವೇದಿಕೆಯಲ್ಲಿ, ಮೀಡಿಯಾದಲ್ಲಿ, ಹೊರಗೆ ಕುಳಿತು ಮಾತನಾಡುತ್ತಾರೆ. ಆದರೆ ದರ್ಶನ್ ಅವರು ಇದ್ದಾಗ ಆ ಜನರು ಬೆಂಗಳೂರಲ್ಲೇ ಇರ್ತಾರಾ ಇಲ್ವಾ ಅನ್ನೋದೇ ಗೊತ್ತಾಗಲ್ಲ” ಎಂದು ಹೇಳಿದ್ದರು. ಈ ಮೂಲಕ ಫ್ಯಾನ್ಸ್ ವಾರ್‌ ಮತ್ತಷ್ಟು ಹೆಚ್ಚಿತ್ತು.

 ಈ ನಡುವೆ ದರ್ಶನ್ ಅವರ ಆಪ್ತರಾದ ನಟ ಧನ್ವೀರ್ ಕೂಡ ವಿಜಯಲಕ್ಷ್ಮೀ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ದರ್ಶನ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿರುವ ಅವರು, “ಕಾಡಲ್ಲಿ ಸಾಕಷ್ಟು ಪ್ರಾಣಿಗಳು ಇರ್ತಾವೆ, ಆದರೆ ಆ ಕಾಡಿಗೆ ಒಂದೇ ಸಿಂಹ ಇರುತ್ತೆ” ಎಂಬ ಡೈಲಾಗ್ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

Exit mobile version