ಕಂಬಿ ಹಿಂದೆ ದರ್ಶನ್, 23ನೇ ವಿವಾಹ ವಾರ್ಷಿಕೋತ್ಸವ ಒಂಟಿಯಾಗಿ ಆಚರಿಸುತ್ತಿರುವ ವಿಜಯಲಕ್ಷ್ಮಿ

BeFunky collage (21)

ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ದಂಪತಿಯ 23ನೇ ವಿವಾಹ ವಾರ್ಷಿಕೋತ್ಸವ ಇಂದು. ಆದರೆ ಈ ಬಾರಿ ಸಂಭ್ರಮಕ್ಕೆ ಬದಲಾಗಿ ನೋವು ಮತ್ತು ಒಂಟಿತನವೇ ಮುಂಚೂಣಿಯಲ್ಲಿದೆ. ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಈ ವರ್ಷ ಒಬ್ಬರೇ ಈ ವಿಶೇಷ ದಿನವನ್ನು ಕಳೆಯುತ್ತಿದ್ದಾರೆ.

ಕಳೆದ ವರ್ಷ ಬೇಲ್ ಮೇಲೆ ಹೊರಬಂದಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ಭರ್ಜರಿ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದರು. ‘ಮುದ್ದು ರಾಕ್ಷಸಿ’ ಹಾಡಿಗೆ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದ್ದರು. ದರ್ಶನ್ ವಿಜಯಲಕ್ಷ್ಮಿಗಾಗಿ ಹಿಂದಿ ಗೀತೆ ಹಾಡಿದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಆದರೆ ಈ ವರ್ಷ ಪರಿಸ್ಥಿತಿ ವಿಭಿನ್ನವಾಗಿದೆ.

ವಿಜಯಲಕ್ಷ್ಮಿ ಒಂಟಿಯಾಗಿ ನೋವು ವ್ಯಕ್ತಪಡಿಸಿದ್ದಾರೆ

ಗಂಡ ಜೈಲಿನಲ್ಲಿರುವಾಗಲೂ ವಿಜಯಲಕ್ಷ್ಮಿ ಪತಿ ಪರವಾಗಿ ಧೈರ್ಯವಾಗಿ ನಿಂತಿದ್ದಾರೆ. ಕಾನೂನು ಹೋರಾಟ ಮುಂದುವರಿಸಿದ್ದಾರೆ. ಇದನ್ನು ದರ್ಶನ್ ಅಭಿಮಾನಿಗಳು ಬಹಳ ಮೆಚ್ಚಿಕೊಂಡಿದ್ದಾರೆ. ಈ ವರ್ಷ ವಿಜಯಲಕ್ಷ್ಮಿ ದರ್ಶನ್ ಫೋಟೋ ಶೇರ್ ಮಾಡಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ದರ್ಶನ್ ಮತ್ತು ವಿಜಯಲಕ್ಷ್ಮಿ 23 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರ ಮದುವೆ ಆಮಂತ್ರಣ ಪತ್ರಿಕೆ ಇತ್ತೀಚೆಗೆ ಮತ್ತೆ ವೈರಲ್ ಆಗಿದೆ. ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ದಂಪತಿಗೆ ಶುಭಕೋರಿದ್ದಾರೆ.

ದರ್ಶನ್ ಅಭಿಮಾನಿಗಳ ಪ್ರತಿಕ್ರಿಯೆ

ದರ್ಶನ್ ಮೇಲೆ ಬಂದ ಆರೋಪಗಳ ಹೊರತಾಗಿಯೂ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅನೇಕರು “ದಾಸ್ ಶೀಘ್ರದಲ್ಲಿ ಹೊರಬರಲಿ” ಎಂದು ಪ್ರಾರ್ಥಿಸುತ್ತಿದ್ದಾರೆ. ವಿಜಯಲಕ್ಷ್ಮಿ ಅವರ ಬೆಂಬಲಕ್ಕೆ ಅಭಿಮಾನಿಗಳು “ಧೈರ್ಯವಂತಿ” ಎಂದು ಹೊಗಳುತ್ತಿದ್ದಾರೆ.

ಈ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮಕ್ಕಿಂತ ಹೆಚ್ಚಾಗಿ ಕಾತರ ಮತ್ತು ನಿರೀಕ್ಷೆಯ ದಿನವಾಗಿದೆ. ದರ್ಶನ್ ಜೈಲಿನಿಂದ ಹೊರಬಂದು ಮತ್ತೆ ಕುಟುಂಬದೊಂದಿಗೆ ಸಂತೋಷದಿಂದಿರುವ ದಿನ ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

Exit mobile version