ಹಣ, ಆಸ್ತಿ, ಅಂತಸ್ತು, ಸ್ಟಾರ್‌ಡಮ್ ಎಲ್ಲಾ ಬಿಟ್ಟು ಜೈಲಲ್ಲಿ ನಿರ್ಗತಿಕನಂತೆ ಮೌನಕ್ಕೆ ಜಾರಿದ್ದಾರೆ ಡಿಬಾಸ್ ದರ್ಶನ್. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಾಸನಿಗೆ ಪರಪ್ಪನ ಅಗ್ರಹಾರ ದಿಗ್ಬಂಧನ ವಿಧಿಸಿದ್ದು, ಇಲ್ಲಿಯ ತನಕ 11 ಸಾಕ್ಷಿಗಳಷ್ಟೇ ವಿಚಾರಣೆ ಆಗಿದೆ. ಎಲ್ಲಾ ಕಡೆ ದಚ್ಚುಗೆ ಹಿನ್ನಡೆ ಆಗ್ತಿದ್ದು, ಕುಟುಂಬಸ್ಥರು ಹಾಗೂ ಆತನ ಅಭಿಮಾನಿಗಳಲ್ಲಿ ಆತಂಕ ಮತ್ತಷ್ಟು ಹೆಚ್ಚಿದೆ.
ದಾಸ ದರ್ಶನ್ ಜೈಲು ಹಕ್ಕಿಯಾಗಿ ಬರೋಬ್ಬರಿ 8 ತಿಂಗಳಾಗ್ತಿದೆ. ಇಂದಿಗೂ ಹೊರ ಬರುವ ಒಂದೇ ಒಂದು ಕುರುಹು ಸಿಕ್ಕಿಲ್ಲ. ಗೆಳತಿ ಪವಿತ್ರಾ ಗೌಡಗಾಗಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿ, ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ, ಥಳಿಸಿ, ಕೊಲೆ ಮಾಡಿರೋ ಆರೋಪದಡಿ ಪರಪ್ಪನ ಅಗ್ರಹಾರ ಸೇರಿದ್ದಾರೆ ಚಾಲೆಂಜಿಂಗ್ ಸ್ಟಾರ್. ಆದ್ರೆ ಅಲ್ಲಿ ಯಾವ ಸ್ಟಾರ್‌ಗಿರಿನೂ ವರ್ಕ್ ಆಗ್ತಿಲ್ಲ. ಹಣ, ಆಸ್ತಿ, ಅಂತಸ್ತು, ಫ್ಯಾನ್ ಫಾಲೋಯಿಂಗ್, ನೇಮು, ಫೇಮು ಇದ್ರೂ ವೇಸ್ಟ್. ಯಾಕಂದ್ರೆ ಕಾನೂನು ಎಲ್ಲರಿಗೂ ಒಂದೇನೇ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು. ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು.

ಜೈಲಲ್ಲಿ ದಾಸನಿಗೆ ದಿಗ್ಬಂಧನ.. 11 ಸಾಕ್ಷಿಗಳಷ್ಟೇ ವಿಚಾರಣೆ..!!
ಕಾನೂನು ಹೋರಾಟದಲ್ಲಿ ಹಿನ್ನಡೆ.. ಮೌನಕ್ಕೆ ಜಾರಿದ ದಚ್ಚು
ಸದ್ಯ ಕ್ವಾರಂಟೇನ್ ಸೆಲ್‌ನಲ್ಲಿರೋ ದರ್ಶನ್ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ ಜೈಲು ಅಧಿಕಾರಿಗಳು. ಅದ್ರಲ್ಲೂ ಸೆಂಟ್ರಲ್ ಜೈಲ್ ವಿಡಿಯೋಸ್ ವೈರಲ್ ಆದ ಹಿನ್ನೆಲೆ ಕೈದಿಗಳ ಕೆಲಸಗಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರಂತೆ. ಅದಲು ಬದಲು ಮಾಡೋ ಮೂಲಕ ಕೈದಿಗಳು ಜಗಳ ಆಡುವಂತೆ ಮಾಡಿದ್ದಾರೆ ಎನ್ನಲಾಗ್ತಿದೆ. ಅಲ್ಲದೆ, ಒಂದಷ್ಟು ರೌಡಿ ಕೈದಿಗಳನ್ನ ಬೇರೆಡೆಗೆ ಶಿಫ್ಟ್ ಮಾಡುವ ಕಾರ್ಯ ಕೂಡ ನಡೆಯುತ್ತಿದೆಯಂತೆ.

ಜೈಲ್ ವಿಡಿಯೋಸ್ ವೈರಲ್..ಕೈದಿಗಳಿಗೆ ಮತ್ತಷ್ಟು ಕಟ್ಟುನಿಟ್ಟು
ಕ್ವಾರಂಟೇನ್ ಸೆಲ್..ಸೆಲ್‌ಗೆ ಮೆಸ್..ಜೈಲ್ ಮ್ಯಾನುವಲ್..!
ಸದ್ಯ ದರ್ಶನ್ ಇರೋ ಸೆಲ್‌ಗೆ ಸುತ್ತಲೂ ಮೆಸ್ ಅಳವಡಿಕೆ ಮಾಡಲಾಗಿದೆಯಂತೆ. ದರ್ಶನ್‌ನ ಯಾರೂ ನೋಡೋಕೆ ಆಗಲ್ಲ. ಮಾತಾಡೋದಂತೂ ಕಷ್ಟ ಕಷ್ಟ. ದರ್ಶನ್‌ನ ಹೊರಗಡೆ ಓಡಾಡೋಕೆ ಬಿಡುವ ಸಂದರ್ಭದಲ್ಲಿ ಅಲ್ಲಿ ಬೇಱವ ಕೈದಿಗಳೂ ಇರದಂತೆ ನೋಡಿಕೊಳ್ತಿದ್ದಾರೆ ಜೈಲಾಧಿಕಾರಿಗಳು. ಎಲ್ಲವೂ ಜೈಲು ಮ್ಯಾನುವಲ್ ಪ್ರಕಾರವೇ ನಡೆಯುತ್ತಿದ್ದು, ದಾಸನಿಗೆ ಹೆಚ್ಚುವರಿ ಸೌಲಭ್ಯಗಳೇನೂ ಸಿಕ್ಕಿಲ್ಲ ಅನ್ನೋದು ಸ್ಪಷ್ಟ.

ಸತತ ಕಾನೂನು ಹೋರಾಟಗಳನ್ನ ನಡೆಸ್ತಾ ಬರ್ತಿರೋ ನಟ ದರ್ಶನ್‌ಗೆ ಬಹುತೇಕ ಎಲ್ಲದರಲ್ಲೂ ಹಿನ್ನಡೆಯೇ ಆಗಿದೆ. ಮೂಲಭೂತ ಹಕ್ಕುಗಳಿಗಾಗಿ ಹೋರಾಡಿದ್ರೂ ಸಹ, ಜೈಲು ಕೈಪಿಡಿ ಪ್ರಕಾರ ಏನೆಲ್ಲಾ ಕೊಡೋಕೆ ಸಾಧ್ಯವೋ ಅದನ್ನಷ್ಟೇ ನೀಡಲಾಗಿದೆ. ಸದ್ಯ ಕೋರ್ಟ್ ಟ್ರಯಲ್ಸ್ ಶುರುವಾಗಿದ್ದು, ಪ್ರತೀ ಸೋಮವಾರ ಹಾಗೂ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗಳು ನಡೆಯುತ್ತಿವೆ.
ಮೂಲಗಳ ಪ್ರಕಾರ ಇಲ್ಲಿಯ ತನಕ ಕೇವಲ 10 ರಿಂದ 11 ಸಾಕ್ಷಿಗಳ ವಿಚಾರಣೆ ನಡೆದಿದೆ. ಕಳೆದ ವಾರ ಎರಡು ಸಾಕ್ಷಿಗಳ ವಿಚಾರಣೆಯಷ್ಟೇ ನಡೆದಿದೆ. ಒಟ್ಟು 272 ಸಾಕ್ಷಿಗಳಿದ್ದು ಅವುಗಳ ಪೈಕಿ ಇನ್ನೂ 10-11 ಸಾಕ್ಷಿಗಳಷ್ಟೇ ವಿಚಾರಣೆ ಆಗಿದೆ. ಕೋರ್ಟ್ ಟ್ರಯಲ್ಸ್‌ನಲ್ಲಿ ಉಳಿದ 261 ಸಾಕ್ಷಿಗಳ ಸುದೀರ್ಘ ವಿಚಾರಣೆ ಆಗಬೇಕಿದೆ. ಅದಕ್ಕೆ ಸಾಕಷ್ಟು ಕಾಲಾವಕಾಶ ಕೂಡ ಬೇಕಾಗಿದೆ. ಇದೆಲ್ಲವನ್ನ ಅವಲೋಕಿಸಿದ್ರೆ ಸದ್ಯಕ್ಕಂತೂ ದಾಸನಿಗಿಲ್ಲ ಬಿಡುಗಡೆ ಭಾಗ್ಯ ಅನ್ನೋದು ಮನದಟ್ಟಾಗುತ್ತೆ.





