ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ಗೆ ಇಂದು ನಿರ್ಣಾಯಕ ದಿನ

ಇಂದು ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ವಿಚಾರಣೆ

0 (7)

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 131 ದಿನಗಳ ಕಾಲ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಚಿತ್ರನಟ ದರ್ಶನ್ ತೂಗುದೀಪ ಅವರಿಗೆ ಇಂದು ನಿರ್ಣಾಯಕ ದಿನವಾಗಿದೆ. ಕರ್ನಾಟಕ ಹೈಕೋರ್ಟ್ ದರ್ಶನ್, ಪವಿತ್ರಾ ಗೌಡ, ಮತ್ತು ಇತರ ಆರೋಪಿಗಳಿಗೆ ಮಂಜೂರು ಮಾಡಿದ ಜಾಮೀನನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ದ್ವಿ-ಸದಸ್ಯ ಪೀಠವು ಈ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲಿದ್ದು, ವಿಸ್ತೃತ ವಾದ-ಪ್ರತಿವಾದಗಳು ನಡೆಯುವ ಸಾಧ್ಯತೆಯಿದೆ. ಕಳೆದ ಜನವರಿ 24, 2025ರಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದ ಬಗ್ಗೆ ಪ್ರಾಥಮಿಕ ಮಾಹಿತಿ ಆಲಿಸಿತ್ತು. ದರ್ಶನ್‌ರವರ ಪಾತ್ರ, ಪವಿತ್ರಾ ಗೌಡ ಅವರ ಸಂಬಂಧ, ಮತ್ತು ದರ್ಶನ್ ಅವರ ಅಭಿಮಾನಿಗಳು ಕೊಲೆಯಲ್ಲಿ ಹೇಗೆ ಭಾಗಿಯಾದರು ಎಂಬ ಬಗ್ಗೆ ಬೆಂಗಳೂರು ಪೊಲೀಸರ ಪರ ವಕೀಲರು ವಾದ ಮಂಡಿಸಿದ್ದರು.

ಕೋರ್ಟ್ ಎರಡು ಪ್ರಮುಖ ಪ್ರಶ್ನೆಗಳನ್ನು ಪೊಲೀಸರ ಮುಂದಿಟ್ಟಿತ್ತು:

  1. ಕೊಲೆಯಲ್ಲಿ ದರ್ಶನ್‌ರವರ ನೇರ ಭಾಗಿತ್ವ ಇದೆಯೇ?

  2. ಈ ಆರೋಪಕ್ಕೆ ಪೂರಕವಾದ ಸಾಕ್ಷ್ಯಗಳೇನು?

ಇಂದಿನ ವಿಚಾರಣೆಯಲ್ಲಿ ಬೆಂಗಳೂರು ಪೊಲೀಸರು ತಮ್ಮ ವಕೀಲರ ಮೂಲಕ ದರ್ಶನ್‌ರವರ ಪಾತ್ರಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ದರ್ಶನ್‌ರವರ ಪರ ವಕೀಲರು ತಮ್ಮ ವಾದವನ್ನು ಮಂಡಿಸಲಿದ್ದಾರೆ. ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನನ್ನು ರದ್ದುಗೊಳಿಸಬೇಕೆ ಅಥವಾ ಮುಂದುವರೆಸಬೇಕೆ ಎಂಬ ಬಗ್ಗೆ ಕೋರ್ಟ್ ತೀರ್ಮಾನ ಕೈಗೊಳ್ಳಲಿದೆ.

ಪ್ರಸ್ತುತ, ದರ್ಶನ್ ತೂಗುದೀಪ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ ಮತ್ತು ವಿದೇಶ ಪ್ರವಾಸಕ್ಕೂ ತೆರಳಿದ್ದಾರೆ. ಈ ನಡುವೆ ನಡೆಯುತ್ತಿರುವ ಸುಪ್ರೀಂ ಕೋರ್ಟ್‌ನ ವಿಚಾರಣೆಯು ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿದೆ.

Exit mobile version