ಬೆಂಗಳೂರು, ಸೆಪ್ಟಂಬರ್ 30: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತರಾಗಿರುವ ಖ್ಯಾತ ನಟ ದರ್ಶನ್ ತೂಗುದೀಪ ಅವರು ಹೆಚ್ಚುವರಿ ದಿಂಬು ಹಾಸಿಗೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಬೆಂಗಳೂರಿನ 57ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು. ಈ ವಿಚಾರಣೆಯಲ್ಲಿ ನ್ಯಾಯಾಲಯವು ಆದೇಶವನ್ನು ಅಕ್ಟೋಬರ್ 9ಕ್ಕೆ ಕಾಯ್ದಿರಿಸಿದೆ. ಜೈಲಾಧಿಕಾರಿಗಳು ಕೋರ್ಟ್ ಆದೇಶವನ್ನು ಸರಿಯಾಗಿ ಪಾಲಿಸದಿರುವ ಆರೋಪದ ಮೇಲೆ ದರ್ಶನ್‌ರ ವಕೀಲರು ಸಲ್ಲಿಸಿದ್ದ ಅರ್ಜಿಯು ಗಮನ ಸೆಳೆದಿದೆ.
ವಿಚಾರಣೆಯ ಸಂದರ್ಭದಲ್ಲಿ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಮತ್ತು ಸರ್ಕಾರಿ ವಕೀಲ (ಎಸ್‌ಪಿಪಿ) ಪ್ರಸನ್ನಕುಮಾರ್ ನಡುವೆ ತೀವ್ರ ವಾದ-ಪ್ರತಿವಾದ ನಡೆಯಿತು. ಸುನೀಲ್ ಕುಮಾರ್, ದರ್ಶನ್‌ರನ್ನು 45 ದಿನಗಳಿಂದ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ ಎಂದು ಆಕ್ಷೇಪಿಸಿದರು. “ಜೈಲಿನ ಎಲ್ಲಾ ವಿಐಪಿಗಳಿಗೂ ಇದೇ ರೀತಿಯ ಭದ್ರತೆ ಇದೆಯೇ? ದರ್ಶನ್‌ಗೆ ಮಾತ್ರ ಯಾಕೆ ಇಷ್ಟು ಸೆಕ್ಯೂರಿಟಿ? ಕ್ವಾರಂಟೈನ್ ಸೆಲ್‌ನಲ್ಲಿ 14 ದಿನ ಮಾತ್ರ ಇಡಬೇಕು, ಆದರೆ ದರ್ಶನ್‌ಗೆ ಇಷ್ಟೊಂದು ದಿನ ಯಾಕೆ?” ಎಂದು ಅವರು ಪ್ರಶ್ನಿಸಿದರು.
ಈ ವಾದಕ್ಕೆ ಎಸ್‌ಪಿಪಿ ಪ್ರಸನ್ನಕುಮಾರ್ ತಿರುಗೇಟು ನೀಡಿದರು. “ಕ್ವಾರಂಟೈನ್ ಸೆಲ್ ಕೂಡ ಜೈಲಿನ ಒಂದು ಭಾಗವೇ. ದರ್ಶನ್‌ರನ್ನು ಎಬಿಸಿಡಿ ಬ್ಯಾರಕ್‌ಗೆ ಶಿಫ್ಟ್ ಮಾಡಬೇಕೆ? ಇವರು ಕೊಲೆ ಆರೋಪಿಯಾಗಿದ್ದು, ಯಾವ ಸೆಲ್‌ನಲ್ಲಿದ್ದರೂ ಜೈಲಿನಲ್ಲೇ ಇರುತ್ತಾರೆ,” ಎಂದು ವಾದಿಸಿದರು. ಜೈಲಿನ ಮ್ಯಾನುಯಲ್‌ನಲ್ಲಿ ಕ್ವಾರಂಟೈನ್ ಪದವು 11 ಕಡೆಗಳಲ್ಲಿ ಉಲ್ಲೇಖವಾಗಿದೆ ಎಂದು ತೋರಿಸಿದ ಎಸ್‌ಪಿಪಿ ಪ್ರಸನ್ನಕುಮಾರ್, “ಕ್ವಾರಂಟೈನ್ ಸೆಲ್‌ನಿಂದ ಶಿಫ್ಟ್ ಮಾಡಲೇಬೇಕೆಂಬ ಯಾವುದೇ ಕಡ್ಡಾಯ ಷರತ್ತಿಲ್ಲ,” ಎಂದರು.
ಸುನೀಲ್ ಕುಮಾರ್, ಜೈಲಿನಲ್ಲಿ ದರ್ಶನ್‌ಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂದು ಆರೋಪಿಸಿದರು. “ಭದ್ರತೆ ಕಾರಣದಿಂದ ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ ಎನ್ನುವುದು ಸರಿಯಲ್ಲ. ಜೈಲಿನಲ್ಲಿ ಮೊಬೈಲ್, ಸಿಗರೇಟ್‌ನಂತಹ ವಸ್ತುಗಳು ಹೇಗೆ ಬಂದವು? ಇದಕ್ಕೆ ಜೈಲಾಧಿಕಾರಿಗಳ ವಿರುದ್ಧವೇ ಎಫ್‌ಐಆರ್ ದಾಖಲಾಗಿತ್ತು,” ಎಂದು ವಾದಿಸಿದರು.
ಈ ವಾದಕ್ಕೆ ಎಸ್‌ಪಿಪಿ, “ಇತರ ಕೇಸ್‌ಗಳ ಬಗ್ಗೆ ಈಗ ಚರ್ಚಿಸುವುದು ಬೇಡ. ದರ್ಶನ್‌ಗೆ ಏನು ಬೇಕು, ಅದನ್ನು ಮಾತ್ರ ಕೇಳಿ,” ಎಂದು ತಿರುಗೇಟು ನೀಡಿದರು. ನ್ಯಾಯಾಧೀಶರು ಕೂಡ, “ಸಮಯ ಕಡಿಮೆ ಇದೆ, ಈ ಕೇಸ್‌ಗೆ ಸಂಬಂಧಿಸಿದಂತೆ ಮಾತ್ರ ಮಾತಾಡಿ,” ಎಂದು ಸೂಚಿಸಿದರು.
ದರ್ಶನ್ ಪರ ವಕೀಲರು, ಜೈಲಿನಲ್ಲಿ ಇತರ ಕೈದಿಗಳಿಗೆ ಒಂದು ನ್ಯಾಯ ಮತ್ತು ದರ್ಶನ್‌ಗೆ ಮತ್ತೊಂದು ನ್ಯಾಯ ಇದೆ ಎಂದು ಆರೋಪಿಸಿದರು. “ರೇಪಿಸ್ಟ್ ಉಮೇಶ್ ರೆಡ್ಡಿಗೆ ಐಷಾರಾಮಿ ಸೌಲಭ್ಯ ನೀಡಲಾಗಿತ್ತು. ದರ್ಶನ್‌ಗೆ ಯಾಕೆ ಇಂತಹ ವಿಶೇಷ ಚಿಕಿತ್ಸೆ?” ಎಂದು ಪ್ರಶ್ನಿಸಿದ ಸುನೀಲ್, ದಾಖಲೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಆದರೆ, ನ್ಯಾಯಾಧೀಶರು ಇತರ ಕೇಸ್‌ಗಳನ್ನು ಚರ್ಚಿಸಲು ಸಮಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಕ್ವಾರಂಟೈನ್ ಸೆಲ್‌ನಿಂದ ದರ್ಶನ್‌ರನ್ನು ಶಿಫ್ಟ್ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದು ಎಸ್‌ಪಿಪಿ ಪ್ರಸನ್ನಕುಮಾರ್ ವಾದಿಸಿದರು. “ಜೈಲಿನ ಮ್ಯಾನುಯಲ್‌ನಲ್ಲಿ ಕೆಲವು ಷರತ್ತುಗಳಿವೆ. ರೂಲ್ಸ್ ಉಲ್ಲಂಘನೆಯಾದರೆ ಮಾತ್ರ ಬದಲಾವಣೆಗೆ ಅವಕಾಶವಿದೆ. ಸದ್ಯಕ್ಕೆ ಶಿಫ್ಟ್ ಮಾಡುವ ಅಗತ್ಯವಿಲ್ಲ,” ಎಂದು ಸ್ಪಷ್ಟಪಡಿಸಿದರು.
ಈ ವಿಚಾರಣೆಯು ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ದೊರೆಯುತ್ತಿದೆಯೇ ಎಂಬ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಕೋರ್ಟ್‌ನ ಆದೇಶವು ಈ ವಿವಾದಕ್ಕೆ ಯಾವ ರೀತಿಯ ತೀರ್ಮಾನ ಕೊಡಲಿದೆ ಎಂಬುದು ಅಕ್ಟೋಬರ್ 9ರಂದು ತಿಳಿಯಲಿದೆ.