ಮೈಸೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ ಜೈಲು ಸೇರಿದ್ದಾರೆ. ಮಗನ ಜೈಲುವಾಸದ ನಂತರ ದರ್ಶನ್‌ರ ತಾಯಿ ಮೀನಾ ತೂಗುದೀಪ ಅವರು ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ಶುಕ್ರವಾರ ಅವರು ಮೈಸೂರು ಅರಮನೆಗೆ ಭೇಟಿ ನೀಡಿದ್ದಾರೆ.
ಮೀನಾ ತೂಗುದೀಪ ಅವರು ಮೈಸೂರು ಅರಮನೆಯ ಆವರಣದಲ್ಲಿರುವ ದಸರಾ ಗಜಪಡೆಯ ಜೊತೆ ಸಮಯ ಕಳೆದಿದ್ದಾರೆ. ದಸರಾ ಆನೆಗಳಾದ ಅಭಿಮನ್ಯು ಮತ್ತು ಭೀಮ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಸಂದರ್ಭದಲ್ಲಿ ಮೀನಾ ಅವರೊಂದಿಗೆ ಅವರ ಮೊಮ್ಮಗ ಚಂದು ಕೂಡ ಇದ್ದರು.
ಈ ಹಿಂದೆ, ಏಪ್ರಿಲ್ 2025ರಲ್ಲಿ ಮೀನಾ ತೂಗುದೀಪ ಅವರು ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಾನು ಇಂದು ನಂಜುಡೇಶ್ವರನ ದರ್ಶನ ಪಡೆದೆ. ವಿಶೇಷವಾದದ್ದೇನೂ ಇಲ್ಲ. ಸರ್ವ ಜನ ಸುಖಿನೋ ಭವಂತು, ಎಲ್ಲರನ್ನೂ ಭಗವಂತ ಚೆನ್ನಾಗಿರಿಸಲಿ,” ಎಂದು ಹೇಳಿದ್ದರು. ದರ್ಶನ್ ಕುರಿತು ಒಂದು ಪ್ರಶ್ನೆಗೆ ಉತ್ತರಿಸಿದ ಅವರು, “ಅವನು ಚೆನ್ನಾಗಿದ್ದಾನೆ. ರಾಜಸ್ಥಾನದಲ್ಲಿ ‘ಡೆವಿಲ್’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿದ್ದಾನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮಗನ ಮೇಲಿರಲಿ,” ಎಂದಿದ್ದರು. ಆ ಸಮಯದಲ್ಲಿ ದರ್ಶನ್ ಜಾಮೀನಿನ ಮೇಲೆ ಹೊರಗಿದ್ದು, ‘ಡೆವಿಲ್’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
ವಿಜಯಲಕ್ಷ್ಮಿಗೆ ಅಶ್ಲೀಲ ಸಂದೇಶಗಳ ಕಾಟ
ಇತ್ತೀಚೆಗೆ, ನಟಿ ರಮ್ಯಾ ಜೊತೆಗೆ ದರ್ಶನ್‌ರ ಪತ್ನಿ ವಿಜಯಲಕ್ಷ್ಮಿಗೂ ಕಿಡಿಗೇಡಿಗಳಿಂದ ಅಶ್ಲೀಲ ಕಾಮೆಂಟ್‌ಗಳು ಬಂದಿವೆ. ಈ ಕುರಿತು ನೆಲಮಂಗಲದ ಭಾಸ್ಕರ್ ಪ್ರಸಾದ್ ಎಂಬವರು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ, ವಿಜಯಲಕ್ಷ್ಮಿ ದರ್ಶನ್ ಮತ್ತು ಅವರ ಮಗ ವಿನೀಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಕಾಮೆಂಟ್‌ಗಳು ಮಾನಸಿಕ ಕಿರುಕುಳವನ್ನುಂಟುಮಾಡುವುದರ ಜೊತೆಗೆ ಮಹಿಳೆಯ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಕೋರಲಾಗಿದೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ಈ ವಿಷಯದ ಕುರಿತು ತನಿಖೆಗೆ ಆದೇಶಿಸಿ, 15 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ವಿಜಯಲಕ್ಷ್ಮಿ ದರ್ಶನ್‌ರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಕಾಮೆಂಟ್‌ಗಳು ಬಂದಿವೆ. ಈ ಹಿಂದೆ ನಟಿ ರಮ್ಯಾ ಅವರಿಗೂ ಇದೇ ರೀತಿಯ ಕಿರುಕುಳವಾಗಿತ್ತು. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ,” ಎಂದು ತಿಳಿಸಿದರು.