ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಖ್ಯ ಆರೋಪಿ, ನಟ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ “ಡಿ ಬಾಸ್” ಚಾಳಿ ಮುಂದುವರೆಸುತ್ತಿದ್ದಾರೆ ಎಂಬ ಆರೋಪಗಳು ಜೋರಾಗಿವೆ. ಸಹಕೈದಿಗಳು ದರ್ಶನ್ ಹಾಗೂ ಆತನ ಸಹಚರ ನಾಗರಾಜ್ ನೀಡುತ್ತಿರುವ ಚಿತ್ರಹಿಂಸೆಗೆ ಬೇಸತ್ತು ಬೇರೆ ಜೈಲಿಗೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಎರಡು ದಿನಗಳ ಹಿಂದೆ ನಟ ದರ್ಶನ್ ಸೆಲ್‌ನಲ್ಲಿ ದೊಡ್ಡ ಗಲಾಟೆ ನಡೆದಿದೆ. ಮಲಗಿದ್ದ ಸಹಕೈದಿಗಳನ್ನ ಕಾಲಿನಿಂದ ಒದ್ದು ಎಬ್ಬಿಸಿ, “ಏಳ್ರಿ ಬೇಗ” ಎಂದು ಅವಾಚ್ಯ ಶಬ್ದಗಳಲ್ಲಿ ಬೈದಿದ್ದಾರೆ ಎಂಬ ಆರೋಪ ಇದೆ. ಈ ಘಟನೆಯಲ್ಲಿ ದರ್ಶನ್ ಜೊತೆಗೆ ನಾಗರಾಜ್ ಕೂಡ ಭಾಗಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಜಗಳ ಉದ್ವಿಗ್ನಗೊಂಡಾಗ ಜೈಲಾಧಿಕಾರಿಗಳು ಧಾವಂತ ಬಂದು ಪ್ರಕರಣವನ್ನು ನಿಯಂತ್ರಿಸಿದ್ದಾರೆ.
ಈ ಘಟನೆಯ ಬಳಿಕ ಆರೋಪಿಗಳಾದ ಅನುಕುಮಾರ್ ಮತ್ತು ಜಗದೀಶ್ ಅವರು ನಟ ದರ್ಶನ್ ಜೊತೆ ಇರುವುದು ಸಾಧ್ಯವಿಲ್ಲ ಎಂದು ಬೇರೆ ಜೈಲಿಗೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಜೈಲು ಅಧಿಕಾರಿಗಳು ಅದನ್ನು ವಜಾ ಮಾಡಿದ್ದಾರೆ. ಇದರಿಂದ ಈ ಇಬ್ಬರೂ ಇನ್ನಷ್ಟು ಚಿತ್ರಹಿಂಸೆಗೆ ಒಳಗಾಗುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಜೈಲು ನಿಯಮಗಳ ಪ್ರಕಾರ ಎಲ್ಲಾ ಕೈದಿಗಳು ತಮ್ಮ ಸೆಲ್, ಶೌಚಾಲಯ ಸ್ವಚ್ಛಗೊಳಿಸಬೇಕು, ಬಟ್ಟೆ ತಾವೇ ತೊಳೆಯಬೇಕು. ಆದರೆ ದರ್ಶನ್ ಈ ನಿಯಮಗಳನ್ನು ಸಂಪೂರ್ಣ ಕಡೆಗಣಿಸುತ್ತಿದ್ದಾರೆ ಎಂಬ ಆರೋಪವಿದೆ. ಹಿಂದೆ ಜೈಲಿನ ಫೋಟೋಗಳು ವೈರಲ್ ಆದ ಬಳಿಕ ಜೈಲು ಆಡಳಿತ ರೂಲ್ಸ್ ಫುಲ್ ಟಫ್ ಮಾಡಿದೆ ಎನ್ನಲಾಗಿದೆ.
ದರ್ಶನ್ ಪ್ರಕರಣದ ಇತರ ಆರೋಪಿಗಳಾದ ನಾಗರಾಜ್ ಹೊರತುಪಡಿಸಿ ಉಳಿದವರಿಗೆ ನಟ ದರ್ಶನ್ ಮತ್ತು ಆತನ ಸ್ನೇಹಿತರಿಂದ ನಿರಂತರ ಮಾನಸಿಕ-ದೈಹಿಕ ಚಿತ್ರಹಿಂಸೆ ನೀಡಲಾಗುತ್ತಿದೆ ಎಂಬ ದೂರುಗಳು ಜೋರಾಗಿವೆ. ಈ ಹಿನ್ನೆಲೆಯಲ್ಲಿ ಜೈಲು ಆಡಳಿತದ ಮೇಲೂ ಒತ್ತಡ ಹೆಚ್ಚಾಗಿದೆ.
ನಟ ದರ್ಶನ್ ಜೂನ್ ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಹಲವು ಬಾರಿ ವಿಶೇಷ ಸೌಲಭ್ಯಗಳು ಸಿಕ್ಕಿದ್ದಕ್ಕೆ ವಿವಾದಕ್ಕೆ ಗುರಿಯಾಗಿದ್ದರು. ಈಗ ಮತ್ತೆ ಸಹಕೈದಿಗಳೊಂದಿಗೆ ಗಲಾಟೆಯ ಮಾಹಿತಿ ಹೊರಬಂದಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
