ಬೆಂಗಳೂರು: ನಟ ದರ್ಶನ್ ಮತ್ತೊಮ್ಮೆ ಜೈಲು ಪಾಲಾಗುತ್ತಿದ್ದಾರೆ. 2011ರಲ್ಲಿ ನಟ ದರ್ಶನ್ ಜೈಲು ಸೇರಿದ್ದಾಗ ‘ಸಾರಥಿ’ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈಗ ದರ್ಶನ್ ಜೈಲು ಸೇರಿದ ಬಳಿಕ ‘ಡೆವಿಲ್’ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗ್ತಿದೆ. ಈ ಸಿನಿಮಾ ಹಿಟ್ ಆಗುತ್ತದೋ ಅಥವಾ ಫ್ಲಾಪ್ ಆಗುತ್ತದೋ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಹೌದು, ನಟ ದರ್ಶನ್ ಅಭಿಮಾನಿಗಳಿಗೆ ‘ಡಿ ಬಾಸ್’ ಎಂದೇ ಪ್ರಸಿದ್ಧ. ಅವರು ಕರ್ನಾಟಕದಾದ್ಯಂತ ದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಬೀದರ್‌ನಿಂದ ಚಾಮರಾಜನಗರದವರೆಗೂ ಅವರ ಅಭಿಮಾನಿಗಳು ಹರಡಿಕೊಂಡಿದ್ದಾರೆ. ಅನೇಕ ಮಾಸ್ ಸಿನಿಮಾಗಳ ಮೂಲಕ ಅವರು ಜನಪ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಮತ್ತು ಇತರ ಸ್ಟಾರ್ ನಟರ ಅಭಿಮಾನಿಗಳ ನಡುವೆ ಯಾವಾಗಲೂ ವಾರ್ ನಡೆಯುತ್ತಲೇ ಇರುತ್ತದೆ, ಕೆಲವೊಮ್ಮೆ ಬೀದಿ ಜಗಳಗಳೂ ಆದ ಉದಾಹರಣೆಗಳಿವೆ.
ದರ್ಶನ್ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ. 2011ರ ಫೆಬ್ರವರಿ 9ರಂದು ಅವರ ಹೆಂಡತಿ ವಿಜಯಲಕ್ಷ್ಮಿ, ದರ್ಶನ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕೇಸ್‌ನಲ್ಲಿ ಪೊಲೀಸರು ದರ್ಶನ್‌ರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಆ ಸಮಯದಲ್ಲಿ ‘ಸಾರಥಿ’ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿದಿತ್ತು. ಜೈಲಿನಲ್ಲಿದ್ದರೂ ಅಭಿಮಾನಿಗಳು ಸಿನಿಮಾವನ್ನು ಗೆಲ್ಲಿಸಿದ್ದರು. ಆ ಸಿನಿಮಾ ದರ್ಶನ್‌ಗೆ ಮರುಜನ್ಮ ನೀಡಿತ್ತು. ಜೈಲಿನ ಸೆಲ್‌ನಲ್ಲಿ ಅವರೊಂದಿಗೆ ಇದ್ದ ಕಟ್ಟಾ ಜಗದೀಶ್, ಸಿನಿಮಾ ಹಿಟ್ ಆಗುತ್ತದೆ ಎಂದು ಧೈರ್ಯ ತುಂಬಿದ್ದರು.
ಈಗ ಮತ್ತೆ ದರ್ಶನ್ ಜೈಲು ಸೇರಲಿದ್ದಾರೆ. ಈ ಬಾರಿ ಕೊಲೆ ಕೇಸ್‌ನಲ್ಲಿ ಜಾಮೀನು ರದ್ದಾಗಿದೆ. ಜೈಲು ಸೇರುವ ಮುನ್ನ ‘ಡೆವಿಲ್’ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಮಿಲನ್ ಪ್ರಕಾಶ್ ನಿರ್ಮಾಪಕರಾಗಿರುವ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇವೆ. ನಾಳೆ (ಆಗಸ್ಟ್ 15) ಸಿನಿಮಾದ ‘ಇದ್ದರೇ, ನೆಮ್ಮದಿಯಾಗಿರಬೇಕು’ ಹಾಡು ಬಿಡುಗಡೆಯಾಗಲಿದೆ. ಜೈಲಿನಲ್ಲಿರುವಾಗಲೇ ಸಿನಿಮಾ ಬಿಡುಗಡೆಯಾದರೆ ಅದು ಹಿಟ್ ಆಗುತ್ತದೋ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಇದಲ್ಲದೆ, ದರ್ಶನ್ ಇನ್ನೂ ಎರಡು ಸಿನಿಮಾಗಳನ್ನು ಯೋಜಿಸಿದ್ದರು. ಕೆವಿಎನ್ ಪ್ರೊಡಕ್ಷನ್‌ನ ‘ಡಿ 58’ ಸಿನಿಮಾವನ್ನು ಪ್ರೇಮ್ ನಿರ್ದೇಶಿಸಬೇಕಿತ್ತು. ‘ಡಿ 59’ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶಿಸುವ ಯೋಜನೆಯಿತ್ತು. ಆದರೆ ಜೈಲು ಸೇರಿದ ಕಾರಣ ಈ ಸಿನಿಮಾಗಳು ಮುಂದಿನ ಆರು ತಿಂಗಳು ಕಥೆಯ ರೂಪದಲ್ಲೇ ಉಳಿಯಬೇಕಾಗುತ್ತದೆ. ಒಟ್ಟಾರೆ ನಟ ದರ್ಶನ್ ಜೈಲು ಸೇರ್ತಿರೋದು ಅಭಿಮಾನಿಗಳಿಗೆ ಸಹಿಸಲಾಗುತ್ತಿಲ್ಲ. ಡೆವಿಲ್ ರಿಲೀಸ್ ಆದರೆ ಸಿನಿಮಾ ಹಿಟ್ ಆಗುತ್ತಾ? ಅಥವಾ ಫ್ಲಾಪ್ ಆಗುತ್ತಾ ಕಾದು ನೋಡಬೇಕು.