ಕೊರಗಜ್ಜ: 6 ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ!

Untitled design (73)

ಹುಬ್ಬಳ್ಳಿ, ಅಕ್ಟೋಬರ್ 13, 2025: ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ “ಕೊರಗಜ್ಜ” ಚಿತ್ರದ ಫಸ್ಟ್ ಲುಕ್ ಟೀಸರ್ ಮತ್ತು 3D ಮೋಷನ್ ಪೋಸ್ಟರ್ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಸುಧೀರ್ ಅತ್ತಾವರ್ ನಿರ್ದೇಶನದಲ್ಲಿ, ತ್ರಿವಿಕ್ರಮ ಸಪಲ್ಯ ನಿರ್ಮಾಣದಲ್ಲಿ ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ರೂಪುಗೊಂಡಿರುವ ಈ ಚಿತ್ರವು ದಕ್ಷಿಣ ಭಾರತದಲ್ಲಿ ತನ್ನ ವಿಶಿಷ್ಟ ಪ್ರಚಾರದಿಂದ ಗಮನ ಸೆಳೆದಿದೆ.

ಬಿಡುಗಡೆ ಸಮಾರಂಭವು ದಕ್ಷಿಣ ಕನ್ನಡದ ಸಾಂಪ್ರದಾಯಿಕ ವಾದ್ಯ ಹಿಮ್ಮೇಳ ಮತ್ತು ಉಡುಪಿಯ ಮಹಿಳಾ ತಂಡದ ಹುಲಿ ನೃತ್ಯದ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ನಡೆಯಿತು. ಡೊಳ್ಳು, ಕೊಂಬು-ಕಹಳೆ, ಕೊಳಲು, ತಾಸೆ, ಮತ್ತು ತಾಳಗಳ ವಾದ್ಯಮೇಳದ ಜೊತೆಗೆ “ಕೊರಗಜ್ಜ” ಚಿತ್ರದ ಎರಡು ಕಟೌಟ್‌ಗಳು ಹುಲಿವೇಷದ ಅಬ್ಬರದ ನೃತ್ಯದ ನಡುವೆ ಅನಾವರಣಗೊಂಡವು. ಸಮಾರಂಭದಲ್ಲಿ ಮಾಜಿ ಸಚಿವೆ ಮೋಟಮ್ಮ, ನಿರ್ಮಾಪಕಿ-ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್, ಚಿತ್ರದ ನಟ-ನಟಿಯರು, ಮತ್ತು ಇತರ ಗಣ್ಯರು ಉಪಸ್ಥಿತರಿದ್ದು, ಕಟೌಟ್‌ಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

“ಕೊರಗಜ್ಜ” ಚಿತ್ರದ ನಿರ್ಮಾಣವು ಮೂರು ವರ್ಷಗಳ ಹಿಂದೆ ಆರಂಭವಾಗಿತ್ತು. ಅನೇಕ ಅಡೆತಡೆಗಳನ್ನು ದಾಟಿ, ಈಗ ಚಿತ್ರವು ಬಿಡುಗಡೆಯ ಹಂತ ತಲುಪಿದೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ 3D ಮೋಷನ್ ಪೋಸ್ಟರ್ ರಚಿಸಲಾಗಿದ್ದು, ಇದು ಚಿತ್ರದ ವಿಶಿಷ್ಟತೆಯನ್ನು ಎತ್ತಿ ತೋರಿಸುತ್ತದೆ. ನಿರ್ದೇಶಕ ಸುಧೀರ್ ಅತ್ತಾವರ್, ಕೊರಗಜ್ಜನ ಆಶೀರ್ವಾದದಿಂದ ಚಿತ್ರವು ಯೋಜನೆಯಂತೆ ಮೂಡಿಬಂದಿದೆ. ಚಿತ್ರತಂಡದ ಸಹಕಾರ, ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಮತ್ತು ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿಯವರ ಕಾರ್ಯನಿರ್ವಹಣೆಯಿಂದ ಚಿತ್ರವು ಯಾವುದೇ ಕೊರತೆಯಿಲ್ಲದೆ ರೂಪುಗೊಂಡಿದೆ ಎಂದು ತಿಳಿಸಿದರು. ಚಿತ್ರವು ಆರು ಭಾಷೆಗಳಲ್ಲಿ 31 ಹಾಡುಗಳನ್ನು ಒಳಗೊಂಡಿದ್ದು, ಖ್ಯಾತ ಸಂಗೀತ ಸಂಯೋಜಕ ಗೋಪಿ ಸುಂದರ್ ಅವರಿಂದ ಸಂಗೀತ ಸಂಯೋಜನೆಗೊಂಡಿದೆ. ಭಾರತದ ಪ್ರಸಿದ್ಧ ಗಾಯಕ-ಗಾಯಕಿಯರು ಈ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಚಿತ್ರವು 24 ವರ್ಷದ ಯುವಕನೊಬ್ಬ ದೈವತ್ವಕ್ಕೇರಿ ಕೊರಗಜ್ಜನಾಗುವ ಕಥೆಯನ್ನು ಚಿತ್ರಿಸುತ್ತದೆ. ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ನಾವು ಕೊರಗಜ್ಜನನ್ನು ಆರಾಧಿಸುವ ಕುಟುಂಬದಿಂದ ಬಂದವರು. ಈ ಚಿತ್ರಕ್ಕಾಗಿ ಅನುಭವಿ ಕಲಾವಿದರು ಮತ್ತು ನುರಿತ ತಂತ್ರಜ್ಞರು ಕಾರ್ಯನಿರ್ವಹಿಸಿದ್ದಾರೆ. ನವೆಂಬರ್ ಕೊನೆಯ ವೇಳೆಗೆ ಚಿತ್ರವನ್ನು ತೆರೆಗೆ ತರಲು ಯೋಜನೆ ರೂಪಿಸಿದ್ದೇವೆ ಎಂದರು. ರಾಷ್ಟ್ರ ಪ್ರಶಸ್ತಿ ವಿಜೇತ ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ, ಚಿತ್ರೀಕರಣ ಮತ್ತು ನಂತರದ ನಿರ್ಮಾಣ ಕಾರ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು.

ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್, ಈ ಚಿತ್ರವನ್ನು ಆರಂಭದಲ್ಲಿ ಜೈ ಜಗದೀಶ್ ತಂಡ ಆರಂಭಿಸಿತ್ತು. ಆದರೆ, ಸವಾಲುಗಳಿಂದಾಗಿ ಹಿಂದೆ ಸರಿದೆವು. ಈಗ ಸುಧೀರ್ ಅತ್ತಾವರ್ ಈ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಫಸ್ಟ್ ಲುಕ್‌ನ ಅದ್ದೂರಿ ಬಿಡುಗಡೆಯಿಂದ ಚಿತ್ರದ ಗುಣಮಟ್ಟವನ್ನು ಊಹಿಸಬಹುದು ಎಂದು ಹೇಳಿದರು.

ಹಿರಿಯ ನಟಿ ಭವ್ಯ, ಚಿತ್ರದಲ್ಲಿ ರಾಣಿ “ಪಂಜಂದಾಯಿ” ಪಾತ್ರದಲ್ಲಿ ಕಬೀರ್ ಬೇಡಿಯೊಂದಿಗೆ ನಟಿಸಿದ ಅನುಭವವನ್ನು ಹಂಚಿಕೊಂಡರು. ನಿರ್ದೇಶಕರ ಉತ್ಸಾಹ ಮತ್ತು ಚಿತ್ರತಂಡದ ಸಹಕಾರವು ಚಿತ್ರೀಕರಣವನ್ನು ಸ್ಮರಣೀಯವಾಗಿಸಿತು ಎಂದು ತಿಳಿಸಿದರು. ನಟಿ ಶೃತಿ, “ಕೊರಗಜ್ಜನ ಸಾಕು ತಾಯಿಯ ಪಾತ್ರದಲ್ಲಿ ನಟಿಸಿದ್ದೇನೆ. 28 ಗಂಟೆಗಳ ಕಾಲ ನಿರಂತರ ಚಿತ್ರೀಕರಣದಲ್ಲಿ ಭಾಗಿಯಾದರೂ, ನಿರ್ದೇಶಕರ ಶಕ್ತಿಯು ಒಂದು ಚೂರು ಕಡಿಮೆಯಾಗಿರಲಿಲ್ಲ. ಈ ಚಿತ್ರವು ನನ್ನ ವೃತ್ತಿಜೀವನದಲ್ಲಿ ವಿಶಿಷ್ಟವಾದದ್ದು ಎಂದು ಹೇಳಿದರು.

ಚಿತ್ರದ ಹಾಡುಗಳ ಬಿಹೈಂಡ್-ದಿ-ಸೀನ್ಸ್ (BTS) ಮತ್ತು ಮೇಕಿಂಗ್ ವಿಡಿಯೋ ಸಮಾರಂಭಕ್ಕೆ ಉಪಸ್ಥಿತರನ್ನು ಮಂತ್ರಮುಗ್ಧಗೊಳಿಸಿತು. “ಕೊರಗಜ್ಜ” ಚಿತ್ರವು ಕರಾವಳಿ ಕರ್ನಾಟಕದ ಸಂಸ್ಕೃತಿಯನ್ನು ಆರು ಭಾಷೆಗಳಲ್ಲಿ ಜಗತ್ತಿಗೆ ಪರಿಚಯಿಸುವ ಗುರಿಯನ್ನು ಹೊಂದಿದ್ದು, ದೈವಾರಾಧನೆಯ ಆಧ್ಯಾತ್ಮಿಕತೆಯನ್ನು ಚಿತ್ರದ ಕೇಂದ್ರಬಿಂದುವಾಗಿರಿಸಿಕೊಂಡಿದೆ. ಚಿತ್ರದ ಬಿಡುಗಡೆಗೆ ಚಿತ್ರರಸಿಕರು ಕಾತರದಿಂದ ಕಾಯುತ್ತಿದ್ದಾರೆ.

Exit mobile version