ದರ್ಶನ್‌ಗೆ ಚಿಕಿತ್ಸೆ..ಫ್ಯಾನ್ಸ್‌‌ಗೆ ತಾಳ್ಮೆ ಪರೀಕ್ಷೆ ಶುರು..!!

ದಚ್ಚು ಆರೋಗ್ಯಕ್ಕಾಗಿ ಪ್ರಾರ್ಥಿಸಿ.. ವಿವಾದಗಳಿಂದ ದೂರವಿರಿ..!

Untitled Design (22)

ಅಭಿಮಾನಿಗಳ ಪಾಲಿನ ಯಜಮಾನ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯೋಕೆ ರೆಡಿ ಆಗ್ತಿದ್ರೆ, ಹೊರಗಡೆ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಶುರುವಾಗೋ ಲಕ್ಷಣಗಳು ಕಾಣಿಸ್ತಿವೆ. ಆದ್ರೆ ಈ ಕೌಂಟರ್ ಪೋಸ್ಟ್‌ಗಳು ಮತ್ತು ತೇಜೋವಧೆ ವಿಚಾರಕ್ಕೆ ಸಂಬಂಧಪಟ್ಟಂತೆ ಈಗ ಅವರ ಕುಟುಂಬದಿಂದಲೇ ಒಂದು ಖಡಕ್ ಮತ್ತು ಭಾವನಾತ್ಮಕ ಮನವಿ ಹೊರಬಿದ್ದಿದೆ. ಅಷ್ಟಕ್ಕೂ ದಚ್ಚು ಆರೋಗ್ಯಕ್ಕೆ ಏನಾಗಿದೆ..? ಅಭಿಮಾನಿಗಳಿಗೆ ಹಾಕಿರೋ ಆ ತಾಳ್ಮೆಯ ಪರೀಕ್ಷೆ ಏನು? ಹೇಳ್ತೀವಿ ಈ ಸ್ಟೋರಿ ನೋಡಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಆರೋಗ್ಯ ಮತ್ತು ಚಿಕಿತ್ಸೆಯ ವಿಚಾರ ಈಗ ಸ್ಯಾಂಡಲ್‌ವುಡ್ ಹಾಗೂ ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ತೀವ್ರ ಬೆನ್ನುನೋವು ಹಾಗೂ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ‘ಯಜಮಾನ’ನಿಗೆ ಸದ್ಯ ವಿಶ್ರಾಂತಿ ಮತ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಆದರೆ ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳು ಹಾಗೂ ವಿರೋಧಿ ಬಣಗಳ ನಡುವೆ ಕೌಂಟರ್ ಪೋಸ್ಟ್‌ಗಳು ಮತ್ತು ವಾಗ್ವಾದಗಳು ಜೋರಾಗುತ್ತಿರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ.

ಈ ಬೆಳವಣಿಗೆಗಳ ಬೆನ್ನಲ್ಲೇ ದರ್ಶನ್ ಅವರ ಕುಟುಂಬದ ಸದಸ್ಯರಾದ ವಿಜಯ್ ತೂಗುದೀಪ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ದರ್ಶನ್ ಅವರ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮಹತ್ವದ ಸಂದೇಶವೊಂದನ್ನು ನೀಡಿದ್ದಾರೆ. “ಯಜಮಾನರು ಬರ್ತಿರೋದು ಚಿಕಿತ್ಸೆಗಾಗಿ, ಆದ್ದರಿಂದ ದಯವಿಟ್ಟು ಎಲ್ಲರಲ್ಲೂ ಒಂದು ಮನವಿ.. ಯಾರೊಬ್ಬರಿಗೂ ಕೌಂಟರ್ ಕೊಡುವ ಪೋಸ್ಟ್‌ಗಳಾಗಲಿ ಅಥವಾ ಇನ್ನೊಬ್ಬರ ಬಗ್ಗೆ ತೇಜೋವಧೆ ಪೋಸ್ಟ್‌ಗಳನ್ನು ಮಾಡುವುದು ಈ ಸಮಯದಲ್ಲಿ ಸೂಕ್ತವಲ್ಲ ಎಂದು ವಿಜಯ್ ತೂಗುದೀಪ ಅವರು ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.

ಇಷ್ಟೇ ಅಲ್ಲ, ದರ್ಶನ್ ಅವರು ಸಂಪೂರ್ಣ ಗುಣಮುಖರಾಗಿ ಮತ್ತೆ ಮೊದಲಿನಂತೆ ಅಬ್ಬರಿಸುವ ದಿನ ದೂರವಿಲ್ಲ ಎಂಬ ಭರವಸೆಯನ್ನೂ ವಿಜಯ್ ತೂಗುದೀಪ ನೀಡಿದ್ದಾರೆ. “ಸಂಭ್ರಮಿಸುವ ಸಮಯ ಬಂದೇ ಬರುತ್ತದೆ, ಅಲ್ಲಿವರೆಗೂ ತಾಳ್ಮೆಯಿಂದ ಕಾಯೋಣ” ಎಂದು ಬರೆದುಕೊಳ್ಳುವ ಮೂಲಕ, ಅನಾವಶ್ಯಕ ವಿವಾದಗಳಿಗೆ ಕಿವಿಗೊಡದೆ ಶಾಂತಿಯುತವಾಗಿ ಇರುವಂತೆ ‘ಡಿ ಬಾಸ್’ ಸೆಲೆಬ್ರಿಟಿಗಳಿಗೆ ಕಿವಿಮಾತು ಹೇಳಿದ್ದಾರೆ. ಈ ಪೋಸ್ಟ್‌ಗೆ ಹಿನ್ನೆಲೆಯಾಗಿ ವಿಜಯ್ ಪ್ರಕಾಶ್ ಹಾಡಿರುವ ‘ಕಾವಲಿಗ’ ಹಾಡನ್ನು ಬಳಸಿರುವುದು ಅಭಿಮಾನಿಗಳನ್ನು ಮತ್ತಷ್ಟು ಭಾವುಕರನ್ನಾಗಿಸಿದೆ.

ವಿಜಯ್ ತೂಗುದೀಪ ಅವರ ಈ ಪೋಸ್ಟ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ದರ್ಶನ್ ಅಭಿಮಾನಿ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ನೂರಾರು ಅಭಿಮಾನಿಗಳು ಈ ಪೋಸ್ಟ್‌ಗೆ ಕಾಮೆಂಟ್ ಮಾಡುವ ಮೂಲಕ “ನಾವು ಯಾವಾಗಲೂ ಯಜಮಾನರ ಜೊತೆ ಇರುತ್ತೇವೆ, ಅವರು ಬೇಗ ಗುಣಮುಖರಾಗಿ ಬರಲಿ” ಎಂದು ಹಾರೈಸುತ್ತಿದ್ದಾರೆ. ಸದ್ಯ ಯಾರಿಗೂ ಕೌಂಟರ್ ಕೊಡದೆ ಕೇವಲ ಬಾಸ್ ಆರೋಗ್ಯಕ್ಕಾಗಿ ಪ್ರಾರ್ಥಿಸುವ ನಿರ್ಧಾರಕ್ಕೆ ಫ್ಯಾನ್ಸ್ ಬಂದಿದ್ದಾರೆ.

ಒಟ್ಟಿನಲ್ಲಿ, ಸಾಲು ಸಾಲು ಸವಾಲುಗಳು ಮತ್ತು ಆರೋಗ್ಯ ಸಮಸ್ಯೆಗಳ ನಡುವೆ ಸದ್ಯ ಚಿಕಿತ್ಸೆಗೆ ಒಳಗಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಮ್‌ಬ್ಯಾಕ್‌ಗಾಗಿ ಇಡೀ ಸ್ಯಾಂಡಲ್‌ವುಡ್ ಮತ್ತು ಕೋಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಸಂಕಷ್ಟದ ಸಮಯ ಅಭಿಮಾನಿಗಳ ತಾಳ್ಮೆಗೆ ನಿಜವಾದ ಪರೀಕ್ಷೆಯಾಗಿದ್ದು, ಯಜಮಾನ ಸಂಪೂರ್ಣ ಚೇತರಿಸಿಕೊಂಡು ಮತ್ತೆ ಬೆಳ್ಳಿತೆರೆಯ ಮೇಲೆ ಘರ್ಜಿಸುವ ಆ ಸಂಭ್ರಮದ ಕ್ಷಣಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version