ರಾಮಾಯಣ ಮೈಲಿಗಲ್ಲು..ಬಾಹುಬಲಿ ವರ್ಲ್ಡ್ ರೆಕಾರ್ಡ್ ಫಿನಿಶ್

9 ವರ್ಷದ ದಾಖಲೆ ಧೂಳೀಪಟ..ರಾಮಾಯಣ ಹೊಸ ಇತಿಹಾಸ

Untitled Design (16)

ಕಳೆದ ಒಂಬತ್ತು ವರ್ಷಗಳಿಂದ ಯಾವ ಸಿನಿಮಾದಿಂದಲೂ ಮುರಿಯೋಕೆ ಸಾಧ್ಯವಾಗದ ಆ ಒಂದು ಮೆಗಾ ವರ್ಲ್ಡ್ ರೆಕಾರ್ಡ್ ಈಗ ಕೇವಲ 23 ದಿನಗಳಲ್ಲೇ ಪುಡಿಪುಡಿಯಾಗಿದೆ. ರಾಮ-ರಾವಣರ ಮಹಾಯುದ್ಧದ ಮುಂದೆ ರಾಜಮೌಳಿ ಸಾಮ್ರಾಜ್ಯದ ಹಳೇ ದಾಖಲೆಯೂ ಮಂಡಿಯೂರಿದ್ದು, ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯೇ ಬೆಚ್ಚಿಬಿದ್ದಿದೆ. ಅಷ್ಟಕ್ಕೂ 23 ದಿನಗಳಲ್ಲಿ ಈ ಸಿನಿಮಾ ಬಾಚಿಕೊಂಡಿರೋ ದುಡ್ಡೇಷ್ಟು..? ಈಗ ಮುಂದಿರುವ ಆ ಟಾಪ್ 2 ಟಾರ್ಗೆಟ್‌ಗಳು ಯಾವುವು..?

ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮೆಗಾ ಬ್ಲಾಕ್‌ಬಸ್ಟರ್ ‘ರಾಮಾಯಣ: ಭಾಗ 1’ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಬಿಡುಗಡೆಯಾದ ಕೇವಲ 23 ದಿನಗಳಲ್ಲಿ ವಿಶ್ವದಾದ್ಯಂತ ಬರೋಬ್ಬರಿ 1,790 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ, ಎಸ್.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ 2 ಚಿತ್ರದ ಸಾರ್ವಕಾಲಿಕ ಲೈಫ್‌ಟೈಮ್ ದಾಖಲೆಯನ್ನು ಮುರಿದು ಹಾಕಿದೆ. ಈ ಮಹಾಸಾಧನೆಯೊಂದಿಗೆ ‘ರಾಮಾಯಣ’ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡ 3ನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದೇಶೀಯ ಮಾರುಕಟ್ಟೆಯಲ್ಲೂ ‘ರಾಮಾಯಣ’ ಅಕ್ಷರಶಃ ಸುನಾಮಿ ಎಬ್ಬಿಸಿದ್ದು, 23 ದಿನಗಳ ಅಂತ್ಯಕ್ಕೆ ಭಾರತದಾದ್ಯಂತ 1,000ಕ್ಕೂ ಅಧಿಕ ಕೋಟಿ ಗಳಿಕೆ ಮಾಡಿ ನಾಗಾಲೋಟ ಮುಂದುವರಿಸಿದೆ. ಹಿಂದಿ ಅವತರಣಿಕೆಯ ಜೊತೆಗೆ ದಕ್ಷಿಣ ಭಾರತದ ಭಾಷೆಗಳಲ್ಲೂ ಈ ಸಿನಿಮಾ ಭರ್ಜರಿ ಬೇಟೆಯಾಡುತ್ತಿದ್ದು, ವಿಶೇಷವಾಗಿ ಕರ್ನಾಟಕ ಮತ್ತು ಕನ್ನಡ ವರ್ಷನ್‌ನಲ್ಲಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಬ್ಬರಕ್ಕೆ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಭಾರತದಲ್ಲಿ ಸಾವಿರ ಕೋಟಿ ನೆಟ್ ಕ್ಲಬ್ ಸೇರುವ ಮೂಲಕ ಸಿನಿಮಾ ಹೊಸ ಬಾಕ್ಸ್ ಆಫೀಸ್ ಬೆಂಚ್‌ಮಾರ್ಕ್ ಸೃಷ್ಟಿಸಿದೆ.

ಕೇವಲ ಭಾರತ ಮಾತ್ರವಲ್ಲ, ಓವರ್ ಸೀಸ್ ನಲ್ಲೂ ರಾಮಾಯಣ ಹೊಸ ಇತಿಹಾಸ ಬರೆದಿದೆ. ವಿದೇಶಿ ಮಾರುಕಟ್ಟೆಯಿಂದಲೇ ಚಿತ್ರಕ್ಕೆ ಬರೋಬ್ಬರಿ 595 ಕೋಟಿ ಆದಾಯ ಹರಿದುಬಂದಿದ್ದು, ಉತ್ತರ ಅಮೆರಿಕಾ, ಯುಕೆ, ಯುಎಇ ಮತ್ತು ಆಸ್ಟ್ರೇಲಿಯಾಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಅಷ್ಟೇ ಅಲ್ಲ, ಒಂದೇ ದಿನದಲ್ಲಿ ಅತಿ ಹೆಚ್ಚು ವಿದೇಶಿ ಗಳಿಕೆ 7.3 ಮಿಲಿಯನ್ ಮಾಡಿದ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ, ಈ ಹಿಂದೆ ‘ಬಾಹುಬಲಿ 2’ ಹೆಸರಲ್ಲಿದ್ದ ಸಿಂಗಲ್-ಡೇ ಓವರ್‌ಸೀಸ್ ದಾಖಲೆಯನ್ನೂ ‘ರಾಮಾಯಣ’ ಉಡೀಸ್ ಮಾಡಿದೆ.

‘ಬಾಹುಬಲಿ 2’ ದಾಖಲೆಯನ್ನು ಮುರಿದು 3ನೇ ಸ್ಥಾನಕ್ಕೇರಿರುವ ‘ರಾಮಾಯಣ’ದ ಓಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಈಗ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಪಟ್ಟಿಯಲ್ಲಿ ‘ರಾಮಾಯಣ’ಕ್ಕಿಂತ ಮುಂದಿರುವುದು ಕೇವಲ ಎರಡೇ ಸಿನಿಮಾಗಳು – ಅಲ್ಲು ಅರ್ಜುನ್ ಅವರ ‘ಪುಷ್ಪ 2: ದಿ ರೂಲ್’ ಮತ್ತು ಆಮೀರ್ ಖಾನ್ ಅವರ ‘ದಂಗಲ್’ ಪ್ರಸ್ತುತ ಬಾಕ್ಸ್ ಆಫೀಸ್ ವೇಗ ನೋಡಿದರೆ, ನಾಲ್ಕನೇ ವಾರಾಂತ್ಯದಲ್ಲಿ ‘ಪುಷ್ಪ 2’ ದಾಖಲೆಯನ್ನೂ ಹಿಂದಿಕ್ಕಿ 2ನೇ ಸ್ಥಾನಕ್ಕೆ ಏರುವುದು ಪಕ್ಕಾ ಎನ್ನುತ್ತಿದ್ದಾರೆ ಟ್ರೇಡ್ ಪಂಡಿತರು.

ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ದೃಶ್ಯಕಾವ್ಯಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಮತ್ತು ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅವರ ಪವರ್‌ಫುಲ್ ಅಭಿನಯ, ಜೊತೆಗೆ ಎ.ಆರ್. ರೆಹಮಾನ್-ಹ್ಯಾನ್ಸ್ ಜಿಮ್ಮರ್ ಅವರ ಮ್ಯೂಸಿಕ್ ಹಾಗೂ ಹಾಲಿವುಡ್ ಮಟ್ಟದ ವಿಎಫ್‌ಎಕ್ಸ್ ‘ರಾಮಾಯಣ’ವನ್ನು ಜಾಗತಿಕ ಮಟ್ಟದಲ್ಲಿ ಗೆಲ್ಲಿಸಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂಯೋ, ಗ್ಯಾರಂಟಿ ನ್ಯೂಸ್

Exit mobile version