ಸ್ಯಾಂಡಲ್ವುಡ್ನ ಆ ಎರಡು ಪವರ್ಹೌಸ್ಗಳು ಮತ್ತೊಮ್ಮೆ ಒಂದಾಗಿ ಗಾಂಧಿನಗರದಲ್ಲಿ ಹೊಸ ಭೂಕಂಪ ಎಬ್ಬಿಸಿವೆ. ‘ದಿ ವಿಲನ್’ ಮತ್ತು ‘ಕೆಡಿ’ ಬಳಿಕ ಈಗ ಮತ್ತೊಂದು ಬಿಗ್ ಧಮಾಕಾ ಕೊಡಲು ಸಜ್ಜಾಗಿರೋ ಈ ಕ್ರೇಜಿ ಜೋಡಿ, ತಮ್ಮ ಹೊಸ ಸಿನಿಮಾದ ಟೈಟಲ್ ಟೀಸರ್ ಮೂಲಕವೇ ಹಲ್ ಚಲ್ ಎಬ್ಬಿಸಿದ್ದಾರೆ. ಅಷ್ಟೇ ಅಲ್ಲ, ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿಗೆ ಒಂದು ಹೊಸ ಪವರ್ಫುಲ್ ಬಿರುದು ಕೂಡ ಸಿಕ್ಕಿದ್ದು, ಲಾಂಗ್-ಮಚ್ಚು ಬಿಟ್ಟು ಸಂಪೂರ್ಣ ಹೊಸ ಅವತಾರದಲ್ಲಿ ಎಂಟ್ರಿ ಕೊಡ್ತಿದ್ದಾರೆ. ಅಷ್ಟಕ್ಕೂ ಆ ಸಿನಿಮಾ ಯಾವುದು..? ಕಿಚ್ಚನಿಗೆ ಸಿಕ್ಕಿರೋ ಆ ಹೊಸ ಬಿರುದು ಯಾವುದು..?ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..
- ದಾದಾ ಆನ್ ಹಾಲಿಡೇಸ್ ಟೈಟಲ್ ಟೀಸರ್ ಔಟ್..!
- ಡಿಕೆಶಿ ಸಮ್ಮುಖದಲ್ಲಿ ದಾದಾ ಆನ್ ಹಾಲಿಡೇಸ್ ಮುಹೂರ್ತ
- ಲುಂಗಿ, ಕಲರ್ಫುಲ್ ಶರ್ಟ್ನಲ್ಲಿ ಕಿಚ್ಚನ ಟಪೋರಿ ಅವತಾರ
- ಕಮಲ್ ಹಾಸನ್ಗೆ ಸರಿಸಾಟಿ ಕಿಚ್ಚ.. ಪ್ರೇಮ್ ಮೆಚ್ಚುಗೆಯ ಮಾತು
‘ದಿ ವಿಲನ್’ ಹಾಗೂ ‘ಕೆಡಿ’ ಸಿನಿಮಾಗಳ ಬಳಿಕ ಸ್ಯಾಂಡಲ್ವುಡ್ನ ಕ್ರೇಜಿ ಜೋಡಿ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಜೋಗಿ ಪ್ರೇಮ್ ಮತ್ತೊಮ್ಮೆ ಒಂದಾಗಿದ್ದು, ತಮ್ಮ ಹೊಸ ಸಿನಿಮಾಗೆ ‘ದಾದಾ ಆನ್ ಹಾಲಿಡೇಸ್’ ಎಂದು ಅಧಿಕೃತವಾಗಿ ನಾಮಕರಣ ಮಾಡಿದ್ದಾರೆ. ಈ ಬಹುನಿರೀಕ್ಷಿತ ಚಿತ್ರದ ಟೈಟಲ್ ಟೀಸರ್ ಹೊರಬೀಳುತ್ತಿದ್ದಂತೆಯೇ ಅಭಿಮಾನಿಗಳಲ್ಲಿ ಭಾರಿ ಸಂಚಲನ ಮೂಡಿದ್ದು, ಕಲರ್ ಫುಲ್ ಶರ್ಟ್ ಮತ್ತು ಲುಂಗಿ ಧರಿಸಿ ಟಪೋರಿ ಸ್ಟೈಲ್ನಲ್ಲಿ ಕಾಣಿಸಿಕೊಂಡಿರುವ ಕಿಚ್ಚನ ಹೊಸ ಲುಕ್ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಸುದೀಪ್ ಅವರ ನಡೆ, ಸ್ಟೈಲ್ ಮತ್ತು ಮ್ಯಾನರಿಸಂ ಎಂದಿನ ಪಾತ್ರಗಳಿಗಿಂತ ಸಂಪೂರ್ಣ ಫ್ರೆಶ್ ಆಗಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ಟೀಸರ್ಗೆ ಸಖತ್ ಕಿಕ್ ಕೊಟ್ಟಿದೆ.
ಈ ಬಾರಿ ‘ದಾದಾ ಆನ್ ಹಾಲಿಡೇಸ್’ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರನ್ನು ‘ಕಿಂಗ್ ಕಿಚ್ಚ’ ಎಂಬ ಹೊಸ ಬಿರುದಿನೊಂದಿಗೆ ಪರಿಚಯಿಸಲಾಗುತ್ತಿದೆ. ಅಷ್ಟಕ್ಕೂ ‘ರಾಜ’ ಅಥವಾ ‘ಮಹಾರಾಜ’ ಎನ್ನದೆ ‘ಕಿಂಗ್ ಕಿಚ್ಚ’ ಎಂದಿರುವುದಕ್ಕೂ ವಿಶೇಷ ಕಾರಣವಿದೆ ಎಂದು ನಿರ್ದೇಶಕ ಜೋಗಿ ಪ್ರೇಮ್ ಬಿಚ್ಚಿಟ್ಟಿದ್ದಾರೆ. ಸುದೀಪ್ ಅವರ ನೈಜ ವ್ಯಕ್ತಿತ್ವ, ನಡವಳಿಕೆ ಮತ್ತು ನಾಯಕನ ಗುಣಗಳನ್ನೇ ಆಧಾರವಾಗಿಟ್ಟುಕೊಂಡು ಈ ಸಿನಿಮಾದ ಪಾತ್ರವನ್ನು ಹೆಣೆಯಲಾಗಿದ್ದು, ಅವರಿಗಾಗಿಯೇ ಪ್ರೇಮ್ ‘ಹೋಲಿಕೆ ಯಾರೂ ಇಲ್ಲ ಇವನ ಸಮ’ ಎಂಬ ವಿಶೇಷ ಹಾಡೊಂದನ್ನೂ ಬರೆದಿದ್ದಾರೆ. ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ದಿಗ್ಗಜ ಕಮಲ್ ಹಾಸನ್ ಎದುರು ಸರಿಸಮಾನವಾಗಿ ನಿಲ್ಲುವ ತಾಕತ್ತಿರುವ ನಟ ಸುದೀಪ್ ಎಂದು ಪ್ರೇಮ್ ಹಾಡಿ ಹೊಗಳಿದ್ದಾರೆ.
- ಕಿಚ್ಚನ ನೈಜ ವ್ಯಕ್ತಿತ್ವಕ್ಕೆ ಸಿನಿಮಾ ರೂಪ.. ಪ್ರೇಮ್ ಹೊಸ ಪ್ರಯತ್ನ
- 2027ರ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ರಿಲೀಸ್ ಗುರಿ..!
‘ಬಿಲ್ಲ ರಂಗ ಬಾಷಾ’ ಚಿತ್ರದ ನಡುವೆಯೇ ಶುರುವಾಗಿರುವ ‘ದಾದಾ ಆನ್ ಹಾಲಿಡೇಸ್’ ಸಿನಿಮಾ ಸುದೀಪ್ ಅವರ ಹಿಂದಿನ ಆ್ಯಕ್ಷನ್ ಸಿನಿಮಾಗಳಿಗಿಂತ ಸಂಪೂರ್ಣ ಭಿನ್ನವಾಗಿರಲಿದೆ. ಈ ಚಿತ್ರದಲ್ಲಿ ಲಾಂಗ್, ಮಚ್ಚು ಹಿಡಿದು ಹೊಡೆದಾಡುವ ರಕ್ತಸಿಕ್ತ ಮಾಸ್ ಕಥೆ ಇರುವುದಿಲ್ಲ, ಬದಲಾಗಿ ಭರ್ಜರಿ ಹಾಸ್ಯ, ಭಾವನೆಗಳು ಹಾಗೂ ಇಡೀ ಕುಟುಂಬ ಸಮೇತ ಕೂತು ನೋಡುವಂತಹ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಕಥಾಹಂದರ ಇರಲಿದೆ ಎಂದು ಜೋಗಿ ಪ್ರೇಮ್ ಸ್ಪಷ್ಟಪಡಿಸಿದ್ದಾರೆ.
ಟೈಟಲ್ ಟೀಸರ್ ಬಿಡುಗಡೆ ದಿನವೇ ‘ದಾದಾ ಆನ್ ಹಾಲಿಡೇಸ್’ ಚಿತ್ರದ ಅದ್ಧೂರಿ ಮುಹೂರ್ತ ಸಮಾರಂಭವೂ ನೆರವೇರಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಮೊಹಮ್ಮದ್ ನಲಪಾಡ್, ಅಭಿಷೇಕ್ ಅಂಬರೀಷ್, ಸಂಚಿತ್ ಸಂಜೀವ್ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿ ಸಂಭ್ರಮ ಹೆಚ್ಚಿಸಿದರು.
‘ಫೀನಿಕ್ಸ್ ಪ್ರೇಮ್ ಸ್ಟುಡಿಯೋಸ್’, ‘ಆರುದ್ರ ಸಿನಿಮಾಸ್’ ಬ್ಯಾನರ್ಗಳ ಅಡಿಯಲ್ಲಿ ರೂಪೇಶ್ ಕುಮಾರ್ ಜಿ., ಶಶಿ ಕಿರಣ್ ಆರ್. ಮತ್ತು ರಕ್ಷಿತಾ ಪ್ರೇಮ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2027ರ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ‘ದಾದಾ ಆನ್ ಹಾಲಿಡೇಸ್’ ಸಿನಿಮಾವನ್ನು ವಿಶ್ವದಾದ್ಯಂತ ತೆರೆಗೆ ತರುವುದಾಗಿ ಜೋಗಿ ಪ್ರೇಮ್ ಘೋಷಿಸಿದ್ದು, ಕಿಂಗ್ ಕಿಚ್ಚನ ಈ ಹೊಸ ಅವತಾರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಈಗಿನಿಂದಲೇ ಕೌಂಟ್ಡೌನ್ ಶುರು ಮಾಡಿದ್ದಾರೆ.
