ಸುಮಕ್ಕ ಡಿಲೀಟ್ ಆದ್ರೂ ಅಂಬಿನ ಮರೆಯದ ದರ್ಶನ್

‘ಸೀನಿಯರ್’ ಬಗ್ಗೆ ‘ಜೂನಿಯರ್’ ಭಾವನಾತ್ಮಕ ಪೋಸ್ಟ್

111 (11)

ಮದರ್ ಇಂಡಿಯಾನ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಹಾಗೂ ಮನಸ್ಸಿನಿಂದಲೇ ಡಿಲೀಟ್ ಮಾಡಿರೋ ಡಿಬಾಸ್ ದರ್ಶನ್, ಪಿತೃ ಸಮಾನ ಅಂಬಿಯನ್ನ ಮಾತ್ರ ಇಂದಿಗೂ ಆರಾಧಿಸುತ್ತಾರೆ. ಅದಕ್ಕೆ ಕಾರಣ ಹತ್ತು ಹಲವು. 73ನೇ ಅಂಬಿ ಜನ್ಮ ದಿನದ ವಿಶೇಷ, ಸೀನಿಯರ್ ಬಗ್ಗೆ ಜೂನಿಯರ್ ಭಾವನಾತ್ಮಕ ಮಾತುಗಳನ್ನ ಆಡಿದ್ದಾರೆ. ಅದನ್ನ ನಾವು ಹೇಳೋದಕ್ಕಿಂತ ನೀವೇ ಒಮ್ಮೆ ಕಣ್ತುಂಬಿಕೊಳ್ಳಿ.

ಮಂಡ್ಯದ ಗಂಡು, ಕಲಿಯುಗದ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ಇಂದು ಇದ್ದಿದ್ರೆ 73ನೇ ಜನುಮ ದಿನ ಆಚರಿಸಿಕೊಳ್ತಿದ್ರು. ಆದ್ರೆ ಅವರ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿರೋ ಸ್ಮಾರಕದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಅಂಬಿ ಜನ್ಮ ಜಯಂತ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಸ್ಮಾರಕಕ್ಕೆ ಪೂಜೆ ಸಲ್ಲಿಸುವ ಮೂಲಕ ಸುಮಲತಾ ಅಂಬರೀಶ್ ಪತಿದೇವ ಅಂಬಿಗೆ ಇಲ್ಲಿಂದಲೇ ಜನ್ಮ ದಿನದ ಶುಭಾಶಯ ಕೋರಿದ್ರು. ಅದಕ್ಕೆ ರಾಕ್‌ಲೈನ್ ವೆಂಕಟೇಶ್ ಕೂಡ ಸಾಥ್ ನೀಡಿದ್ರು.

ADVERTISEMENT
ADVERTISEMENT

ಪ್ರತೀ ವರ್ಷ ಬರ್ತ್ ಡೇ ಹಾಗೂ ಪುಣ್ಮ ಸ್ಮರಣೆಗೆ ತಾಯಿಯೊಂದಿಗೆ ಪೂಜೆಗೆ ತಪ್ಪದೆ ಹಾಜರಾಗ್ತಿದ್ದ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್, ಈ ಬಾರಿ ಗೈರಾದರು. ಅಲ್ಲದೆ ಅಂಬಿ ಸೊಸೆ ಅವಿವಾ ಬಿದ್ದಪ್ಪ ಹಾಗೂ ಮೊಮ್ಮಗ ಕೂಡ ಪೂಜೆಗೆ ಬಂದಿಲ್ಲ. ಬಹುಶಃ ಹೊರಗಡೆ ಟೂರ್ ಹೋಗಿರೋ ಕಾರಣಕ್ಕೆ ಮಗ-ಸೊಸೆ ಹಾಗೂ ಮೊಮ್ಮಗ ಪೂಜೆಯಲ್ಲಿ ಭಾಗಿಯಾಗಿಲ್ಲ ಅನಿಸುತ್ತೆ.

ಇನ್ನು ಪೂಜೆಯ ನಂತರ ಅಂಬಿ ಜೊತೆಗಿನ ಹಳೆಯ ನನಪುಗಳನ್ನ ಮೆಲುಕು ಹಾಕಿದ ಸುಮಲತಾ, ಕಮಲ್ ಹಾಸನ್ ಕನ್ನಡ ವಿರೋಧಿ ಹೇಳಿಕೆಗೆ ಗುಡುಗಿದರು. ಕಮಲ್ ಹಾಸನ್ ಬಾಯಿಗೆ ಬಂದಂತೆ ಮಾತನಾಡೋದಲ್ಲ. ಕನ್ನಡಿಗರಿಗೆ ಕ್ಷಮೆ ಯಾಚಿಸಲೇಬೇಕು ಅಂತ ಆಗ್ರಹಿಸಿದರು.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಮದರ್ ಇಂಡಿಯಾ ಸುಮಲತಾ ಅಂಬರೀಶ್ ಹಾಗೂ ಅಭಿ, ಅವಿವಾರಿಂದ ಅಂತರ ಕಾಯ್ದುಕೊಂಡಿರೋದು ಗೊತ್ತೇಯಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರನ್ನ ಅನ್‌ಫಾಲೋ ಮಾಡಿ, ಹೆತ್ತ ತಾಯಿಗೆ ಹತ್ತಿರ ಆಗುವ ಮೂಲಕ ಸುಮಕ್ಕನಿಗೆ ಗುಡ್ ಬೈ ಹೇಳಿದ್ರು ದಾಸ ದರ್ಶನ್. ಇದನ್ನ ಅಲ್ಲಗೆಳೆದಿದ್ದ ಸುಮಲತಾ ಅಂಬರೀಶ್, ಮೊಮ್ಮಗನ ನಾಮಕರಣಕ್ಕೆ ಆಹ್ವಾನ ಮಾಡ್ತೀನಿ ಅಂದಿದ್ರು. ಆದ್ರೆ ಅಭಿ-ಅವಿವಾ ಮಗನ ನಾಮಕರಣ ಮಹೋತ್ಸವಕ್ಕೆ ದರ್ಶನ್ ಬಂದೇ ಇರಲಿಲ್ಲ.

ದರ್ಶನ್ ಕೋಪ, ಮುನಿಸು ಬರೀ ಸುಮಲತಾ ಜೊತೆಗಷ್ಟೇ. ಅಂಬರೀಶ್ ಜೊತೆಗಲ್ಲ. ಅದೇ ಕಾರಣದಿಂದ ದಚ್ಚು, ಪಿತೃಸಮಾನ ಅಂಬರೀಶ್‌‌ರಿಗೆ ಬರ್ತ್ ಡೇ ಪ್ರಯುಕ್ತ ಭಾವನಾತ್ಮಕ ಪೋಸ್ಟ್ ಹಾಕಿ, ತಮ್ಮ ಮನದ ಮಾತುಗಳನ್ನ ಹೊರಹಾಕಿದ್ದಾರೆ.

‘ತಂದೆ ಸಮಾನರಾದ ಅಂಬಿ ಅಪ್ಪಾಜಿ ರವರು ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಜೀವನ ಶೈಲಿ, ಕಲಿಸಿದ್ದ ಪಾಠಗಳು ಮತ್ತು ತೋರುತ್ತಿದ್ದ ಪ್ರೀತಿ ನನಗೆ ಸದಾ ದಾರಿದೀಪವಾಗಿದೆ. ಈ ಹುಟ್ಟು ಹಬ್ಬದ ದಿನದಂದು ನೀವು ದೈಹಿಕವಾಗಿ ಇಲ್ಲದಿದ್ದರೂ, ನಿಮ್ಮ ಕಲಾಸೇವೆ ಹಾಗೂ ಜನಹಿತ ಕಾರ್ಯಗಳಿಗೆ ಕನ್ನಡಿಗರು ಸದಾ ಚಿರರುಣಿ. ವಿ ಲವ್ ಯೂ ರೆಬೆಲ್ ಸ್ಟಾರ್’.

ಅಂಬಿಯೊಂದಿಗೆ ದಚ್ಚುಗೆ ಒಂದು ಎಮೋಷನಲ್ ಬಾಂಡಿಂಗ್ ಇದೆ. ಅದಕ್ಕೆ ಕಾರಣ ದಚ್ಚು ಹೆಚ್ಚಾಗಿ ಪಳಗಿದ್ದೇ ಅಂಬಿ ಗರಡಿಯಲ್ಲಿ ಅನ್ನೋದು ಓಪನ್ ಸೀಕ್ರೆಟ್. ಅಷ್ಟೇ ಅಲ್ಲ, ದೇವರ ಮಗ ಚಿತ್ರದಲ್ಲಿ ಸಹನಟ ಆಗಿದ್ದರಿಂದ ಹಿಡಿದು, ಬುಲ್ ಬುಲ್ ಚಿತ್ರದಲ್ಲಿ ಅಂಬಿಗಾಗಿ ಚಿತ್ರ ನಿರ್ಮಾಣ ಮಾಡುವವರೆಗೆ ರೆಬೆಲ್ ಸ್ಟಾರ್ ಜೊತೆ ಒಂದೊಳ್ಳೆ ಜರ್ನಿ ಇದೆ. ದೇವರ ಮಗ, ಅಣ್ಣಾವ್ರು, ಬುಲ್‌ಬುಲ್, ಅಂಬರೀಶ ಹಾಗೂ ಕುರುಕ್ಷೇತ್ರ.. ಹೀಗೆ ಒಂದಲ್ಲ ಎರಡಲ್ಲ ಐದೈದು ಸಿನಿಮಾಗಳಲ್ಲಿ ದಚ್ಚು-ಅಂಬಿ ತೆರೆ ಹಂಚಿಕೊಂಡಿದ್ರು. ಅದ್ರ ಕೃತಜ್ಞತಾ ಭಾವ ದರ್ಶನ್‌‌ಗಿರೋದು ನಿಜಕ್ಕೂ ಮೆಚ್ಚುವ ವಿಷಯ.

Exit mobile version