ನವದೆಹಲಿ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರ ಆರೋಪಿಗಳಿಗೆ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಜುಲೈ 17ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.
ಈ ಪ್ರಕರಣದಲ್ಲಿ ದರ್ಶನ್ ಮತ್ತು ಇತರ 16 ಆರೋಪಿಗಳು ಸುಮಾರು ಆರು ತಿಂಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ಕರ್ನಾಟಕ ಹೈಕೋರ್ಟ್ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿದ್ದರೂ, ಪ್ರಮುಖ ಏಳು ಆರೋಪಿಗಳಿಗೆ ಜಾಮೀನು ನೀಡಿರುವುದನ್ನು ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಒತ್ತಾಯದಿಂದ ಪ್ರಶ್ನಿಸಿದ್ದಾರೆ. ಮೇ 21ರಂದು ನಡೆದ ವಿಚಾರಣೆಯ ಬಳಿಕ, ಸುಪ್ರೀಂ ಕೋರ್ಟ್ ಈ ವಿಷಯವನ್ನು ಜುಲೈ 17ಕ್ಕೆ ಮುಂದೂಡಿತ್ತು.
ಈ ಪ್ರಕರಣದಲ್ಲಿ ದರ್ಶನ್ ಮತ್ತು ಆತನ ಗ್ಯಾಂಗ್‌ನವರು ಬಂಧನಕ್ಕೊಳಗಾಗಿದ್ದರು. ಜಾಮೀನು ಪಡೆದ ಬಳಿಕ ದರ್ಶನ್ ತಮ್ಮ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ, ದರ್ಶನ್ ತಮ್ಮ ಮುಂಬರುವ ಚಿತ್ರ “ದಿ ಡೆವಿಲ್” ಚಿತ್ರೀಕರಣಕ್ಕಾಗಿ ಥಾಯ್ಲೆಂಡ್‌ಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಏರ್‌ಪೋರ್ಟ್‌ನಲ್ಲಿ ಕುಟುಂಬದೊಂದಿಗೆ ತೆಗೆದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ದಿ ಡೆವಿಲ್” ಚಿತ್ರದ ಚಿತ್ರೀಕರಣವು ಥಾಯ್ಲೆಂಡ್‌ನಲ್ಲಿ ಸುಮಾರು 11 ದಿನಗಳ ಕಾಲ ನಡೆಯಲಿದೆ. ಈ ಚಿತ್ರದಲ್ಲಿ ಕೆಲವು ಹಾಡುಗಳ ಚಿತ್ರೀಕರಣ ಹಾಗೂ ಒಂದು ಸಾಹಸ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದೆ. ದರ್ಶನ್‌ಗೆ ಈ ಚಿತ್ರೀಕರಣದಲ್ಲಿ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಕೂಡ ಸಾಥ್ ನೀಡಿದ್ದಾರೆ.