ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಿದ್ಧವಾಗಿರುವ ದೈವ ಚಿತ್ರದ ಟೀಸರ್ ಶಿಕ್ಷಕರ ದಿನಾಚರಣೆಯಂದು (ಸೆಪ್ಟೆಂಬರ್ 5, 2025) ಬಿಡುಗಡೆಯಾಗಿದೆ. ಕಲ್ಪವೃಕ್ಷ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಜಯಮ್ಮ ಪದ್ಮರಾಜ್ ನಿರ್ಮಿಸಿರುವ ಈ ಚಿತ್ರವನ್ನು ರಾಮಪ್ಪ ಸೋಮಪ್ಪ ಮೇಗಲಮನಿ ಮತ್ತು ಸೋಮಶೇಖರ್ ಜಿ. ಪಟ್ಟಣಶೆಟ್ಟಿ ಸಹ-ನಿರ್ಮಾಣ ಮಾಡಿದ್ದಾರೆ. ಎಂ.ಜೆ. (ಮಂಜುನಾಥ್ ಜಯರಾಜ್) ಈ ಚಿತ್ರವನ್ನು ನಿರ್ದೇಶಿಸಿದ್ದು, ಕಾಲಭೈರವನ ಆರಾಧಕ ಜೋಗಯ್ಯನ ಪಾತ್ರದಲ್ಲಿ ಎರಡು ವಿಭಿನ್ನ ಗೆಟಪ್‌ಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಗುರು ದೇಶಪಾಂಡೆ, ಹರಿ ಸಂತೋಷ್, ಭರ್ಜರಿ ಚೇತನ್, ಜಡೇಶ್ ಕೆ. ಹಂಪಿ, ಮತ್ತು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್ ಒಟ್ಟಿಗೆ ಸೇರಿ ಈ ಟೀಸರ್ ಅನಾವರಣವನ್ನು ಮಾಡಿದರು. ದಿಗ್ಗಜರು ಚಿತ್ರತಂಡಕ್ಕೆ ಶುಭಾಶಯ ಕೋರಿ, ಶಿಕ್ಷಕರ ದಿನದಂದು ಈ ಟೀಸರ್ ಬಿಡುಗಡೆಯಾಗಿರುವುದು ವಿಶೇಷವಾಗಿದೆ, ಏಕೆಂದರೆ ಎಂ.ಟೆಕ್ ಪದವೀಧರರಾಗಿರುವ ಎಂ.ಜೆ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ.
ದೈವ ಚಿತ್ರವು ಪೌರಾಣಿಕ ಕಥೆಯ ಚಿತ್ರವಲ್ಲ, ಬದಲಿಗೆ ಪಕ್ಕಾ ದೇಸೀ ಕಥಾಹಂದರದೊಂದಿಗೆ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದೆ. ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಪ್ರಸ್ತುತ ರೀ-ರೆಕಾರ್ಡಿಂಗ್ ಹಂತದಲ್ಲಿದೆ. ಶೀಘ್ರದಲ್ಲೇ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಲಿದೆ. ಚಿತ್ರದ ತಾರಾಬಳಗದಲ್ಲಿ ಸುರಭಿ, ನೀತು ರಾಯ್, ಬಲ ರಾಜ್ವಾಡಿ, ಮಂಜುರಾಜ್ ಸೂರ್ಯ, ಅರುಣ್ ಬಚ್ಚನ್, ಮೀಸೆ ಮೂರ್ತಿ ಮತ್ತು ಇತರರು ಇದ್ದಾರೆ. ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ, ಛಾಯಾಗ್ರಾಹಕ ಸಿದ್ಧಾರ್ಥ್, ಮತ್ತು ನೃತ್ಯ ನಿರ್ದೇಶಕ ಭೂಷಣ್ ಚಿತ್ರಕ್ಕೆ ತಾಂತ್ರಿಕ ಬೆಂಬಲ ನೀಡಿದ್ದಾರೆ.
ಎಂ.ಜೆ. ಮಾತನಾಡಿ, “ಈ ಚಿತ್ರದಲ್ಲಿ ಕಾಲಭೈರವನ ಆರಾಧಕನ ಪಾತ್ರದಲ್ಲಿ ನಾನು ಎರಡು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಇದು ನೋಡುಗರಿಗೆ ಬೇಕಾದ ಎಲ್ಲಾ ಮನರಂಜನಾತ್ಮಕ ಅಂಶಗಳನ್ನು ಹೊಂದಿರುವ ಕಮರ್ಷಿಯಲ್ ಚಿತ್ರ. ಶಿಕ್ಷಕರ ದಿನದಂದು ಕನ್ನಡದ ಐದು ಜನಪ್ರಿಯ ನಿರ್ದೇಶಕರು ಟೀಸರ್ ಬಿಡುಗಡೆ ಮಾಡಿರುವುದಕ್ಕೆ ಧನ್ಯವಾದಗಳು,” ಎಂದರು. ನಟ ಮಂಜುರಾಜ್ ಸೂರ್ಯ, “ನಾನು ಚಿತ್ರದಲ್ಲಿ ಎನ್.ಜಿ.ಒ. ಮೂಲಕ ಗ್ರಾಮೀಣ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ,” ಎಂದು ತಿಳಿಸಿದರು. ನಿರ್ಮಾಪಕಿ ಜಯಮ್ಮ ಪದ್ಮರಾಜ್ ಮಾತನಾಡಿ, “ನನ್ನ ಮಗ ಎಂ.ಜೆ. ಈ ಚಿತ್ರದ ಮೂಲಕ ನಾಯಕ ಮತ್ತು ನಿರ್ದೇಶಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ಎಲ್ಲರೂ ಶುಭ ಹಾರೈಸಿ,” ಎಂದರು.






