ಬೆಂಗಳೂರು: ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಝೈದ್ ಖಾನ್ ತಮ್ಮ ಚೊಚ್ಚಲ ಚಿತ್ರ “ಬನಾರಸ್” ಮೂಲಕ ಗಮನ ಸೆಳೆದಿದ್ದರು. ಈಗ ಅವರ ಎರಡನೇ ಚಿತ್ರ “ಕಲ್ಟ್” ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. “ಉಪಾಧ್ಯಕ್ಷ” ಖ್ಯಾತಿಯ ನಿರ್ದೇಶಕ ಅನಿಲ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಚಿತಾ ರಾಮ್ ಮತ್ತು ಮಲೈಕಾ ನಾಯಕಿಯರಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಮೊದಲ ಹಾಡು “ಅಯ್ಯೊ ಶಿವನೇ” ಆನಂದ್ ಆಡಿಯೋ ಮೂಲಕ ಇತ್ತೀಚೆಗೆ ಬಿಡುಗಡೆಯಾಗಿದೆ.
ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡನ್ನು ಜಸ್ಕರಣ್ ಸಿಂಗ್ ಮತ್ತು ಪೃಥ್ವಿ ಭಟ್ ಹಾಡಿದ್ದಾರೆ. ಝೈದ್ ಖಾನ್ ಮತ್ತು ಮಲೈಕಾ ಈ ಹಾಡಿನಲ್ಲಿ ಅಭಿನಯಿಸಿದ್ದು, ಅನಿಲ್ ಕುಮಾರ್ ಅವರೇ ಈ ಗೀತೆಗೆ ಸಾಹಿತ್ಯ ರಚಿಸಿದ್ದಾರೆ. ಬಿಡುಗಡೆಯಾದ ಕ್ಷಣದಿಂದಲೇ “ಅಯ್ಯೊ ಶಿವನೇ” ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ಆನಂದ್ ಆಡಿಯೋ ಸಂಸ್ಥೆಯೂ ಈ ಹಾಡಿನ ಯಶಸ್ಸಿಗೆ ಸಂತೋಷ ವ್ಯಕ್ತಪಡಿಸಿದೆ.
ಕೆ.ವಿ.ಎನ್ ಪ್ರೊಡಕ್ಷನ್ಸ್ ಮತ್ತು ಲೋಕಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಕಲ್ಟ್” ಚಿತ್ರಕ್ಕೆ ಜೆ.ಎಸ್. ವಾಲಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಮತ್ತು ರವಿವರ್ಮ ಅವರ ಸಾಹಸ ನಿರ್ದೇಶನವಿದೆ. ಈ ಬಹುನಿರೀಕ್ಷಿತ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.