ಸ್ಯಾಂಡಲ್‌ವುಲ್ ನಟ ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ ಲಾರ್ಡ್’ ಸಿನಿಮಾಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಕ್ತ ಮನಸ್ಸಿನಿಂದ ಬೆಂಬಲ ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು ಖಂಡಿತವಾಗಿಯೂ ನೋಡುತ್ತೇನೆ ಎಂದು ಹೇಳುವ ಮೂಲಕ, ಸಿನಿಮಾದ ಸಾಮಾಜಿಕ ಸಂದೇಶವನ್ನು ಮೆಚ್ಚಿಕೊಂಡಿದ್ದಾರೆ.
ದುನಿಯಾ ವಿಜಯ್ ಹಾಗೂ ‘ಲ್ಯಾಂಡ್ ಲಾರ್ಡ್’ ಚಿತ್ರದ ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಸೇರಿದಂತೆ ಸಿನಿಮಾ ತಂಡ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚಿತ್ರ ವೀಕ್ಷಣೆಗೆ ಆತ್ಮೀಯ ಆಹ್ವಾನ ನೀಡಿದ್ದಾರೆ. ಈ ವೇಳೆ ಚಿತ್ರದ ಕಥಾವಸ್ತು, ಅದರ ಸಾಮಾಜಿಕ ಹಿನ್ನೆಲೆ ಮತ್ತು ಶೋಷಣೆಗೆ ಒಳಗಾದ ಜನರ ಹೋರಾಟದ ಕುರಿತು ವಿವರಿಸಿದರು. ತಂಡದ ಮಾತುಗಳನ್ನು ಆಲಿಸಿದ ಸಿಎಂ, “ಈ ಸಿನಿಮಾ ಇಂದಿನ ಕಾಲಘಟ್ಟಕ್ಕೆ ಅತ್ಯಂತ ಅವಶ್ಯಕ. ನಾನು ನೋಡೇ ನೋಡ್ತೀನಿ” ಎಂದು ಭರವಸೆ ನೀಡಿದರು.
“ಶೋಷಣೆಗೊಳಗಾದವರ ಹೋರಾಟದ ಕಥೆಯನ್ನು ಜನರು ನೋಡಲೇಬೇಕು. ಇಂತಹ ಸಿನಿಮಾಗಳು ಸಮಾಜಕ್ಕೆ ಎಚ್ಚರಿಕೆಯ ಗಂಟೆಯಂತೆ ಕಾರ್ಯನಿರ್ವಹಿಸುತ್ತವೆ” ಎಂದು ಸಿಎಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದುನಿಯಾ ವಿಜಯ್ ಖುದ್ದಾಗಿ ಸಿಎಂ ಅವರನ್ನು ಭೇಟಿಯಾಗಿ ಆಹ್ವಾನ ನೀಡಿದ್ದು, ಈ ಭೇಟಿ ಚಿತ್ರಕ್ಕೆ ಹೆಚ್ಚಿನ ಮಹತ್ವವನ್ನು ತಂದಿದೆ. ಈ ಸಂದರ್ಭದಲ್ಲಿ ದುನಿಯಾ ವಿಜಯ್, “ಸಿಎಂ ಅವರಂತಹ ಹಿರಿಯ ನಾಯಕರು ಸಾಮಾಜಿಕ ವಿಷಯಗಳನ್ನು ಒಳಗೊಂಡ ಚಿತ್ರಗಳಿಗೆ ಬೆಂಬಲ ನೀಡಿದರೆ ಅದು ನಮಗೆ ದೊಡ್ಡ ಶಕ್ತಿ. ‘ಲ್ಯಾಂಡ್ ಲಾರ್ಡ್’ ಸಿನಿಮಾ ಸಮಾಜಕ್ಕೆ ಒಂದಷ್ಟು ಸಂದೇಶ ನೀಡುತ್ತದೆ ಎಂಬ ನಂಬಿಕೆ ಇದೆ” ಎಂದು ಹೇಳಿದ್ದಾರೆ.
ಚಿತ್ರದ ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಮಾತನಾಡಿ, “ಈ ಸಿನಿಮಾ ಕೇವಲ ಮನರಂಜನೆಗಾಗಿ ಅಲ್ಲ. ಸಮಾಜದ ಒಂದು ವರ್ಗ ಅನುಭವಿಸುವ ನೋವು, ಹೋರಾಟ ಮತ್ತು ನ್ಯಾಯದ ಹುಡುಕಾಟವನ್ನು ಜನರ ಮುಂದೆ ತರುವ ಪ್ರಯತ್ನವಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಬೆಂಬಲ ನಮ್ಮ ತಂಡಕ್ಕೆ ದೊಡ್ಡ ಪ್ರೇರಣೆ” ಎಂದು ಸಂತಸ ವ್ಯಕ್ತಪಡಿಸಿದರು.
‘ಲ್ಯಾಂಡ್ ಲಾರ್ಡ್’ ಸಿನಿಮಾ ಸಮಾಜದಲ್ಲಿ ನಡೆಯುವ ಅನ್ಯಾಯ, ಶೋಷಣೆ, ದಬ್ಬಾಳಿಕೆ ಮತ್ತು ಅದರ ವಿರುದ್ಧ ಸಾಮಾನ್ಯ ಜನರು ನಡೆಸುವ ಹೋರಾಟದ ಕಥೆಯನ್ನು ಆಧಾರವಾಗಿಟ್ಟುಕೊಂಡಿದೆ. ಭೂಮಾಲೀಕರ ಶೋಷಣೆಗೆ ಒಳಗಾಗುವ ಬಡ ವರ್ಗದ ಜನರ ಸಂಕಟ, ಅವರ ಜೀವನದ ನೋವು, ಹೋರಾಟ ಮತ್ತು ನ್ಯಾಯಕ್ಕಾಗಿ ನಡೆಸುವ ಪ್ರಯತ್ನಗಳನ್ನು ಚಿತ್ರದಲ್ಲಿ ಬಲವಾಗಿ ಬಿಂಬಿಸಲಾಗಿದೆ. ಈ ಸಾಮಾಜಿಕ ಸಂದೇಶವೇ ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆದಿದೆ.
‘ಲ್ಯಾಂಡ್ಲಾರ್ಡ್’ ಸಿನಿಮಾದಲ್ಲಿ ದುನಿಯಾ ವಿಜಯ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ಅವರ ಜೊತೆಗೆ ರಚಿತಾ ರಾಮ್, ರಾಜ್ ಬಿ ಶೆಟ್ಟಿ ಸೇರಿದಂತೆ ಹಲವು ಖ್ಯಾತ ಕಲಾವಿದರು ನಟಿಸಿದ್ದಾರೆ. ಚಿತ್ರದಲ್ಲಿ ಬಲಿಷ್ಠ ಕಥಾಹಂದರ, ಸಂಭಾಷಣೆ, ಭಾವನಾತ್ಮಕ ದೃಶ್ಯಗಳು ಮತ್ತು ಸಾಮಾಜಿಕ ಸಂದೇಶ ಒಂದಾಗಿ ಮೂಡಿಬಂದಿವೆ.
ಚಿತ್ರ ಬಿಡುಗಡೆಯಾದ ಬಳಿಕ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದ್ದು, ಪ್ರೇಕ್ಷಕರು ಸಿನಿಮಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
https://youtu.be/LkqgPVdv1fc?si=R_qFxh6MUYdz8EwS





