ಇತ್ತೀಚೆಗೆ 2024ನೇ ಸಾಲಿನ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್ ಪ್ರದಾನ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನೆರವೇರಿತು. ಒಂದೇ ವೇದಿಕೆ ಶಿವಣ್ಣ, ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ 50ಕ್ಕೂ ಅಧಿಕ ಮಂದಿ ಸ್ಟಾರ್ಸ್ ಸಮಾಗಮಕ್ಕೆ ಸಾಕ್ಷಿ ಆಯ್ತು. ಹಾಗಾದ್ರೆ ಯಾವ್ಯಾವ ಸ್ಟಾರ್‌ಗೆ ಯಾವ ಅವಾರ್ಡ್ ಬಂತು ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಇಲ್ಲಿದೆ ಉತ್ತರ.
- ಕ್ರಿಟಿಕ್ಸ್ ಅವಾರ್ಡ್ಸ್ ವೇದಿಕೆಯಲ್ಲಿ ಶಿವಣ್ಣ, ಗಣಿ, ವಿಜಯ್
- ಅತ್ಯುತ್ತಮ ನಟ ಗಣೇಶ್.. ನಟಿಯಾಗಿ ರೋಶಿನಿ ಮಿಂಚು
- ಬೆಸ್ಟ್ ಡೈರೆಕ್ಟರ್ ವಿಜಿ.. ಶಿವಣ್ಣಗೆ ಜೀವಮಾನ ಸಾಧನೆ ಗರಿ
- ನಾದಬ್ರಹ್ಮ ಹಂಸಲೇಖರಿಂದ ಮೆರುಗು.. ಸ್ಟಾರ್ಸ್ ರಂಗು
ಪ್ರತೀ ವರ್ಷದಂತೆ ಈ ವರ್ಷವೂ ಕಳೆದ 2024ನೇ ಸಾಲಿನ ಕನ್ನಡ ಸಿನಿಮಾಗಳಿಗೆ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್‌ಗಳನ್ನ ನೀಡಲಾಯಿತು. ಸುಮಾರು 29 ವಿವಿಧ ವಿಭಾಗಗಳಲ್ಲಿ 29 ಮಂದಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಸಿನಿಮಾ ಪತ್ರಕರ್ತರು ಹಾಗೂ ವರದಿಗಾರರೇ ನೀಡುವ ಭಾರತದ ಏಕಮೇವ ಕ್ರಿಟಿಕ್ಸ್ ಅವಾರ್ಡ್ ಇದಾಗಿದ್ದು, ನಾದಬ್ರಹ್ಮ ಹಂಸಲೇಖ, ಶಿವರಾಜ್‌ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ದುನಿಯಾ ವಿಜಯ್ ಕುಮಾರ್ ಸೇರಿದಂತೆ ಸಾಕಷ್ಟು ಮಂದಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಶ್ಯಾಮ್ ಪ್ರಸಾದ್, ಶರಣು ಹುಲ್ಲೂರು, ಶಶಿ ಪ್ರಸಾದ್, ವಿಜಯ್ ಭರಮಸಾಗರ ಸೇರಿದಂತೆ ಹಲವು ಪತ್ರಕರ್ತರು ನಡೆಸಿದ ಈ ಕಾರ್ಯಕ್ರಮ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಅರ್ಥಪೂರ್ಣವಾಗಿ ನೆರವೇರಿತು.
62ನೇ ವಯಸ್ಸಿನಲ್ಲಿ ಕೂಡ ಕ್ಯಾನ್ಸರ್‌ನ ಗೆದ್ದು ಬಂದಿರೋ ಶಿವರಾಜ್‌ಕುಮಾರ್ ಎನರ್ಜಿ ನಿಜಕ್ಕೂ ಇಂದಿನ ಜನರೇಷನ್‌ಗೆ ಮಾದರಿ. ಹಾಗಾಗಿಯೇ ಭೈರತಿ ರಣಗಲ್ ಸಿನಿಮಾದಿಂದ ನೋಡುಗರಿಗೆ ಮಸ್ತ್ ಮನರಂಜನೆ ನೀಡಿದಂತಹ ಶಿವಣ್ಣಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇನ್ನು ಕಳೆದ ವರ್ಷ ಕನ್ನಡ ಚಿತ್ರರಂಗಕ್ಕೆ ಬ್ಲಾಕ್ ಬಸ್ಟರ್ ಹಿಟ್ ನೀಡಿದಂತಹ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ನೀಡಲಾಯಿತು. ಕೃಷ್ಣಂ ಪ್ರಣಯಸಖಿ ಸಿನಿಮಾದಲ್ಲಿನ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಂಡರು ಗೋಲ್ಡನ್ ಬಾಯ್ ಗಣಿ.
ಭೀಮ ಸಿನಿಮಾದ ನಿರ್ದೇಶನಕ್ಕಾಗಿ ದುನಿಯಾ ವಿಜಯ್ ಕುಮಾರ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇನ್ನು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮರ್ಫಿ ಚಿತ್ರದ ನಟನೆಗಾಗಿ ರೋಶಿನಿ ಪ್ರಕಾಶ್‌ಗೆ ನೀಡಲಾಯಿತು.
ಸಂಹಲೇಖ, ಟಿಎಸ್ ನಾಗಾಭರಣ, ಸುಮನ್ ನಗರ್ಕರ್ ಹಾಗೂ ಪದ್ಮಶ್ರೀ ಡಾ. ಕಾಮಿನಿ ರಾವ್ ಎಲ್ಲಾ ವಿಜೇತ ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿಗಳನ್ನ ವಿತರಿಸಿದರು. ಪ್ರಕಾಶ್ ರೈ ಪ್ರೆಸೆಂಟ್ ಮಾಡಿದ್ದ ಫೋಟೋ ಚಿತ್ರದ ನಿರ್ದೇಶಕ ಗೋನ್ವಾರ್ ಹಾಗೂ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್‌ಗೂ ಪ್ರಶಸ್ತಿಗಳನ್ನ ನೀಡಲಾಯಿತು.
ಒಟ್ಟಾರೆ ಹೀಗೆ ಚಿತ್ರರಂಗದಲ್ಲಿ ಕಲಾವಿದರು ಹಾಗೂ ತಂತ್ರಜ್ಞರನ್ನು ಉತ್ತೇಜಿಸುವ ಪ್ರವೃತ್ತಿ ಶ್ಲಾಘನೀಯ. ಇದು ಸಾಕಷ್ಟು ಮಂದಿಗೆ ಸ್ಫೂರ್ತಿ ಆಗಬಲ್ಲದು. ಅಲ್ಲದೆ, ವಿಮರ್ಶೆ ಮಾಡುವ ಪತ್ರಕರ್ತರೇ ಪ್ರಶಸ್ತಿ ನೀಡುವುದರಿಂದ ವಿಜೇತರಿಗೆ ಪ್ರಶಸ್ತಿಯ ಮೌಲ್ಯದ ಜೊತೆ ಅವರ ಜವಾಬ್ದಾರಿಗಳು ಕೂಡ ಹೆಚ್ಚಲಿವೆ.