ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಮತ್ತು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಇಂದು ಮುಂಜಾನೆ ಲಘು ಹೃದಯಾಘಾತ ಆಗಿದೆ. ಅಪಾಯಕಾರಿ ಸನ್ನಿವೇಶದ ನಡುವೆ ವೈದ್ಯರು ಸಮಯಸ್ಫೂರ್ತಿಯಿಂದ ನಡೆಸಿದ ಅತ್ಯಾಧುನಿಕ ಚಿಕಿತ್ಸೆಯಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ಮುಂಜಾನೆ ಸುಮಾರು 5 ಗಂಟೆಗೆ ಚಂದ್ರಚೂಡ್ ಅವರಿಗೆ ಎದೆ ನೋವು ತೋರಿಸಿಕೊಂಡಿತು. ತಕ್ಷಣವೇ ಅವರನ್ನು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸುಮಾರು 7 ಗಂಟೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭವಾಯಿತು. ಹೃದಯ ಸ್ಪಂದನ ಪರೀಕ್ಷೆ (ಎಂಜಿಯೋಗ್ರಾಮ್) ಮಾಡಿದ ನಂತರ ವೈದ್ಯರು ಅವರ ಹೃದಯದಲ್ಲಿ ಒಂದಲ್ಲ, ಎರಡಲ್ಲ, ಮೂರು ಕಡೆ ಬ್ಲಾಕೇಜ್ ಇದೆ ಎಂದು ಗುರುತಿಸಿದರು.
ವೈದ್ಯರ ತಂಡ ತಕ್ಷಣವೇ ಕಾರ್ಯಾಚರಣೆಗೆ ಮುಂದಾಗಿ ಚಂದ್ರಚೂಡ್ ಅವರ ಹೃದಯದಲ್ಲಿ ಮೂರು ಸ್ಟಂಟ್ಗಳನ್ನು ಅಳವಡಿಸಿತು. ಈ ಸಮಯಪ್ರಜ್ಞೆಯ ನಿರ್ಧಾರ ಮತ್ತು ತ್ವರಿತ ಚಿಕಿತ್ಸೆಯಿಂದಾಗಿ ಅವರ ಪ್ರಾಣ ರಕ್ಷಣೆ ಸಾಧ್ಯವಾಯಿತು. ಚಿಕಿತ್ಸೆಯ ನಂತರ ಚಂದ್ರಚೂಡ್ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿದೆ. ವೈದ್ಯರು ಅವರ ಸ್ಥಿತಿ ಸುಧಾರಿಸುತ್ತಿದೆ ಎಂದು ತಿಳಿಸಿದ್ದಾರೆ, ಆದರೆ ಕೆಲವು ದಿನಗಳ ಕಾಲ ಕಟ್ಟುನಿಟ್ಟಾದ ಮೇಲ್ವಿಚಾರಣೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.





