ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಅವರ ವೈಯಕ್ತಿಕ ಜೀವನದಲ್ಲಿ ಗೊಂದಲಗಳು ತಾರಕಕ್ಕೇರಿವೆ. ಮದುವೆಯಾದ ಬಳಿಕ ಚೈತ್ರಾ ಅವರ ತಂದೆ ಬಾಲಕೃಷ್ಣ ನಾಯ್ಕ್ ಅವರು ತಮ್ಮ ಮಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕೌಟುಂಬಿಕ ವಿವಾದ ಈವರೆಗೆ ಬಾಯಿಮಾತಿನಲ್ಲಿದ್ದರೂ, ಈಗ ಬಾಲಕೃಷ್ಣ ನಾಯ್ಕ್ ಚೈತ್ರಾ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ತಮ್ಮ ಜೀವಕ್ಕೆ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ.
ಬಾಲಕೃಷ್ಣ ನಾಯ್ಕ್‌ರ ಆರೋಪವೇನು?
ಬಾಲಕೃಷ್ಣ ನಾಯ್ಕ್ ಅವರು ಚೈತ್ರಾ ಕುಂದಾಪುರ ತಮ್ಮ ಆಸ್ತಿ ಮತ್ತು ಭೂಮಿಗಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. “ಚೈತ್ರಾ ನನಗೆ ಸುಪಾರಿ ನೀಡಿ ಭೂಗತ ದೊರೆಗಳ ಮೂಲಕ ಕೊಲೆ ಮಾಡಿಸಲು ಯತ್ನಿಸುತ್ತಿದ್ದಾರೆ. ಆಸ್ತಿಗಾಗಿ ಹೇಯ ಕೃತ್ಯಕ್ಕೆ ಮುಂದಾಗಿದ್ದಾರೆ,” ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಚೈತ್ರಾ ಕುಂದಾಪುರರ ಸ್ಮಾರ್ಟ್ ರಿಪ್ಲೈ
ತಂದೆಯ ಈ ಗಂಭೀರ ಆರೋಪಕ್ಕೆ ಚೈತ್ರಾ ಕುಂದಾಪುರ ಸಾಮಾಜಿಕ ಜಾಲತಾಣದಲ್ಲಿ ಸರಸವಾಗಿ ಟಾಂಗ್ ನೀಡಿದ್ದಾರೆ. ಅಡಿಕೆ ಹಿಡಿದು ಫೋಟೋಗೆ ಪೋಸ್ ಕೊಟ್ಟಿರುವ ಚೈತ್ರಾ, ಸೋಷಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡು, “ತೋಟದಲ್ಲಿ ಓಡಾಡುವಾಗ ಒಂದು ಅಡಿಕೆ ಸಿಕ್ಕಿತು. ಇದಕ್ಕೆ ಹಿಂದಿಯಲ್ಲಿ ‘ಸುಪಾರಿ’ ಅಂತಾರೆ. ತುಳುವಿನಲ್ಲಿ ಏನಂತಾರೆ??” ಎಂದು ವ್ಯಂಗ್ಯಾತ್ಮಕವಾಗಿ ಪ್ರಶ್ನಿಸಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೌಟುಂಬಿಕ ವಿವಾದದ ಹಿನ್ನೆಲೆ
ಚೈತ್ರಾ ಕುಂದಾಪುರ ಅವರ ಮದುವೆಗೆ ತಂದೆ ಬಾಲಕೃಷ್ಣ ನಾಯ್ಕ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದಾಗಿ ಕೌಟುಂಬಿಕ ವಿವಾದ ತಾರಕಕ್ಕೇರಿತು. ಈಗ ತಂದೆಯ ಆರೋಪಗಳು ಮತ್ತು ಚೈತ್ರಾ ಅವರ ಸ್ಮಾರ್ಟ್ ರಿಪ್ಲೈ ಈ ವಿವಾದಕ್ಕೆ ಹೊಸ ಆಯಾಮವನ್ನು ನೀಡಿದೆ. ಚೈತ್ರಾ ಅವರ ಈ ವೈರಲ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.