ರಾಧೆ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ‘ಬೃಂದಾವಿಹಾರಿ’!

ಅಂದು ದ್ವಾಪರ.. ಇಂದು ರಾಧ ರಾಧ.. ಅದೇ ಫೀಲ್ ಗುಡ್

Untitled design 2026 05 07T154253.085

ದ್ವಾಪರ ಸಾಂಗ್‌ನಿಂದ ಎಲ್ಲರನ್ನ ಮಂತ್ರಮುಗ್ಧಗೊಳಿಸಿದ್ದ ಗೋಲ್ಡನ್ ಸ್ಟಾರ್ ಗಣೇಶ್, ಶ್ರೀನಿವಾಸ್ ರಾಜು ಹಾಗೂ ಕವಿರತ್ನ ಡಾ ವಿ ನಾಗೇಂದ್ರ ಪ್ರಸಾದ್ ಜೋಡಿ ಇದೀಗ ಮತ್ತೊಮ್ಮೆ ಮೋಡಿ ಮಾಡೋಕೆ ಸಜ್ಜಾಗಿದೆ. ಬೃಂದಾ ವಿಹಾರಿಯಾಗಿ ಕೊಳಲು ಹಿಡಿದು ಬರ್ತಿರೋ ಗಣಿ ಒನ್ಸ್ ಅಗೈನ್ ರಾಧೆ ಗುಂಗಲ್ಲಿದ್ದಾರೆ. ಆ ಫೀಲ್ ಗುಡ್ ಝಲಕ್‌‌ನ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ ನೋಡಿ..

ಕನ್ನಡ ಚಿತ್ರರಂಗದಲ್ಲಿ ಪ್ರೇಮಕಥೆಗಳಿಗೆ ಹೊಸ ಭಾಷ್ಯ ಬರೆದ ಗೋಲ್ಡನ್ ಸ್ಟಾರ್ ಗಣೇಶ್, ಈಗ ಬೃಂದಾವಿಹಾರಿಯಾಗಿ ಪ್ರೇಕ್ಷಕರ ಎದೆಯಲ್ಲಿ ಪ್ರೇಮದ ಕೊಳಲು ನುಡಿಸುತ್ತಿದ್ದಾರೆ. ಕೃಷ್ಣಂ ಪ್ರಣಯ ಸಖಿಯ ದ್ವಾಪರ ದಾಟಿದ ಮೇಲೆ, ಈಗ ರಾಧಾ ರಾಧಾ ಎನ್ನುತ್ತಾ ಬಂದಿರುವ ಗಣೇಶ್, ತಮ್ಮ ನಟನಾ ಪಯಣದ ಎರಡು ದಶಕಗಳ ಸಂಭ್ರಮದಲ್ಲಿದ್ದಾರೆ. ಇದೆ ವೇಳೆ ತುಮಕೂರಿನ ಅದ್ದೂರಿ ವೇದಿಕೆಯಲ್ಲಿ ಬಿಡುಗಡೆಯಾದ ಈ ಹಾಡು, ಈಗ ಸ್ಯಾಂಡಲ್‌ವುಡ್‌ನ ಲೇಟೆಸ್ಟ್ ಸೆನ್ಸೇಷನ್ ಆಗಿದೆ. ಗಣೇಶ್ ಅವರ ಆ ಸಾಫ್ಟ್ ಲುಕ್ ಮತ್ತು ಸಿಗ್ನೇಚರ್ ಸ್ಮೈಲ್‌ಗೆ ಅಭಿಮಾನಿಗಳು ಮತ್ತೊಮ್ಮೆ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಆನಂದ್ ಆಡಿಯೋ ಮೂಲಕ ಬಿಡುಗಡೆಯಾದ ಈ ಹಾಡು ಕೇವಲ 72 ಗಂಟೆಗಳಲ್ಲಿ 2.5 ಮಿಲಿಯನ್ ವ್ಯೂವ್ಸ್ ದಾಟಿ ಮುನ್ನುಗ್ಗುತ್ತಿದೆ ಎಂದರೆ ಇದರ ಕ್ರೇಜ್ ಎಷ್ಟಿರಬಹುದು ಊಹಿಸಿ. ದ್ವಾಪರ ಹಾಡಿನ ಮೂಲಕ ಇಡೀ ದೇಶವನ್ನೇ ತಿರುಗಿ ನೋಡುವಂತೆ ಮಾಡಿದ್ದ ಗಣೇಶ್-ಶ್ರೀನಿವಾಸ್ ರಾಜು ಜೋಡಿ, ಈಗ ರಾಧಾ ರಾಧಾ ಮೂಲಕ ಆ ಯಶಸ್ಸನ್ನು ಮೀರಿಸುವ ಮುನ್ಸೂಚನೆ ನೀಡಿದೆ. ಹೇಷಮ್ ಅಬ್ದುಲ್ ವಹಾಬ್ ಅವರ ಮಾಂತ್ರಿಕ ಸಂಗೀತಕ್ಕೆ ಸಿದ್ ಶ್ರೀರಾಮ್ ಮತ್ತು ಚಿನ್ಮಯಿ ಅವರ ಧ್ವನಿ ಸೇರಿದ ಮೇಲೆ ಕೇಳಬೇಕೆ? ಈ ಹಾಡು ಕೇಳುಗರ ಕಿವಿಯಲ್ಲಿ ಜೇನಿನಂತೆ ಹರಿಯುತ್ತಿದೆ. ಈ ಹಾಡಿನ ಅಸಲಿ ಶಕ್ತಿಯೇ ಅದರ ಸಾಹಿತ್ಯ. ಅಂದು ದ್ವಾಪರ  ಹಾಡಿಗೆ ಅದ್ಭುತ ಸಾಹಿತ್ಯ ಬರೆದು ಇಡೀ ದೇಶವೇ ಗುನುಗುವಂತೆ ಮಾಡಿದ್ದ ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್, ಈಗ ರಾಧಾ ರಾಧಾ ಹಾಡಿಗೂ ತಮ್ಮ ಲೇಖನಿಯ ಬಲ ನೀಡಿದ್ದಾರೆ.  ಜೊತೆಗೆ ಸಾಹಿತ್ಯಕ್ಕೆ ಕವಿರತ್ನ ಕೂಡ ಕೈ ಜೋಡಿಸಿದ್ದಾರೆ.

ಕೇವಲ ಹಾಡು ಮಾತ್ರವಲ್ಲ, ಈ ಹಾಡಿನ ಚಿತ್ರೀಕರಣವೂ ಒಂದು ಅದ್ಭುತ ಕಲಾಕೃತಿಯಂತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ನಾಯಕಿ ದೇವಿಕಾ ಭಟ್ ಅವರ ಕೆಮಿಸ್ಟ್ರಿ ಕಿಕ್ ಕೊಡುತ್ತಿದ್ದು, ಸಿನಿಮಾಟೋಗ್ರಫಿ ಪ್ರತಿಯೊಂದು ಫ್ರೇಮ್ ಅನ್ನು ಪೇಂಟಿಂಗ್‌ನಂತೆ ಕಣ್ಮುಂದೆ ತಂದಿದೆ. ಬೃಂದಾವನದ ಆ ಸೊಬಗು, ಪ್ರೇಮಿಗಳ ನಡುವಿನ ಆ ತುಂಟಾಟ ಎಲ್ಲವೂ ‘ಬೃಂದಾವಿಹಾರಿ’ ಚಿತ್ರದ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿದೆ. ಗಣೇಶ್ ಅವರ ಮೆಲೋಡಿ ಹಾಡುಗಳ ಲಿಸ್ಟ್‌ಗೆ ಇದೊಂದು ಮಾಸ್ಟರ್ ಪೀಸ್ ಸೇರ್ಪಡೆಯಾದಂತಿದೆ.

ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳಿಗೆ ಹೆಸರಾದ ನಿರ್ಮಾಪಕ ಸಮೃದ್ಧಿ ಮಂಜುನಾಥ್, ಈ ಬಾರಿ ಯಾವುದೇ ಕಾಂಪ್ರಮೈಸ್ ಇಲ್ಲದೆ ಅದ್ದೂರಿಯಾಗಿ ಬೃಂದಾವಿಹಾರಿಯನ್ನು ತೆರೆಗೆ ತರುತ್ತಿದ್ದಾರೆ. ಶ್ರೀನಿವಾಸ್ ರಾಜು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ, ಕೇವಲ ಒಂದು ಲವ್ ಸ್ಟೋರಿ ಮಾತ್ರವಲ್ಲ, ಇದೊಂದು ವಿಶುವಲ್ ಟ್ರೀಟ್ ಆಗಿರಲಿದೆ ಎಂಬುದು ಸಾಂಗ್ ನೋಡಿದವರಿಗೇ ಅರ್ಥವಾಗುತ್ತಿದೆ.

ಹಿರಿಯ ಕಲಾವಿದರ ದಂಡೇ ಇರುವ ಈ ಚಿತ್ರದಲ್ಲಿ ಗಣೇಶ್ ಅವರ ವಿಭಿನ್ನ ಮ್ಯಾನರಿಸಂ ಹೈಲೈಟ್ ಆಗಲಿದೆ. ಈ ಹಾಡಿನ ಯಶಸ್ಸು ಚಿತ್ರದ ಪ್ರಮೋಷನ್‌ಗೆ ಭರ್ಜರಿ ಕಿಕ್ ನೀಡಿದ್ದು, ಪ್ರೇಮಿಗಳ ಲೋಕದಲ್ಲಿ ಈ ಹಾಡು ಈಗಿನ ನ್ಯಾಷನಲ್ ಆಂಥೆಮ್ ಆಗಿ ಬದಲಾಗಿದೆ. ಬೃಂದಾವಿಹಾರಿಯ ಈ ಗುಂಗು ಸದ್ಯಕ್ಕಂತೂ ಇಳಿಯುವ ಲಕ್ಷಣವಿಲ್ಲ. ಗಣೇಶ್ ಅವರ 20 ವರ್ಷಗಳ ಸಿನಿಸಂಚಾರಕ್ಕೆ ಈ ಚಿತ್ರ ಮತ್ತು ಈ ಹಾಡು ಒಂದು ದೊಡ್ಡ ಮೈಲಿಗಲ್ಲಾಗುವುದರಲ್ಲಿ ಅನುಮಾನವೇ ಇಲ್ಲ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version