ಕನ್ನಡದ ‘ರಜನಿ’ ಚಿತ್ರದಲ್ಲಿ ವಿಲನ್ ಆಗಿದ್ದ ಖ್ಯಾತ ನಟ ಮುಕುಲ್ ದೇವ್ ನಿಧನ

Untitled design 2025 05 24t205148.187

ಮುಂಬೈ: ಬಾಲಿವುಡ್‌ನ ಖ್ಯಾತ ನಟ ಮುಕುಲ್ ದೇವ್ (54) ಅವರು ಶನಿವಾರ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಉಪೇಂದ್ರ ಅವರ ಜೊತೆ ‘ರಜನಿ’ ಚಿತ್ರದಲ್ಲಿ ಖಳನಟನಾಗಿ ಗಮನ ಸೆಳೆದಿದ್ದ ಮುಕುಲ್ ದೇವ್, ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಛಾಪು ಮೂಡಿಸಿದ್ದರು. ಅವರ ಅಕಾಲಿಕ ನಿಧನ ಸಿನಿಮಾರಂಗಕ್ಕೆ ಆಘಾತವನ್ನುಂಟು ಮಾಡಿದೆ.

ಕಳೆದ ಕೆಲ ದಿನಗಳಿಂದ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲದೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ ಎಂದು ಸನ್ ಆಫ್ ಸರ್ದಾರ್ ಚಿತ್ರದ ವೇಳೆ ಅವರೊಂದಿಗೆ ಕೆಲಸ ಮಾಡಿದ ವಿಂದು ದಾರಾ ಸಿಂಗ್ ಮಾಹಿತಿ ನೀಡಿದ್ದಾರೆ.

ಮುಕುಲ್ ದೇವ್ ಅವರು ಬಾಲಿವುಡ್‌ನ ‘ಸನ್ ಆಫ್ ಸರ್ದಾರ್’, ‘ಆ‌ರ್… ರಾಜ್‌ಕುಮಾರ್’, ‘ಜೈ ಹೋ’ ಮತ್ತು ‘ದಿಲ್ಲಿವಾಲಿ ಜಾಲಿಮ್ ಗರ್ಲ್‌ಫ್ರೆಂಡ್’ ಚಿತ್ರಗಳಲ್ಲಿ ತಮ್ಮ ಬಹುಮುಖ ಅಭಿನಯದ ಮೂಲಕ ಗುರುತಿಸಿಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ 2007ರಲ್ಲಿ ಬಿಡುಗಡೆಯಾದ ‘ರಜನಿ’ ಚಿತ್ರದಲ್ಲಿ ಉಪೇಂದ್ರ ಜೊತೆಗಿನ ಅವರ ಖಳನಾಯಕನ ಪಾತ್ರವು ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ಜೀವಂತವಾಗಿದೆ.

ಮುಕುಲ್ ದೇವ್ ಅವರು ಖ್ಯಾತ ನಟ ಹಾಗೂ ಮಾಡೆಲ್ ರಾಹುಲ್ ದೇವ್ ಅವರ ಸಹೋದರರಾಗಿದ್ದರು. ಇಬ್ಬರೂ ಸಹೋದರರು ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಚಿತ್ರರಂಗದಲ್ಲಿ ಗುರುತು ಮೂಡಿಸಿದ್ದರು. ಮುಕುಲ್ ದೇವ್ ಅವರು ತಮ್ಮ ವೃತ್ತಿಜೀವನವನ್ನು ಮಾಡೆಲಿಂಗ್‌ನಿಂದ ಆರಂಭಿಸಿ, ನಂತರ ಸಿನಿಮಾ ಮತ್ತು ಟೆಲಿವಿಷನ್ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು.

Exit mobile version