ಬೆಂಗಳೂರು, ಡಿಸೆಂಬರ್ 6, 2025: ಇತ್ತೀಚೆಗೆ ನಡೆದ ಅಂಧರ ಮಹಿಳಾ ವಿಶ್ವಕಪ್ (Blind Women’s Cricket World Cup) ಟೂರ್ನಿಯಲ್ಲಿ ಐತಿಹಾಸಿಕ ವಿಜಯ ಸಾಧಿಸಿ, ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ (Indian Blind Women’s Cricket Team) ಆಟಗಾರ್ತಿಯರಿಗೆ ಸ್ಯಾಂಡಲ್‌ವುಡ್ ದಿಗ್ಗಜ, ಡಾ. ರಾಜ್‌ಕುಮಾರ್ (Dr. Rajkumar) ಅವರ ನಿವಾಸ ‘ದೊಡ್ಮನೆ’ಯಲ್ಲಿ ಅಭೂತಪೂರ್ವವಾಗಿ ಸ್ವಾಗತಿಸಿ, ಸನ್ಮಾನಿಸಲಾಯಿತು.
ಶನಿವಾರ ಬೆಂಗಳೂರಿನಲ್ಲಿರುವ ಡಾ. ರಾಜ್‌ಕುಮಾರ್ ಅವರ ನಿವಾಸಕ್ಕೆ ಬಂದಿದ್ದ ವಿಶ್ವವಿಜೇತ ತಂಡವನ್ನು ರಾಜಕುಮಾರ್ ಕುಟುಂಬದ ಸದಸ್ಯರಾದ ನಟ ರಾಘವೇಂದ್ರ ರಾಜಕುಮಾರ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಯುವ ನಟ ಯುವ ರಾಜಕುಮಾರ್ ಅವರು ಅತ್ಯಂತ ಪ್ರೀತಿ, ಗೌರವ ಹಾಗೂ ಆತ್ಮೀಯತೆಯಿಂದ ಬರಮಾಡಿಕೊಂಡರು.
ಸಾಧಕಿಯರಿಗೆ ಸಿಹಿ ಹಂಚಿ, ಸಾಂಪ್ರದಾಯಿಕ ಶಾಲು ಹೊದಿಸಿ ಸನ್ಮಾನಿಸುವ ಮೂಲಕ ರಾಜ್ ಕುಟುಂಬದ ಸದಸ್ಯರು ಆಟಗಾರ್ತಿಯರ ಐತಿಹಾಸಿಕ ಸಾಧನೆಯನ್ನು ಕೊಂಡಾಡಿದರು. ಕ್ರೀಡಾಪಟುಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದ ರಾಘವೇಂದ್ರ ರಾಜಕುಮಾರ್ ಅವರು, ನಿಮ್ಮ ಸಾಧನೆ ಕೇವಲ ಕ್ರಿಕೆಟ್‌ಗೆ ಸೀಮಿತವಲ್ಲ. ಇದು ದೇಶದ ಪ್ರತಿಯೊಬ್ಬರಿಗೂ ಸ್ಫೂರ್ತಿ. ನಿಮ್ಮ ಹೋರಾಟದ ಮನೋಭಾವ ಮತ್ತು ಸಾಧನೆಯ ಹಾದಿ ನಮ್ಮೆಲ್ಲರಿಗೂ ಆದರ್ಶ. ರಾಜ್‌ಕುಮಾರ್ ಕುಟುಂಬವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಆಟಗಾರ್ತಿಯರೊಂದಿಗೆ ಬಹಳ ಕಾಲ ಮಾತನಾಡಿ ಅವರ ಯಶಸ್ಸಿನ ಕಥೆಗಳನ್ನು ಕೇಳಿದರು. ಯುವ ರಾಜಕುಮಾರ್ ಅವರು ತಂಡಕ್ಕೆ ಶುಭ ಹಾರೈಕೆಗಳನ್ನು ತಿಳಿಸಿದರು.
ವಿಶ್ವಕಪ್ ಗೆದ್ದ ಹುಮ್ಮಸ್ಸಿನಲ್ಲಿರುವ ಭಾರತೀಯ ತಂಡವು ಈ ಗೆಲುವಿನ ನಂತರ ದೇಶದ ಅತ್ಯುನ್ನತ ಗಣ್ಯರಿಂದ ನಿರಂತರವಾಗಿ ಪ್ರಶಂಸೆಗಳನ್ನು ಸ್ವೀಕರಿಸುತ್ತಿದೆ. ಮೊದಲಿಗೆ, ದೆಹಲಿಗೆ ಪ್ರಯಾಣಿಸಿದ್ದ ತಂಡವು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಅವರಿಂದ ಶುಭ ಹಾರೈಕೆ ಮತ್ತು ಪ್ರಶಂಸೆಗಳನ್ನು ಪಡೆದಿತ್ತು. ಅದಕ್ಕೂ ಮೊದಲು, ತಂಡದ ಕರ್ನಾಟಕದ ಆಟಗಾರ್ತಿಯರು ಸೇರಿದಂತೆ ಇಡೀ ತಂಡವನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿಯಾಗಿ ಸರ್ಕಾರದ ವತಿಯಿಂದ ಅಭಿನಂದಿಸಿ, ಸೂಕ್ತ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದ್ದರು.
ಈ ಸರಣಿ ಸನ್ಮಾನಗಳ ಮುಂದುವರಿದ ಭಾಗವಾಗಿ, ಕನ್ನಡದ ಪ್ರಸಿದ್ದ ನಟ ಡಾ. ರಾಜ್‌ಕುಮಾರ್ ಅವರ ಮನೆಯಲ್ಲಿ ಸಿಕ್ಕ ಗೌರವವು ಆಟಗಾರ್ತಿಯರ ಸಂತಸವನ್ನು ಹೆಚ್ಚುಗೊಳಿಸಿದೆ. ಕರ್ನಾಟಕದಿಂದ ಅಂಧ ಕ್ರಿಕೆಟ್‌ನಲ್ಲಿ ಸಾಕಷ್ಟು ಪ್ರತಿಭೆಗಳು ಬೆಳೆದಿರುವ ಹಿನ್ನೆಲೆಯಲ್ಲಿ, ‘ದೊಡ್ಮನೆ’ಯ ಈ ಆತಿಥ್ಯ ವಿಶೇಷ ಮಹತ್ವ ಪಡೆದಿದೆ.
ಈ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ (Cricket Association for the Blind in India – CABI) ಅಧ್ಯಕ್ಷರಾದ ಮಹಾಂತೇಶ್ ಕಿವಡಸಣ್ಣವರ್ ಅವರು ಉಪಸ್ಥಿತರಿದ್ದರು. ರಾಜಕುಮಾರ್ ಕುಟುಂಬದ ಸದಸ್ಯರ ಸರಳತೆ ಮತ್ತು ಅವರು ತೋರಿದ ಪ್ರೀತಿಯ ಆತಿಥ್ಯವನ್ನು ಕಂಡು ಮಹಾಂತೇಶ್ ಅವರು ಭಾವುಕರಾದರು.
ಡಾ. ರಾಜ್‌ಕುಮಾರ್ ಅವರ ಕುಟುಂಬವು ಕಲೆಗೆ ಮಾತ್ರವಲ್ಲದೆ, ಕ್ರೀಡೆ ಮತ್ತು ಸಾಮಾಜಿಕ ಕಳಕಳಿಗೂ ಸದಾ ಮುಂಚೂಣಿಯಲ್ಲಿರುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವಿಶ್ವಕಪ್ ಗೆದ್ದ ನಮ್ಮ ಹೆಣ್ಣುಮಕ್ಕಳನ್ನು ತಮ್ಮ ಮನೆಗೇ ಆಹ್ವಾನಿಸಿ, ವೈಯಕ್ತಿಕವಾಗಿ ಪ್ರೀತಿಯಿಂದ ಸನ್ಮಾನಿಸಿರುವುದು ನಮ್ಮ ಸಂಸ್ಥೆಗೆ ಮತ್ತು ಅಂಧ ಕ್ರಿಕೆಟ್ ಸಮುದಾಯಕ್ಕೆ ಸಂದ ದೊಡ್ಡ ಗೌರವ. ಇದು ನಮಗೆ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ನೀಡುತ್ತದೆ ಎಂದು ಮಹಾಂತೇಶ್ ಕಿವಡಸಣ್ಣವರ್ ಅವರು ಸಂತಸ ವ್ಯಕ್ತಪಡಿಸಿದರು.





