ಬಿಗ್ ಬಾಸ್ ತಾರೆಯ ಮನೆಯಲ್ಲಿ ಕಳ್ಳತನ: ₹4.5 ಲಕ್ಷ ದೋಚಿ ಆರೋಪಿ ಎಸ್ಕೇಪ್

Untitled design 2025 07 13t233005.909

ಇತ್ತೀಚಿನ ದಿನಗಳಲ್ಲಿ ಕಳ್ಳತನ ಮತ್ತು ವಂಚನೆ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಆಶ್ಚರ್ಯಕರ ಸಂಗತಿಯೆಂದರೆ, ಸಾಮಾನ್ಯರ ಮನೆಗಳಷ್ಟೇ ಅಲ್ಲ, ಸೆಲೆಬ್ರಿಟಿಗಳ ಐಶಾರಾಮಿ ಬಂಗಲೆಗಳೂ ಕಳ್ಳರ ಗುರಿಯಾಗಿರುತ್ತಿವೆ. ಭದ್ರತಾ ವ್ಯವಸ್ಥೆಗಳಿದ್ದರೂ, ಕಳ್ಳರು ಧೈರ್ಯವಾಗಿ ಒಳನುಗ್ಗಿ, ದುಬಾರಿ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದಾರೆ. ಇದೀಗ ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಶಿಶ್ ಕಪೂರ್ ಅವರ ಮನೆಯಲ್ಲಿ ದೊಡ್ಡ ಕಳ್ಳತನ ನಡೆದಿದೆ. ಅವರ ಮನೆಯ ಕೆಲಸಗಾರನೇ 4.5 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾನೆ.

ಹಿಂದಿಯ ಬಿಗ್ ಬಾಸ್‌ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಕಶಿಶ್ ಕಪೂರ್‌ರವರ ಮನೆಯಲ್ಲಿ ₹4.5 ಲಕ್ಷ ಮೌಲ್ಯದ ಹಣ ಕಳ್ಳತನವಾಗಿದೆ. ಕಶಿಶ್ ಕಪೂರ್, ‘MTV ಸ್ಪಿಟ್ಸ್ ವಿಲ್ಲಾ’ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದ ಜನಪ್ರಿಯ ತಾರೆ. ಆದರೆ, ಇಂಥ ಖ್ಯಾತ ವ್ಯಕ್ತಿಯ ಮನೆಯಲ್ಲೂ ಕಳ್ಳತನ ನಡೆದಿರುವುದು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ.

ಕಶಿಶ್ ಕಪೂರ್‌ರ ದೂರಿನ ಪ್ರಕಾರ, ಆರೋಪಿಯೆಂದು ಗುರುತಿಸಲಾಗಿರುವ ಸಚಿನ್ ಕುಮಾರ್ ಚೌಧರಿ ಕಳೆದ ಐದು ತಿಂಗಳಿಂದ ಅವರ ಮನೆಯಲ್ಲಿ ಕೆಲಸಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಅಂಧೇರಿ ಪಶ್ಚಿಮದ ಆಜಾದ್ ನಗರದ ವೀರ್ ದೇಸಾಯಿ ರಸ್ತೆಯಲ್ಲಿರುವ ಕಶಿಶ್‌ರ ಮನೆಯ ಕಪಾಟಿನಲ್ಲಿ ₹7 ಲಕ್ಷ ಹಣವನ್ನು ಇರಿಸಲಾಗಿತ್ತು. “ನನ್ನ ತಾಯಿಗೆ ಹಣ ಕಳುಹಿಸಲು ತಿಜೋರಿಯಲ್ಲಿ ₹7 ಲಕ್ಷ ಇಟ್ಟಿದ್ದೆ. ಆದರೆ, ಒಂದು ದಿನ ಕಪಾಟು ತೆರೆದಾಗ ಕೇವಲ ₹2.5 ಲಕ್ಷ ಮಾತ್ರ ಉಳಿದಿತ್ತು. ₹4.5 ಲಕ್ಷ ಹಣ ಕಳ್ಳತನವಾಗಿತ್ತು,” ಎಂದು ಕಶಿಶ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಕಳ್ಳತನ ನಡೆದ ನಂತರ ಸಚಿನ್ ಮನೆಯಿಂದ ಕಾಣೆಯಾಗಿದ್ದಾನೆ. “ನಂಬಿದ ವ್ಯಕ್ತಿಯೇ ಮೋಸ ಮಾಡಿದ್ದಾನೆ. ಇದು ನನಗೆ ತೀವ್ರ ನೋವುಂಟು ಮಾಡಿದೆ. ಪೊಲೀಸರು ಶೀಘ್ರವೇ ಆರೋಪಿಯನ್ನು ಪತ್ತೆ ಮಾಡುತ್ತಾರೆ ಎಂಬ ವಿಶ್ವಾಸವಿದೆ,” ಎಂದು ಕಶಿಶ್ ಭಾವುಕರಾಗಿ ಹೇಳಿದ್ದಾರೆ. ಎಂಬೋಲಿ ಪೊಲೀಸರು ಈ ಪ್ರಕರಣವನ್ನು ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ದಾಖಲಿಸಿಕೊಂಡಿದ್ದು, ಆರೋಪಿ ಸಚಿನ್‌ನನ್ನು ಹಿಡಿಯಲು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ತನಿಖೆಯ ವೇಳೆ ₹50,000 ಹಣ ಪತ್ತೆಯಾಗಿದ್ದು, ಉಳಿದ ಹಣ ಮತ್ತು ಆರೋಪಿಯನ್ನು ಹುಡುಕಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಕಶಿಶ್ ಕಪೂರ್ ಹಿಂದಿ, ಇಂಗ್ಲೀಷ್, ಸಂಸ್ಕೃತ ಮತ್ತು ಭೋಜಪುರಿ ಭಾಷೆಗಳನ್ನು ಬಲ್ಲವರು. ಪ್ರಾಣಿಗಳೆಂದರೆ ಇವರಿಗೆ ಅಪಾರ ಪ್ರೀತಿ. ಕುಣಿಯುವುದು, ದೇಶ ಸುತ್ತುವುದು ಇವರ ನೆಚ್ಚಿನ ಹವ್ಯಾಸಗಳು. ಇನ್‌ಸ್ಟಾಗ್ರಾಮ್‌ನಲ್ಲಿ 1.2 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಕಶಿಶ್, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ.

Exit mobile version