ಚೆನ್ನೈ: ನಟ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ವಿವಾಹ ಆರತಕ್ಷತೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಭುಗಿಲೆದ್ದಿವೆ. ತಮಿಳುನಾಡು ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಈ ಘಟನೆ ವಿಜಯ್‌ಗೆ ಮುಖಭಂಗ ತಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ನಡುವೆ ತ್ರಿಶಾ ಅವರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾರಂಭಿಸಿದ್ದಾರೆ. ಈ ಟ್ರೋಲ್ ವಿರುದ್ಧ ನಟಿ-ರಾಜಕಾರಣಿ ಖುಷ್ಬೂ ಸುಂದರ್ ತ್ರಿಶಾ ಪರವಾಗಿ ಮಾತನಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಟ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ. ಸಂಗೀತಾ ಅವರು ಪತಿಯ ಅಕ್ರಮ ಸಂಬಂಧದ ಆರೋಪ ಮಾಡಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ವಿಜಯ್ ಜೊತೆ ತ್ರಿಶಾ ಹೆಸರು ತಳುಕು ಹಾಕಿಕೊಂಡಿತ್ತು. ಇದರ ಜೊತೆಗೆ ಎಜಿಎಸ್ ನಿರ್ಮಾಪಕರ ಮದುವೆಯಲ್ಲಿ ವಿಜಯ್ ಮತ್ತು ತ್ರಿಶಾ ಒಟ್ಟಿಗೆ ಕಾಣಿಸಿಕೊಂಡಿದ್ದು ವದಂತಿಗಳಿಗೆ ಮತ್ತಷ್ಟು ಬಲ ನೀಡಿತ್ತು.
ಖುಷ್ಬೂ ಸುಂದರ್ ಏನು ಹೇಳಿದ್ದಾರೆ?
ಈ ಎಲ್ಲಾ ವದಂತಿಗಳ ನಡುವೆ ತ್ರಿಶಾ ಬಗ್ಗೆ ಆಗುತ್ತಿರುವ ಚರ್ಚೆ ಮತ್ತು ಹರಡುತ್ತಿರುವ ವದಂತಿಗಳನ್ನು ಗಮನಿಸಿದ ನಟಿ ಖುಷ್ಬೂ ಸುಂದರ್ ಸಂದರ್ಶನವೊಂದರಲ್ಲಿ ತ್ರಿಶಾ ಪರವಾಗಿ ಮಾತನಾಡಿದ್ದಾರೆ.
“ದುರದೃಷ್ಟವಶಾತ್, ನೀವು ಸೀನಿದರೂ ಸಹ ಅದನ್ನು ಬೇರೆಯವರ ಮೇಲೆ ದೂಷಿಸಲು ಬಯಸುವ ಕಾಲದಲ್ಲಿ ನಾವಿದ್ದೇವೆ. ಅವರಿಬ್ಬರ ಬಗ್ಗೆ ನನಗೆ ತಿಳಿದಿರುವಂತೆ, ತ್ರಿಶಾ ನನಗೆ ತುಂಬಾ ಹತ್ತಿರವಾಗಿದ್ದರು. ಅವರು ನಾನು ಭೇಟಿಯಾದ ಅತ್ಯಂತ ಘನತೆವೆತ್ತ ಮಹಿಳೆಯರಲ್ಲಿ ಒಬ್ಬರು ಮತ್ತು ಅತ್ಯಂತ ಸೌಮ್ಯ ಸ್ವಭಾವದವರು.” ಎಂದು ಹೇಳಿದ್ದಾರೆ..
ಇಂಟರ್ನೆಟ್‌ನಲ್ಲಿ ಕುಳಿತು ಟ್ರೋಲ್ ಮಾಡುವವರಿಗೆ ಖುಷ್ಬೂ ಕೌಂಟರ್
“ಇಂಟರ್ನೆಟ್‌ನಲ್ಲಿ ಕುಳಿತು ಬೇರೆಯವರ ಬಗ್ಗೆ ಮಾತನಾಡುವುದು ಕೆಲವರಿಗೆ ಹವ್ಯಾಸವಾಗಿದೆ. ತಮ್ಮ ಸಮಸ್ಯೆಗಳ ಕಡೆ ಗಮನ ಹರಿಸುವ ಬದಲು, ಇತರರ ವೈಯಕ್ತಿಕ ಬದುಕಿನಲ್ಲಿ ತಲೆಹಾಕಿ ಕಾಮೆಂಟ್ ಮಾಡುವುದರಲ್ಲಿ ಸಂತೋಷ ಕಾಣುತ್ತಾರೆ,” ಎಂದು ಕಟುವಾಗಿ ಟೀಕಿಸಿದ್ದಾರೆ.
ಪ್ಯಾಪರಾಜಿಗಳ ವರ್ತನೆಗೂ ಅವರು ಪ್ರತಿಕ್ರಿಯೆ ನೀಡಿದ್ದು, “ಮುಂಬೈನಲ್ಲಿ ನಾವು ನೋಡಿರುವ ಪ್ಯಾಪ್ ಸಂಸ್ಕೃತಿ ಈಗ ಚೆನ್ನೈಗೂ ಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಕಲಾವಿದರ ವೈಯಕ್ತಿಕ ಬದುಕನ್ನು ಗೌರವಿಸುವುದು ಮುಖ್ಯ,” ಎಂದು ಹೇಳಿದ್ದಾರೆ.
ಸಂಗೀತಾ ವಿಚ್ಛೇದನ ಅರ್ಜಿ ಹಿನ್ನೆಲೆ
ಸಂಗೀತಾ ಮತ್ತು ವಿಜಯ್ ಆಗಸ್ಟ್ 1999 ರಲ್ಲಿ ವಿವಾಹವಾಗಿದ್ದರು. ಅವರಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಶಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಅವರು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾಗಿದ್ದರು.
ಸಂಗೀತಾ ಅವರು ತಮ್ಮ ವಿಚ್ಛೇದನ ಅರ್ಜಿಯಲ್ಲಿ ಪತಿಯ ಅಕ್ರಮ ಸಂಬಂಧದ ಆರೋಪ ಮಾಡಿದ್ದಾರೆ. ಇದರ ಜೊತೆಗೆ, ಪ್ರಕರಣವು ಅಂತಿಮ ಇತ್ಯರ್ಥವಾಗುವವರೆಗೆ ಚೆನ್ನೈನ ಕ್ಯಾಸುವಾರಿನಾ ಡ್ರೈವ್‌ನಲ್ಲಿರುವ ದಂಪತಿಗಳ ವೈವಾಹಿಕ ಮನೆಯಲ್ಲಿ ವಾಸಿಸಲು ಅವಕಾಶ ನೀಡುವಂತೆ ಮಧ್ಯಂತರ ಆದೇಶವನ್ನೂ ಕೋರಿದ್ದಾರೆ.
ವದಂತಿಗಳಿಗೆ ಕಾರಣವೇನು?
ವಿಜಯ್ ಮತ್ತು ತ್ರಿಶಾ ಒಟ್ಟಿಗೆ ಕಾಣಿಸಿಕೊಂಡ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಈ ವದಂತಿಗಳು ಹರಡಲಾರಂಭಿಸಿವೆ. ಸಂಗೀತಾ ವಿಚ್ಛೇದನ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಈ ಘಟನೆ ನಡೆದಿರುವುದು ವದಂತಿಗಳಿಗೆ ಮತ್ತಷ್ಟು ಬಲ ನೀಡಿದೆ. ಆದರೆ ಈ ಎರಡೂ ಘಟನೆಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಅಭಿಮಾನಿಗಳ ವಾದವಾಗಿದೆ.
