ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಮತ್ತು ಸಿಎಜಿ (CAG) ವರದಿ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಪಷ್ಟನೆ ನೀಡಿದೆ. ಯೋಜನೆಯ ಅನುಷ್ಠಾನದಲ್ಲಿ ಯಾವುದೇ ಗೋಲ್‌ಮಾಲ್ ಅಥವಾ ಉದ್ದೇಶಪೂರ್ವಕ ಅಕ್ರಮ ನಡೆದಿಲ್ಲ ಎಂದು ಇಲಾಖೆ ಡೇಟಾ ಸಮೇತ ಮಾಹಿತಿ ಬಿಡುಗಡೆ ಮಾಡಿದೆ.
ಇತ್ತೀಚೆಗೆ ಸಿಎಜಿ ವರದಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಕೆಲ ಫಲಾನುಭವಿಗಳ ಖಾತೆಗಳಿಗೆ ಅನರ್ಹ ರೀತಿಯಲ್ಲಿ ಹಣ ಜಮೆಯಾಗಿರುವ ಬಗ್ಗೆ ಉಲ್ಲೇಖಿಸಲಾಗಿತ್ತು. ಅದರಲ್ಲೂ ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಯೋಜನೆಯ ಹಣ ವರ್ಗಾವಣೆಯಾಗಿರುವ ವಿಚಾರ ಪ್ರಮುಖವಾಗಿ ಗಮನ ಸೆಳೆದಿತ್ತು. ಈ ಹಿನ್ನೆಲೆ ಸರ್ಕಾರದ ವಿರುದ್ಧ ಟೀಕೆಗಳು ಕೇಳಿಬಂದಿದ್ದವು.
ಈ ಕುರಿತು ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗೃಹಲಕ್ಷ್ಮಿ ಯೋಜನೆಯ ಒಟ್ಟು 2,88,376 ಫಲಾನುಭವಿಗಳು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದೆ. ಇವರಲ್ಲಿ 1,03,922 ಕುಟುಂಬಗಳಲ್ಲಿ ಮನೆಯ ಯಜಮಾನಿಯ ಹೆಸರನ್ನು ಬದಲಾಯಿಸಿ ಹೊಸದಾಗಿ ಮರುನೋಂದಣಿ ಮಾಡಲಾಗಿದೆ. ಹೀಗಾಗಿ ಯೋಜನೆಯ ಪ್ರಯೋಜನವು ಕುಟುಂಬದಲ್ಲೇ ಮುಂದುವರಿದಿದೆ ಎಂದು ಇಲಾಖೆ ಹೇಳಿದೆ.
ಇನ್ನೂ 1,08,755 ಮೃತ ಫಲಾನುಭವಿಗಳ ಮರಣದ ವಿವರಗಳು ಸಮಯಕ್ಕೆ ಸರಿಯಾಗಿ ಇಲಾಖೆಗೆ ಲಭ್ಯವಾಗಿಲ್ಲ. ಈ ಕಾರಣದಿಂದ ಕೆಲ ಖಾತೆಗಳಿಗೆ ಹಣ ಜಮೆಯಾಗಿರುವ ಸಾಧ್ಯತೆ ಇದೆ. ಇದು ವ್ಯವಸ್ಥೆಯ ತಾಂತ್ರಿಕ ಪ್ರಕ್ರಿಯೆಯ ಭಾಗವಾಗಿದ್ದು, ಯಾವುದೇ ರೀತಿಯ ಅಕ್ರಮ ಅಥವಾ ವಂಚನೆ ಅಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇಲಾಖೆಯ ಮಾಹಿತಿ ಪ್ರಕಾರ, ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (Aadhaar Based Payment System – ABPS) ಮೂಲಕ ಹಣ ವರ್ಗಾವಣೆಯಾಗುತ್ತದೆ. ಈ ವ್ಯವಸ್ಥೆಯಲ್ಲಿ ಬ್ಯಾಂಕ್ ಖಾತೆ ಮಾಹಿತಿಯ ಆಧಾರದ ಮೇಲೆ ಪಾವತಿಗಳು ನಡೆಯುತ್ತವೆ. ಮೃತ ಫಲಾನುಭವಿಗಳ ಖಾತೆಗಳಿಗೆ ಒಟ್ಟು ಸುಮಾರು ₹115 ಕೋಟಿ ಹಣ ಜಮೆಯಾಗಿದೆ. ಈ ಪೈಕಿ ಈಗಾಗಲೇ ₹15.24 ಕೋಟಿ ಹಣವನ್ನು ಮರುಪಡೆಯಲಾಗಿದೆ. ಉಳಿದ ಮೊತ್ತವನ್ನು ವಸೂಲಿ ಮಾಡುವ ಪ್ರಕ್ರಿಯೆ ಮುಂದುವರಿದಿದೆ ಎಂದು ಇಲಾಖೆ ತಿಳಿಸಿದೆ.
ಇದರ ಜೊತೆಗೆ ಕೆಲ ಸಂದರ್ಭಗಳಲ್ಲಿ ಬ್ಯಾಂಕುಗಳ ತಾಂತ್ರಿಕ ದೋಷದಿಂದ ತಪ್ಪಾದ ಖಾತೆ ವಿವರಗಳು ದಾಖಲಾಗಿರಬಹುದು ಎಂದು ಇಲಾಖೆ ಹೇಳಿದೆ. ಕೆಲ ಕುಟುಂಬಗಳಲ್ಲಿ ಜಂಟಿ ಬ್ಯಾಂಕ್ ಖಾತೆಗಳಿರುವ ಕಾರಣ ಒಂದೇ ಖಾತೆಗೆ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಫಲಾನುಭವಿಗಳ ಸೌಲಭ್ಯ ಮೊತ್ತ ಜಮೆಯಾಗಿರುವ ಸಾಧ್ಯತೆಯೂ ಇದೆ.
ಅತ್ತೆ-ಸೊಸೆ, ತಾಯಿ-ಮಗಳು ಸೇರಿದಂತೆ ಒಂದೇ ಕುಟುಂಬದ ಸದಸ್ಯರು ಪ್ರತ್ಯೇಕ ಪಡಿತರ ಚೀಟಿಗಳನ್ನು ಹೊಂದಿದ್ದರೂ, ಜಂಟಿ ಬ್ಯಾಂಕ್ ಖಾತೆ ಬಳಸುತ್ತಿರುವ ಸಂದರ್ಭಗಳಲ್ಲಿ ಎರಡೂ ಫಲಾನುಭವಿಗಳ ಹಣ ಒಂದೇ ಖಾತೆಗೆ ಜಮೆಯಾಗಿರಬಹುದು. ಇದನ್ನು ಅಕ್ರಮ ಅಥವಾ ವಂಚನೆ ಎಂದು ಪರಿಗಣಿಸುವುದು ಸರಿಯಲ್ಲ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯು ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸುತ್ತಿದೆ. ಯೋಜನೆಯ ಅನುಷ್ಠಾನದಲ್ಲಿ ಕಂಡುಬಂದಿರುವ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಫಲಾನುಭವಿಗಳ ಮಾಹಿತಿಯನ್ನು ನಿರಂತರವಾಗಿ ನವೀಕರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
